ಹರಪನಹಳ್ಳಿ ಕ್ಷೇತ್ರ ಶಿಕ್ಷಣಾಧಿಕಾರಿ ಲೇಪಾಕ್ಷಪ್ಪ
ಹರಪನಹಳ್ಳಿ, ಅ. 1- ಪರಿಸರದ ಮೇಲೆ ಕೇವಲ ಮನುಷ್ಯನಿಗಷ್ಟೇ ಅಲ್ಲದೆ, ಸಕಲ ಜೀವರಾಶಿಗಳಿಗೂ ಹಕ್ಕಿದೆ. ನಮ್ಮ ಮುಂದಿನ ಪೀಳಿಗೆಗಾಗಿ ಪರಿಸರವನ್ನು ಸ್ವಚ್ಛ, ಸುಂದರ ಹಾಗೂ ಆರೋಗ್ಯಕರವಾಗಿ ಇಡುವಂತಹ ಜವಾಬ್ದಾರಿ ನಮ್ಮ ಮೇಲಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಲೇಪಾಕ್ಷಪ್ಪ ಹೇಳಿದರು.
ಸ್ಥಳೀಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಬಾಲಕಿಯರ ಶಾಲೆ ಹಾಗೂ ಅರಣ್ಯ ಇಲಾಖೆಯ ಸಹಯೋಗದಲ್ಲಿ ನಡೆದ ಕೋಟಿ ವೃಕ್ಷ ಸಪ್ತಾಹ ಕಾರ್ಯಕ್ರಮದ ಪ್ರಯುಕ್ತ ಉಚ್ಚಂಗೆಮ್ಮನ ಗುಡ್ಡ ಪರಿಸರದ ವ್ಯಾಪ್ತಿಯಲ್ಲಿ ಹಮ್ಮಿಕೊಂಡಿದ್ದ ಬೀಜದ ಉಂಡೆ ಸಂಪ್ರೋಕ್ಷಣ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪರಿಸರ ನಾಶದಿಂದ ವ್ಯತಿರಿಕ್ತವಾಗಿ ಉಂಟಾದ ಕೊರೊ ನಾದಂತಹ ಮಹಾಮಾರಿಯಿಂದ ಪಾಠ ಕಲಿಯದ ಇಂದಿನ ಜಗತ್ತು ಪ್ರಕೃತಿಯ ಮೇಲೆ ದಬ್ಬಾಳಿಕೆ ಮುಂದುವರೆಸಿದೆ. ಇದರ ಪರಿಣಾಮವಾಗಿ ಜಾಗತಿಕ ತಾಪಮಾನ ಏರುತ್ತಲೇ ಇದ್ದರೂ ಅದರ ನಿರ್ವಹಣೆಯತ್ತ ಗಮನ ಕೊಡುತ್ತಿಲ್ಲ ಎಂದರು.
ವಿಷಕಾರಿಯುಕ್ತ ಅನಿಲ ಹೊರ ಸೂಸುವಿಕೆಯಿಂದ ಓಜೋನ್ ಪದರು ಛಿದ್ರವಾಗಿ ಜೀವ ಜಗತ್ತಿನಲ್ಲೂ ಹಾಹಾಕಾರವೆದ್ದಿದೆ. ಇದರ ಪರಿಣಾಮ ನಮ್ಮ ಮುಂದಿನ ಪೀಳಿಗೆ ಮತ್ತು ಜೀವ ಜಗತ್ತು ಭಯಾನಕ ಪರಿಸ್ಥಿತಿ ಎದುರಿಸುತ್ತಿದೆ ಎಂದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಸಂಗಪ್ಪನವರ್ ಮಾತನಾಡಿ, ಜಾಗತಿಕ ತಾಪಮಾನದಿಂದ ಉಂಟಾಗುವ ವಿಪತ್ತನ್ನು ಅರ್ಥೈಸಿಕೊಂಡು ಮುಂದಿನ ಪೀಳಿಗೆಗೆ ಅದನ್ನು ರಕ್ಷಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.
ಅರಣ್ಯ ಸಂರಕ್ಷಣಾಧಿಕಾರಿ ರಾಜು ಮಾತನಾಡಿ, ವ್ಯಕ್ತಿಗತವಾಗಿ ಸಹಕಾರ ನೀಡಿ ಪರಿಸರವನ್ನು ಉಳಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.
ಮಾಹಿತಿ ಹಕ್ಕು ಕಾಯ್ದೆ ಸಂಪನ್ಮೂಲ ವ್ಯಕ್ತಿ ಎ.ಎಂ.ಪಿ. ವಾಗೀಶ್ ಮಾತನಾಡಿ, ಪರಿಸರ ಸಂರಕ್ಷಣೆ ಅತ್ಯಂತ ಪವಿತ್ರ ಕಾರ್ಯ ಎಂದು ತಿಳಿಸಿದರು.
ಮುಖ್ಯ ಶಿಕ್ಷಕ ಅರ್ಜುನ್ ಪರಸಪ್ಪ ಹಾಗೂ ಸರ್ಕಾರಿ ನೌಕರರ ಸಂಘದ ನಿರ್ದೇಶಕರಾದ ಗಂಗಾಧರ ಸಿ ಮಾತನಾಡಿದರು. ಕ್ಷೇತ್ರ ಸಮನ್ವಯಾಧಿಕಾರಿ ಹೊನ್ನತ್ತೆಪ್ಪ ದೈಹಿಕ ಶಿಕ್ಷಣಾಧಿಕಾರಿ ಕೆ.ಷಣ್ಮುಖಪ್ಪ, ಶಾಲಾ ಸಿಬ್ಬಂದಿ ವರ್ಗ ಹಾಜರಿದ್ದರು.