ದಾವಣಗೆರೆ, ಸೆ. 27 – ಬಾಲಕರ ಮತ್ತು ಅಲ್ಪ ವಯಸ್ಕರ ಬಗೆಗಿನ ಕಾನೂನು ತಿಳಿಯುವುದು ಎಲ್ಲರ ಜವಾಬ್ದಾರಿ ಎಂದು 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಅಣ್ಣಯ್ಯನವರ್ ತಿಳಿಸಿದರು.
ನಗರದ ಅಮೃತ ವಿದ್ಯಾಲಯಂ ಶಾಲೆಯಲ್ಲಿ ಸೋಮವಾರ ಆಯೋಜಿಸಿದ್ದ ಫೋಕ್ಸೋ ಮತ್ತು ಬಾಲ್ಯ ವಿವಾಹ ತಡೆಯಲು `ಕಾನೂನು ಅರಿವು- ನೆರವು’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿ, ವಿದ್ಯಾರ್ಥಿನಿಯರ ತಂದೆ ತಾಯಿಯರು ಮಕ್ಕಳನ್ನು ಶಾಲೆಗೆ ಕಳುಹಿಸಿದ ನಂತರ ಅವರ ಬಗ್ಗೆ ಕಾಳಜಿ ವಹಿಸುವುದು ಅವಶ್ಯವಾಗಿದೆ ಎಂದು ತಿಳಿಸಿದರು.
ಕಾನೂನಿನ ಸಂಘರ್ಷಕ್ಕೆ ಒಳಗಾದರೆ ಆರ್ಥಿಕವಾಗಿ, ಸಾಮಾಜಿಕವಾಗಿ ಅಷ್ಟೇ ಅಲ್ಲದೆ ಭೌತಿಕವಾಗಿ ಕೂಡ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ ಎಂದರು.
ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ್ ಮ. ಕರೆಣ್ಣವರ್ ಮಾತನಾಡಿ, ಮಕ್ಕಳಿಗೆ ನೈತಿಕ ಶಿಕ್ಷಣದ ಅವಶ್ಯಕತೆ ಇದೆ. ಅವಶ್ಯಕತೆಗೆ ತಕ್ಕಷ್ಟೇ ಮಕ್ಕಳು ಮೊಬೈಲ್ ಬಳಕೆ ಮಾಡುವಂತೆ ಪಾಲಕರು ಸೂಚಿಸಬೇಕು ಮತ್ತು ಗಮನಿಸಬೇಕು ಎಂದು ತಿಳಿಸಿದರು.
ಫೋಕ್ಸೋ ಕಾನೂನು ಮತ್ತು ಬಾಲ್ಯ ವಿವಾಹ ನಿಷೇಧ ಕಾನೂನು ಬಗ್ಗೆ ಮಾಹಿತಿ ನೀಡಿ, ಇಲಾಖೆಗಳ ಜೊತೆಗೆ ಮಕ್ಕಳು, ಪೋಷಕರು ಮತ್ತು ಸಾರ್ವಜನಿಕರು ಕೈಜೋಡಿಸಿದಾಗ ಮಾತ್ರ ಕಾನೂನಿನ ಅನುಷ್ಠಾನ ಸುಲಭ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಪುಷ್ಪಲತಾ ಮಾತನಾಡಿ, ಪಠ್ಯದ ಜತೆಗೆ ಸಾಮಾಜಿಕ ಮೌಲ್ಯ ಮತ್ತು ಕಾನೂನುಗಳನ್ನು ಮಕ್ಕಳಿಗೆ ತಿಳಿಸಿಕೊಡುವುದು ಶಿಕ್ಷಕರು ಮತ್ತು ಶಿಕ್ಷಣ ಸಂಸ್ಥೆಗಳ ಜವಾಬ್ದಾರಿಯಾಗಿದೆ ಎಂದರು.
ಮಹಿಳಾ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಎಸ್.ಡಿ. ನೂರ್ ಅಹಮ್ಮದ್ ಮಾತನಾಡಿ, ಸಾರ್ವಜನಿಕರು ಪೊಲೀಸರಿಗೆ ಸೂಕ್ತ ಸಮಯದಲ್ಲಿ ಸರಿಯಾದ ಮಾಹಿತಿ ನೀಡಿ ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಸಹಾಯ ಮಾಡುವಂತೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಕವಿತಾ ಟಿ.ಎನ್, ಅಮೃತ ವಿದ್ಯಾಲಯಂ ಪ್ರಾಚಾರ್ಯೆ ಎನ್. ಪ್ರತಿಭಾ, ಪಿಯು ಕಾಲೇಜಿನ ಪ್ರಾಚಾರ್ಯ ಡಾ.ಎನ್.ಸಿ. ವಿವೇಕ್ ಹಾಗೂ ಇತರರಿದ್ದರು.
ಶಾಲಾ ಶಿಕ್ಷಣ ಇಲಾಖೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಪೊಲೀಸ್ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ನಡೆಯಿತು.