ದಾವಣಗೆರೆ, ಅ.3- ವರದಕ್ಷಿಣಿ ಕಿರುಕುಳ ನೀಡಿದ ಆರೋಪಿಗೆ ಇಲ್ಲಿನ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 25 ಸಾವಿರ ರೂ. ದಂಡ ವಿಧಿಸಿ ಇಂದು ತೀರ್ಪು ನೀಡಿದೆ.
ತನ್ನ ಮಗಳನ್ನು ಪ್ರೀತಿಸಿ ಮದುವೆಯಾಗಿದ್ದ ಚನ್ನಗಿರಿ ಗ್ರಾಮದ ಯೋಗೇಶ್ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡುತ್ತಾ, ವರದಕ್ಷಿಣೆ ತರುವಂತೆ ಕಿರುಕುಳ ನೀಡುತ್ತಿದ್ದ. ಇದರಿಂದ ಬೇಸತ್ತು ಮಗಳು ಸುಮಿತ್ರ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆರೋಪಿಸಿ ಇಮಾನಮಟ್ಟಿಯ ಹನುಮಂತ ಭೋವಿ ಅವರು ಚನ್ನಗಿರಿ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ತನಿಖಾಧಿಕಾರಿಯಾದ ದಾವಣಗೆರೆ ಗ್ರಾಮಾಂತರ ವಿಭಾಗದ ಪೊಲೀಸ್ ಉಪಾಧೀಕ್ಷಕ ಚಿಕ್ಕಸ್ವಾಮಿ ತನಿಖೆ ನಡೆಸಿ ಆರೋಪಿತರ ವಿರುದ್ಧ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಮಂಜಪ್ಪ ಹನುಮಂತಪ್ಪ ಅಣ್ಮಯ್ಯನವರ್, ಆರೋಪ ಸಾಬೀತಾದ್ದರಿಂದ 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ, 25 ಸಾವಿರ ರೂ. ದಂಡ ವಿಧಿಸಿದ್ದು, ದಂಡದ ಮೊತ್ತದಲ್ಲಿ 20 ಸಾವಿರ ರೂ. ಸಂತ್ರಸ್ಥೆ ಕುಟುಂಬಕ್ಕೂ, 5 ಸಾವಿರ ರೂ. ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳುವಂತೆಯೂ ಆದೇಶಿಸಿದ್ದಾರೆ. ಪಿರ್ಯಾದಿ ಪರವಾಗಿ ಸರ್ಕಾರಿ ವಕೀಲರಾದ ಕೆ.ಎಸ್ ಸತೀಶ್ ಕುಮಾರ್ ನ್ಯಾಯ ಮಂಡಿಸಿದ್ದರು.