ಮಲೇಬೆನ್ನೂರು, ಅ. 3 – ಮಹಾಲಯ ಅಮಾವಾಸ್ಯೆ ಪ್ರಯುಕ್ತ ಸುಕ್ಷೇತ್ರ ಉಕ್ಕಡಗಾತ್ರಿಯಲ್ಲಿ ಪವಾಡ ಪುರುಷ ಶ್ರೀ ಗುರು ಕರಿಬಸವೇಶ್ವರ ಅಜ್ಜಯ್ಯನ ದರ್ಶನ ಪಡೆಯಲು ಮಂಗಳವಾರ ರಾತ್ರಿಯಿಂದಲೇ ಸಾವಿರಾರು ಭಕ್ತರು ಜಮಾಗೊಂಡಿದ್ದರು.
ಭಕ್ತರು ತುಂಗಭದ್ರಾ ನದಿಯ ಸ್ನಾನ ಘಟ್ಟದಲ್ಲಿ ಪುಣ್ಯ ಸ್ನಾನ ಮಾಡಿದ ನಂತರ ವಿಶಿಷ್ಟ ಪೂಜೆ, ಪುನಸ್ಕಾರಗಳನ್ನು ಮಾಡಿದರು.
ನಿಂಬೆ ಹಣ್ಣುಗಳ ರಾಶಿ ಮೇಲೆ ಗಂಡು, ಹೆಣ್ಣು ಎನ್ನದೆ ದಿಂಡುರುಳು ಸೇವೆ ಸಲ್ಲಿಸಿದರು.
ಭೂತ ಪ್ರೇತ ಆವಾಹನೆ ಆದವರು ಅಜ್ಜಯ್ಯನ ಸನ್ನಿಧಿಯ ಅಣತಿ ದೂರದಲ್ಲಿ `ಅಜ್ಜಯ್ಯ ಬಿಡು, ನನ್ನ ಕಾಡಬೇಡ’ ಎಂದು ಚೀರುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಭೂತ, ಪ್ರೇತ ನಿವಾರಣೆ, ವ್ಯಾಜ್ಯ, ಕಂಕಣ ಭಾಗ್ಯ, ಸಂತಾನ ಭಾಗ್ಯ, ಉದ್ಯೋಗ, ರೋಗ ರುಜಿನಗಳ ಪರಿಹಾರಕ ಅಜ್ಜಯ್ಯ ಎಂಬ ನಂಬಿಕೆಯಿಂದ ಪರಿಹಾರ ಕಂಡವರು ಬಂದು ಹರಕೆ ತೀರಿಸಿದರು. ಕೆಲವರು ಮುಡಿ ತೆಗೆಸಿದರು.
ಹೊರ ರಾಜ್ಯಗಳಿಂದಲೂ ಭಕ್ತರು ಉಕ್ಕಡಗಾತ್ರಿಗೆ ಬಂದು ಅಜ್ಯಯ್ಯನ ದರ್ಶನ ಪಡೆದರು.
ಭಕ್ತರಿಗೆ ತಂಗಲು ವಸತಿ ಗೃಹಗಳಲ್ಲಿ ವ್ಯವಸ್ಥೆ ಮತ್ತು ಊಟದ ವ್ಯವಸ್ಥೆಯನ್ನು ದೇವಸ್ಥಾನದ ಟ್ರಸ್ಟ್ ವತಿಯಿಂದ ಮಾಡಲಾಗಿತ್ತು. ಅಜ್ಜಯ್ಯನ ಗದ್ದಿಗೆಗೆ ಅಭಿಷೇಕ ಮತ್ತು ವಿಶೇಷ ಪೂಜಾಲಂಕಾರ ಮಾಡಲಾಗಿತ್ತು.