ನಮ್ಮ ಸಂಸ್ಕಾರ, ಸ್ವಭಾವದಲ್ಲೇ ಸ್ವಚ್ಛತೆಯಿಂದ ಕೂಡಿರಬೇಕು

ನಮ್ಮ ಸಂಸ್ಕಾರ, ಸ್ವಭಾವದಲ್ಲೇ ಸ್ವಚ್ಛತೆಯಿಂದ ಕೂಡಿರಬೇಕು

ಜಿಲ್ಲಾ ನ್ಯಾಯಾಧೀಶರಾದ ರಾಜೇಶ್ವರಿ ಎನ್.ಹೆಗಡೆ ಆಶಯ

ದಾವಣಗೆರೆ, ಸೆ. 27 – ನಮ್ಮ ಸಂಸ್ಕಾರ, ಸ್ವಭಾವದಲ್ಲೇ ಸ್ವಚ್ಛತೆ ಕೂಡಿರಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರಾಜೇಶ್ವರಿ ಎನ್. ಹೆಗಡೆ ತಿಳಿಸಿದರು.

ಅವರು ಜಿಲ್ಲಾ ನ್ಯಾಯಾಂಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ಹಾಗೂ ಮಹಾನಗರ ಪಾಲಿಕೆಯ ಸಂಯುಕ್ತಾಶ್ರಯದಲ್ಲಿ ಬುಧವಾರ ಗುಂಡಿ ಸರ್ಕಲ್‌ನಲ್ಲಿ  ಹಮ್ಮಿಕೊಳ್ಳಲಾಗಿದ್ದ  ಸ್ವಭಾವ ಸ್ವಚ್ಛತಾ, ಸಂಸ್ಕಾರ ಸ್ವಚ್ಛತಾ ಕಾರ್ಯ ಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.  

ನಮ್ಮ ದೇಹ ಮತ್ತು ಆಹಾರದ ಬಗ್ಗೆ ಎಷ್ಟು ಕಾಳಜಿ ವಹಿಸುತ್ತೇವೋ ಹಾಗೆಯೇ ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಡುವುದು ಎಲ್ಲರ ಕರ್ತವ್ಯವಾಗಿದೆ. ಬೀದಿ ಬದಿಯ ವ್ಯಾಪಾರಿಗಳು ಕಸವನ್ನು  ಎಲ್ಲೆಂದರಲ್ಲಿ ಎಸೆಯದೇ ಮಹಾನಗರ ಪಾಲಿಕೆಯ ಕಸ ಸಂಗ್ರಹ ವಾಹನಕ್ಕೆ ನೀಡಿ ಸ್ವಚ್ಛತೆ ಕಾಪಾಡಬೇಕು ಎಂದು ತಿಳಿಸಿದರು.

 ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ್ ಮ. ಕರೆಣ್ಣವರ್ ಪ್ರಾಸ್ತಾವಿಕವಾಗಿ ಮಾತನಾಡಿದರು.

  ಮಹಾನಗರ ಪಾಲಿಕೆ ಆಯುಕ್ತರಾದ ರೇಣುಕಾ ಮಾತನಾಡಿ ಬೀದಿಬದಿಯ ವ್ಯಾಪಾರಿಗಳು ಸ್ವಯಂ ಪ್ರೇರಿತವಾಗಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಬೀದಿ-ಬದಿ ಹೋಟೆಲ್, ಇತರೆ ವ್ಯಾಪಾರಿಗಳು ಪ್ಲಾಸ್ಟಿಕ್ ಬಳಸದೆ ಬಾಳೆ ಎಲೆ  ಬಳಸಬೇಕು ಎಂದು ತಿಳಿಸಿದರು.

  ಬೀದಿ ಬದಿಯ ವ್ಯಾಪಾರಿಗಳು ತಮ್ಮ ಕೆಲಸ ಮುಗಿದ ನಂತರ ಸಂಜೆ ವೇಳೆ ಮಹಾನಗರ ಪಾಲಿಕೆಯಿಂದ ಕಸ ಸಂಗ್ರಹ ವಾಹನ ಕಳಿಸಲಾಗುವುದು, ಅದರಲ್ಲಿ ಹಸಿ-ಕಸ, ಒಣ-ಕಸ ಬೇರ್ಪಡಿಸಿ ನೀಡಿ ಸ್ವಚ್ಛತೆ ಕಾಪಾಡಬೇಕೆಂದು ತಿಳಿಸಿದರು.

  ಕಾರ್ಯಕ್ರಮದಲ್ಲಿ ಎರಡನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಪ್ರವೀಣ್ ಕುಮಾರ್ ಆರ್‌ಎನ್, ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಅಮರ್ ವಿ.ಎಲ್, ಮೂರನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ನಾಗೇಶ್. ಸಿ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ರಾಜಶೇಖರ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ರಾಘವನ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

error: Content is protected !!