ಹರಿಹರ, ಸೆ.26- ತಾಂತ್ರಿಕ ಹುದ್ದೆಗಳಿಗೆ ನೀಡುವ ವೇತನ ಶ್ರೇಣಿ ನಿಗದಿಪಡಿಸುವುದು ಸೇರಿದಂತೆ ಹಲವಾರು ಬೇಡಿಕೆಗಳನ್ನು ಈಡೇರಿಸು ವಂತೆ ಆಗ್ರಹಿಸಿ ಕರ್ತವ್ಯಕ್ಕೆ ಹಾಜರಾಗದೆ, ಕೈಗೆ ಕಪ್ಪು ಬಟ್ಟೆ ಧರಿಸಿ ತಹಶೀಲ್ದಾರ್ ಕಚೇರಿ ಮುಂದೆ ಗ್ರಾಮ ಆಡಳಿತ ಅಧಿಕಾರಿಗಳು ಅನಿರ್ದಿಷ್ಟ ಪ್ರತಿಭಟನೆ ಆರಂಭಿಸಿದ್ದಾರೆ.
ತಹಶೀಲ್ದಾರ್ ಗುರುಬಸವರಾಜ್ ಅವರಿಗೆ ಮನವಿ ಸಲ್ಲಿಸಿದ ನಂತರ ಗ್ರಾಮ ಲೆಕ್ಕಾಧಿಕಾರಿ ಮತ್ತು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ವಿಜಯಮಹಾಂತೇಶ್ ಮಾತನಾಡಿ 59 ಸಕಾಲ ಯೋಜನೆಗಳ ಕೆಲಸ ನಿರ್ವಹಿಸುತ್ತಿರುವ ಗ್ರಾಮ ಆಡಳಿತ ಅಧಿಕಾರಿಗಳ ಹುದ್ದೆಯನ್ನು ತಾಂತ್ರಿಕ ಹುದ್ದೆಗಳಿಗೆ ನೀಡುವ ವೇತನ ಶ್ರೇಣಿಯನ್ನು ನೀಡಬೇಕು.
ಅಲ್ಲದೇ ಗ್ರಾಮ ಆಡಳಿತ ಅಧಿಕಾರಿಗಳಿಗೆ ಸುಸಜ್ಜಿತ ಕಚೇರಿ, ಅತ್ಯುತ್ತಮ ಗುಣಮಟ್ಟದ ಮೊಬೈಲ್ ಪೋನ್, ಪ್ರಿಂಟರ್ ಸ್ಕ್ಯಾನರ್, ಗೂಗಲ್ ಕ್ರೋಮ್ ಬುಕ್, ಲ್ಯಾಪ್ ಟಾಪ್ ನೀಡಬೇಕು. ಪ್ರಯಾಣ ಭತ್ಯೆ 500 ರಿಂದ 3 ಸಾವಿರ ಹೆಚ್ಚುವರಿ ಮಾಡಬೇಕು. ಮನೆ ಹಾನಿ ಜವಾಬ್ದಾರಿಯಿಂದ ಗ್ರಾಮ ಆಡಳಿತ ಅಧಿಕಾರಿಗಳನ್ನು ಕೈ ಬಿಡಬೇಕು. ಕಂದಾಯ ಇಲಾಖೆಯ 3 ವರ್ಷಗಳ ಸೇವೆಯನ್ನು ಪರಿಗಣಿಸಿ ಅಂತರ್ ಜಿಲ್ಲಾ ವರ್ಗಾವಣೆಗೆ ಹೊಸ ಮಾರ್ಗಸೂಚಿ ರಚಿಸಬೇಕು.
ವಂಶವೃಕ್ಷ, ಜಾತಿ ಪ್ರಮಾಣ ಪತ್ರ ಇತರೆ ಪ್ರಮಾಣ ಪತ್ರಗಳ ವಿತರಣೆ ವಿಚಾರಕ್ಕೆ ಸಂಬಂಧಿ ಸಿದಂತೆ ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತು ಗ್ರಾಮ ಆಡಳಿತ ಅಧಿಕಾರಿಗಳನ್ನು ಹೊಣೆಗಾರರನ್ನಾಗಿಸಿ ಎಫ್.ಐ.ಆರ್. ದಾಖಲಿಸು ವುದನ್ನು ನಿಲ್ಲಿಸಿ ತಪ್ಪು ಮಾಹಿತಿ ನೀಡುವ ಅರ್ಜಿದಾರರನ್ನೇ ನೇರ ಹೊಣೆಗಾರರನ್ನಾಗಿ ಮಾಡಿ, ಅವರ ಮೇಲೆ ಪ್ರಕರಣ ದಾಖಲಿಸಲು ಇಲಾಖೆಯ ಮುಖ್ಯಸ್ಥರಿಗೆ ಸೂಕ್ತ ಆದೇಶವನ್ನು ನೀಡಬೇಕು ಎಂದು ಅವರು ಒತ್ತಾಯಿಸಿದರು.
ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ಗೌರವ ಅಧ್ಯಕ್ಷ ಹೇಮಂತ್ ಕುಮಾರ್ ಮಾತನಾಡಿ ಮಾತೃ ಇಲಾಖೆಯ ಎಲ್ಲಾ ಕೆಲಸಗಳೊಂದಿಗೆ ಇತರೆ ಇಲಾಖೆಯ ಕೆಲಸವನ್ನು ಮಾಡುವಾಗ ಗ್ರಾಮ ಆಡಳಿತ ಅಧಿಕಾರಿಗಳು ಒತ್ತಡಕ್ಕೆ ಸಿಲುಕಿ ಈಗಾಗಲೇ ರಾಜ್ಯದಾದ್ಯಂತ ಸುಮಾರು 38 ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಾಗಾಗಿ ಹೆಚ್ಚಿನ ಹೊರೆಯನ್ನು ಅಧಿಕಾರಿಗಳಿಗೆ ನೀಡುವುದನ್ನು ಕೈ ಬಿಡಬೇಕು ಎಂದರು.
ಈ ಸಂದರ್ಭದಲ್ಲಿ ಎಂ. ಎಸ್. ಪ್ರಭು, ಓ ಬೋರಯ್ಯ, ಸಮೀರ್, ಆನಂದ್, ಮಾರುತಿ, ದೇವರಾಜ್, ಅಣ್ಣಪ್ಪ, ಹರೀಶ್, ಮಲ್ಲಿಕಾರ್ಜುನ್, ಶಿವಕುಮಾರ್, ರಾಮಕೃಷ್ಣ, ಷರೀಫ್, ಶ್ರೀಧರ್ ಮೂರ್ತಿ, ನಯನ್ ಕುಮಾರ್, ಸೌಮ್ಯ, ಪುಷ್ಪಾ, ರೇಖಾ, ನೀಲಮ್ಮ, ಸಂಗೀತ, ಮಂಜುಳಾ, ಕೋಮಲ, ಶಿಲ್ಪಾ, ನವೀನ್, ಪುಷ್ಪಾ ಇತರರು ಹಾಜರಿದ್ದರು.