ದಾವಣಗೆರೆ, ಅ.3- ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಪುತ್ರ ರಾಘವೇಂದ್ರ ಹಾಗೂ ರಾಷ್ಟ್ರನಾಯಕರ ವಿರುದ್ಧ ಆರೋಪ ಮಾಡಿಲ್ಲ ಎಂದು ಹೇಳುವುದಾದರೆ, ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಅವರು ನಗರ ದೇವತೆ ದುರ್ಗಾಂಬಿಕ ದೇವಸ್ಥಾನಕ್ಕೆ ಬಂದು ಗಂಟೆ ಹೊಡೆಯಲಿ ಎಂದು ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಯಶವಂತ ರಾವ್ ಜಾಧವ್ ಸವಾಲೆಸೆದರು.
ಇಂದಿಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ ಅವರು ನಿಮ್ಮ ಹಾಗೆ ಹಾದಿಬೀದಿಯಲ್ಲಿ ಮಾತನಾಡಿಲ್ಲ. ರಾಷ್ಟ್ರನಾಯಕರಿಗೆ ನಡೆದಿದ್ದನ್ನೆಲ್ಲಾ ನೇರವಾಗಿ ಹೇಳಿ ಬಂದಿದ್ದಾರೆ. ಹಾದಿ ಬೀದಿಯಲ್ಲಿ ಮಾತನಾಡಿದ್ದಕ್ಕೇ ನೋಟೀಸ್ ಬಂದಿದೆಯೇ ವಿನಃ ನಮಗಲ್ಲ ಎಂದು ರೇಣುಕಚಾರ್ಯ ವಿರುದ್ಧ ಹರಿಹಾಯ್ದರು.
ಲೋಕಸಭಾ ಚುನಾವಣೆ ಸಂದರ್ಭದಲ್ಲಿ ನಾಲ್ಕು ಬಾರಿ ಎಸ್.ಎಸ್. ಮಲ್ಲಿಕಾರ್ಜುನ್ ಅವರ ಮನೆ ಬಾಗಿಲಿಗೆ ಯಾರು ಹೋಗಿದ್ದಾರೆ ಎಂಬುದು ಜನರಿಗೆ ತಿಳಿದಿದೆ. ಇನ್ನಾದರೂ ನಾಟಕವಾಡುವುದನ್ನು ನಿಲ್ಲಿಸಿ ಎಂದು ತಿರುಗೇಟು ನೀಡಿದರು.
ನಾನು ಬಿ.ಎಸ್. ಯಡಿಯೂರಪ್ಪ ಅವರ ಮಾನಸ ಪುತ್ರ ಎನ್ನುವ ರೇಣುಕಾಚಾರ್ಯ, ಈ ಹಿಂದೆ ಯಡಿಯೂರಪ್ಪ ಹಾಗೂ ಅವರ ಪುತ್ರರ ವಿರುದ್ಧವೇ ಹೇಳಿಕೆ ನೀಡಿದ್ದರು. ಬಿ.ಎಲ್. ಸಂತೋಷ್, ನಳಿನ್ ಕುಮಾರ್ ಕಟೀಲ್ ಸೇರಿದಂತೆ ರಾಜ್ಯ, ರಾಷ್ಟ್ರ ನಾಯಕರ ವಿರುದ್ಧ ಮಾತನಾಡಿದ್ದರು. ಅವರಿಗೆ ಇನ್ನೆಲ್ಲಿ ನೈತಿಕತೆ ಇದೆಯೇ? ಎಂದು ಪ್ರಶ್ನಿಸಿದರು.
ಜಿ.ಎಂ. ಸಿದ್ದೇಶ್ವರರ ವಿರುದ್ಧ ಮಾತನಾಡುವ ಮಾಜಿ ಸಚಿವ ಎಸ್.ಎ. ರವೀಂದ್ರನಾಥ್, ಶಿವಯೋಗಿಸ್ವಾಮಿ ಎರಡು ವರ್ಷ ಪಕ್ಷದ ಕಚೇರಿಗೇ ಬರಲಿಲ್ಲ. ಯಡಿಯೂರಪ್ಪ ವಿರುದ್ಧವೇ ರಾಯಣ್ಣ ಬ್ರಿಗೇಡ್ ಕಟ್ಟಲು ಮುಂದಾದವರು ನೀವು. ನಾವು ಸ್ಥಾನ ಸಿಕ್ಕಿದರೂ ಸಿಗದಿದ್ದರೂ ಪಕ್ಷದ ನಾಯಕರ ಬಗ್ಗೆ ನಿಮ್ಮಂತೆ ಹೇಳಿಕೆ ನೀಡಿಲ್ಲ ಎಂದು ಕಿಡಿಕಾರಿದರು.
ಶಾಸಕ ಬಿ.ಪಿ. ಹರೀಶ್ ಮಾತನಾಡಿ, ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಗೌರವಯುತವಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಹಿಂದೆ ಯಡಿಯೂರಪ್ಪ ವಿರುದ್ಧ ಆರೋಪ ಬಂದಾಗ ಸಿದ್ದರಾಮಯ್ಯ ಅವರು ರಾಜೀನಾಮೆಗೆ ಒತ್ತಾಯಿಸಿದ್ದರು. ಬಿಎಸ್ವೈ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ್ದರು. ಆದರೆ ಸಿದ್ಧರಾಮಯ್ಯ ಅವರು ರಾಜೀನಾಮೆ ವಿಚಾರದಲ್ಲಿ ಬಂಡತನ ತೋರುತ್ತಿದ್ದಾರೆಂದು ದೂರಿದರು.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿ ಕಾರಕ್ಕೆ ಬಂದು 17 ತಿಂಗಳು ಕಳೆದರೂ ಬಡವರು, ಹಿಂದುಳಿದವರು, ವಿದ್ಯಾರ್ಥಿ ಗಳಿಗೆ ವಿವಿಧ ನಿಗಮ, ಮಂಡಳಿಗಳಿಂದ ಸೌಲಭ್ಯಕ್ಕೆ ನಯಾಪೈಸೆಯನ್ನೂ ಸಹ ಬಿಡುಗಡೆ ಮಾಡಿಲ್ಲ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ವೀರೇಶ್ ಹನಗವಾಡಿ, ಬಿ.ಎಸ್. ಜಗದೀಶ್, ಎ.ವೈ. ಪ್ರಕಾಶ್, ಅಣಬೇರು ಜೀವನಮೂರ್ತಿ, ಹನುಮಂತಪ್ಪ, ಯಶೋಧ ಹೆಗ್ಗಪ್ಪ, ಎಂ.ಆರ್. ಮಹೇಶ್ ಉಪಸ್ಥಿತರಿದ್ದರು.