ಶಿಕ್ಷಣ, ಆರ್ಥಿಕತೆಗೆ ಒತ್ತು ನೀಡಿದರೆ ಸಮಾಜ ಬಲಿಷ್ಟ

ಶಿಕ್ಷಣ, ಆರ್ಥಿಕತೆಗೆ ಒತ್ತು ನೀಡಿದರೆ ಸಮಾಜ ಬಲಿಷ್ಟ

ಹರಪನಹಳ್ಳಿಯ ಕಂಚಿಕೆರೆ ಗ್ರಾಮದ ಬೀರೇಶ್ವರ ಜಾತ್ರೆಯಲ್ಲಿ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ

ಹರಪನಹಳ್ಳಿ, ಸೆ. 30-  ಶಿಕ್ಷಣ ಮತ್ತು ಆರ್ಥಿಕತೆಗೆ ಒತ್ತು ನೀಡಿದರೆ, ಸಮಾಜ ಬಲಿಷ್ಟವಾಗುತ್ತದೆ ಎಂದು ಕಾಗಿನೆಲೆಯ ಕನಕ ಗುರುಪೀಠದ ಶ್ರೀ ನಿರಂಜನಾನಂದ ಪುರಿ  ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಕಂಚಿಕೇರಿ ಗ್ರಾಮದಲ್ಲಿ ನಡೆಯುತ್ತಿರುವ ಬೀರೇಶ್ವರ ಸ್ವಾಮಿ ಜಾತ್ರೆಯ ಅಂಗವಾಗಿ ಜರುಗಿದ ಧರ್ಮಸಭೆಯ  ಸಾನಿಧ್ಯ  ವಹಿಸಿ ಶ್ರೀಗಳು ಮಾತನಾಡಿದರು.

ಉತ್ತಮ ಸಮಾಜ ನಿರ್ಮಾಣವಾಗಬೇ ಕಾದರೆ ಶಿಕ್ಷಣಕ್ಕೆ ಹಾಗೂ ದುಡಿಮೆಗೆ ಒತ್ತು ಕೊಟ್ಟು, ನಾವು ದುಡಿದಂತಹ ಹಣವನ್ನು ಯಾವ ರೀತಿಯಾಗಿ ಉಪಯೋಗ ಮಾಡ ಬೇಕೆಂಬ ಸಾಮಾನ್ಯ ಜ್ಞಾನವಿರಬೇಕು.     ದೇವರಿಗೆ ಪ್ರಾರ್ಥನೆ ಸಲ್ಲಿಸುವುದಕ್ಕೆ ನಮಗೆ ದೇವಸ್ಥಾನಗಳು ಬೇಕು. ಆದರೆ ಬರೀ ದೇವಸ್ಥಾನದ ಗಂಟೆಯನ್ನು ಭಾರಿಸುವುದೊಂದೇ ಪರಿಹಾರ ಅಲ್ಲ. ಅದರ ಬದಲಾಗಿ ಶಾಲೆಗಳಲ್ಲಿ ಶಿಕ್ಷಣವೆಂಬ  ಗಂಟೆ ಬಾರಿಸಿದರೆ ಊರು, ತಾಲೂಕು, ಜಿಲ್ಲೆ, ರಾಜ್ಯ, ದೇಶ ಅಭಿವೃದ್ಧಿಯಾಗುತ್ತದೆ ಎಂದು ನುಡಿದರು.

ದೇವಸ್ಥಾನದಲ್ಲಿ ಭಾರಿಸುವ ಗಂಟೆ ಅಧ್ಯಾತ್ಮಿಕ ಆತ್ಮ ಚೈತನ್ಯ ನೀಡಿದರೆ,   ಶಾಲೆಗಳಲ್ಲಿ ಬಾರಿಸುವ ಗಂಟೆ ಜ್ಞಾನಾರ್ಜನೆ ನೀಡುತ್ತದೆ. ಮುಖ್ಯವಾಗಿ  ಮೌಢ್ಯತೆ ಹಾಗೂ ಬಾಯಿ ಚಪಲದ ಹಬ್ಬಗಳನ್ನು ಹೋಗಲಾಡಿಸಿದರೆ ನಿಮ್ಮ ಹಣಕಾಸಿನ ಸಮಸ್ಯೆ ಸುಧಾರಿಸುತ್ತದೆ ಎಂದು ಹೇಳಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ.ಅಂಜಿನಪ್ಪ ಮಾತನಾಡಿ, ನಿಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಟ್ಟು ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ. ನಾವು ಇವತ್ತು ಏನನ್ನಾದರು ಸಾಧಿಸಬೇಕಾದರೆ ಶಿಕ್ಷಣದಿಂದ ಮಾತ್ರ ಸಾಧ್ಯ ಎಂದು ಹೇಳಿದರು.

ಹಗರಿಬೊಮ್ಮನಹಳ್ಳಿ ಉಪನ್ಯಾಸಕ ಗುಳೆಯಪ್ಪ ಹುಲಿಮನೆ ಮಾತನಾಡಿ, ಕಂಚಿಕೆರೆ ಗ್ರಾಮ ಬಾಂಧವರ ಮಕ್ಕಳಿಗೆ ಶಿಕ್ಷಣದ ಕೊರತೆ ಎದ್ದು ಕಾಣುತ್ತದೆ, ನಮ್ಮ ಸಮಾಜದವರು ಕಷ್ಟಪಟ್ಟು ದುಡಿದರೂ ಸಹ ಅಭಿವೃದ್ಧಿಯಾಗಿಲ್ಲ ಎಂದರು.

ಜಿ.ಪಂ ಮಾಜಿ ಸದಸ್ಯ ಹೆಚ್.ಬಿ. ಪರಶುರಾಮಪ್ಪ ಡೊಳ್ಳು ಭಾರಿಸುವ ಮುಖಾಂತರ ಕಾರ್ಯಕ್ರಮ ಉದ್ಘಾಟಿಸಿದರು.

ಹೆಚ್. ಪರುಸಪ್ಪ ಅಧ್ಯಕ್ಷತೆ ವಹಿಸಿದ್ದರು. ಎಂ.ನಾಗರಾಜ್, ಜೆ. ಮಂಜಪ್ಪ, ಕೆ. ಕೆಂಚಪ್ಪ, ಎಂ. ಹನುಮಂತಪ್ಪ, ಬಿ.ಅಂಜಿನಪ್ಪ,  ಕೆಂಚನಗೌಡ, ಕೊಟ್ರೇಶ್, ಅಲ್ಲಾಭಕ್ಷಿ ಸಾಬ್, ಡಿ.ದೇವೇಂದ್ರಪ್ಪ, ಮುತ್ತಿಗೆ ಜಂಭಣ್ಣ, ವಕೀಲ ಗೋಣಿಬಸಪ್ಪ, ಚಲವಾದಿ ಹನುಮಂತಪ್ಪ, ವೆಂಕಟೇಶ್, ಬಾರಿಕರ ಮಂಜಪ್ಪ, ಪಿಎಸ್‌ಐ ಕೆ. ರಂಗಯ್ಯ ಮತ್ತಿತರರು ಉಪಸ್ಥಿತರಿದ್ದರು.

error: Content is protected !!