ಎಂಸಿಸಿ `ಎ’ ಬ್ಲಾಕ್, 8ನೇ ಮುಖ್ಯ ರಸ್ತೆಯಲ್ಲಿ ರುವ ಶ್ರೀ ಸಾಯಿಬಾಬಾ ಮಂದಿರದಲ್ಲಿ ಶ್ರೀ ಸದ್ಗುರು ಸಾಯಿಬಾಬಾರವರ 106ನೇ ಪುಣ್ಯಾರಾಧನೆ ಮಹೋತ್ಸವವು ಇಂದಿನಿಂದ ಇದೇ ದಿನಾಂಕ 13ರವರೆಗೆ 12 ದಿನಗಳ ಕಾಲ ನಡೆಯಲಿದೆ.
ಶ್ರೀ ಸಾಯಿ ಟ್ರಸ್ಟ್ ಆಜೀವ ಛೇರ್ಮನ್ ಹಾಗೂ ಶಾಸಕ ಶಾಮನೂರು ಶಿವಶಂಕರಪ್ಪ, ಕಾರ್ಯಾಧ್ಯಕ್ಷರೂ ಆದ ಹಿರಿಯ ಕೈಗಾರಿಕೋದ್ಯಮಿ ಎಸ್.ಎಸ್. ಗಣೇಶ್, ಉಪಾಧ್ಯಕ್ಷರೂ ಆಗಿರುವ ಹಿರಿಯ ಕೈಗಾರಿಕೋದ್ಯಮಿ ಅಥಣಿ ವೀರಣ್ಣ ಅವರುಗಳ ನೇತೃತ್ವದಲ್ಲಿ ಕಾರ್ಯಕ್ರಮ ಏರ್ಪಾಡಾಗಿದೆ.
ಶ್ರೀ ಸಾಯಿಬಾಬಾ ಮೂರ್ತಿಗೆ ಪ್ರತಿದಿನ ಬೆಳಿಗ್ಗೆ 5.30 ರಿಂದ ವಿವಿಧ ಪೂಜಾ ಕಾರ್ಯಕ್ರಮಗಳು ಜರುಗಲಿವೆ.
ಇಂದು ಬೆಳಿಗ್ಗೆ 9 ಗಂಟೆಗೆ ದೀಪಾರಾಧನೆ ಕಾರ್ಯಕ್ರಮವನ್ನು ಶ್ರೀ ಜಡೇಸಿದ್ಧ ಶಿವಯೋಗೇಶ್ವರ ಶಾಂತಾಶ್ರಮದ ಶ್ರೀ ಶಿವಾನಂದ ಸ್ವಾಮೀಜಿ ನೆರವೇರಿಸುವರು. ಬೆಳಿಗ್ಗೆ 10 ರಿಂದ ಗಣ ಹೋಮ, ಮಹಾಮಂಗಳಾರತಿ ನಡೆಯಲಿದೆ.
ನಾಳೆ ಗುರುವಾರ ಬೆಳಿಗ್ಗೆ 6 ಗಂಟೆಗೆ ಶ್ರೀ ಸಾಯಿಬಾಬಾ ಬೆಳ್ಳಿ ಮೂರ್ತಿಗೆ ವಿಶೇಷ ಅಭಿಷೇಕ, ಹೂವಿನ ಅಲಂಕಾರ ಸೇವೆ ನಡೆಯಲಿದೆ. ದಿನಾಂಕ 6ರ ಬೆಳಿಗ್ಗೆ 9 ಗಂಟೆಗೆ ಸಾಮೂಹಿಕ ಸತ್ಯನಾರಾಯಣ ಸ್ವಾಮಿ ಪೂಜೆ ನೆರವೇರಲಿದೆ.
ದಿನಾಂಕ 12ರ ಶನಿವಾರ ಬೆಳಿಗ್ಗೆ 7.30 ಕ್ಕೆ ಪುಣ್ಯಾರಾಧನೆ ಪ್ರಯುಕ್ತ ಸಾಯಿಬಾಬಾರವರ ಬೆಳ್ಳಿ ಮೂರ್ತಿಗೆ ರುದ್ರಾಭಿಷೇಕ, ಹೂವಿನ ಅಲಂಕಾರ ಸೇವೆ ಮತ್ತು ಪ್ರಸಾದ ವಿನಿಯೋಗ, ಸಂಜೆ 6 ಗಂಟೆಗೆ ಬನ್ನಿ ಮುಡಿಯುವ ಕಾರ್ಯಕ್ರಮ, ಪಲ್ಲಕ್ಕಿ ಉತ್ಸವ ನಡೆಯಲಿದೆ.
ದಿನಾಂಕ 13ರ ಭಾನುವಾರ ಸಂಜೆ 5.30 ಕ್ಕೆ ಶ್ರೀ ಸಾಯಿಬಾಬಾರವರ ಮೆರವಣಿಗೆಯು ರಾಜ ಬೀದಿಗಳಲ್ಲಿ ನಡೆಯುವುದರೊಂದಿಗೆ ಕಾರ್ಯಕ್ರಮ ಸಮಾರೋಪಗೊಳ್ಳಲಿದೆ ಎಂದು ಶ್ರೀ ಸಾಯಿ ಟ್ರಸ್ಟ್ ಕಾರ್ಯದರ್ಶಿ ಎಂ. ಶಿವಪ್ಪ ವಿವರಿಸಿದ್ದಾರೆ.