ಗುರಿ ಇದ್ದರೆ ಮಾತ್ರ ಸಾಧನೆ ಸಾಧ್ಯ : ವಾಗ್ಮಿ ಪ್ರೊ. ಕೃಷ್ಣೇಗೌಡ

ಗುರಿ ಇದ್ದರೆ ಮಾತ್ರ ಸಾಧನೆ ಸಾಧ್ಯ : ವಾಗ್ಮಿ ಪ್ರೊ. ಕೃಷ್ಣೇಗೌಡ

ದಾವಣಗೆರೆ, ಸೆ. 25 – ಜೀವನದಲ್ಲಿ ಗುರಿ ಇಟ್ಟುಕೊಂಡು ಮುನ್ನಡೆದರೆ ಮಾತ್ರ ಸಾಧನೆ ಸಾಧ್ಯ. ಗುರಿ ಇಲ್ಲದವರ ಜೀವನ ದಿಕ್ಕು ತಪ್ಪುತ್ತದೆ ಎಂದು ವಾಗ್ಮಿ ಪ್ರೊ. ಕೃಷ್ಣೇಗೌಡ ಹೇಳಿದರು.

ನಗರದ ಸರ್ ಎಂ.ವಿ. ಸಮೂಹ ಸಂಸ್ಥೆಗಳ ವತಿಯಿಂದ ಆಯೋಜಿಸಲಾಗಿದ್ದ ಶಿಕ್ಷಣ ಸಂಸ್ಥೆಯ ಸಂಸ್ಥಾಪನಾ ದಿನ ಹಾಗೂ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಯಾವುದೇ ಗುರಿ ಇಟ್ಟುಕೊಳ್ಳದೇ ನಡೆ ದಾಗ, ನಾವು ಎಲ್ಲಿ ತಲುಪುತ್ತೇವೋ ಅದನ್ನೇ ಗುರಿ ಎಂದು ಒಣ ಜಂಬಪಟ್ಟುಕೊಳ್ಳ ಬೇಕಾಗುತ್ತದೆ ಎಂದವರು ಎಚ್ಚರಿಸಿದರು.

ಸಾಮಾನ್ಯವಾಗಿ ಮಕ್ಕಳನ್ನೇ ದೇವರು ಹಾಗೂ ಮಕ್ಕಳು ಸುಂದರ ಎಂದು ಹೇಳುತ್ತಾರೆ. ಆದರೆ, ಆ ರೀತಿ ಹೇಳುವುದು ತಪ್ಪು. ಮಕ್ಕಳಿಂದ ಹಿಡಿದು, ಹದಿ ಹರೆಯ, ಯೌವ್ವನ ಹಾಗೂ ವೃದ್ಧಾಪ್ಯ ಸೇರಿದಂತೆ ಎಲ್ಲ ವಯೋಮಾನದಲ್ಲೂ ಸೌಂದರ್ಯವಿದೆ. ಆ ಸೌಂದರ್ಯವನ್ನು ಕಾಣುವ ಕಣ್ಣು ಹಾಗೂ ಮನೋಭಾವ ಬೇಕಿದೆ ಎಂದು ಕೃಷ್ಣೇಗೌಡ ಹೇಳಿದರು.

ಪ್ರತಿಯೊಬ್ಬರಲ್ಲೂ ದೈವತ್ವ ಇದೆ. ಆ ದೈವತ್ವ ಕಾಣುವ ಗುಣವನ್ನು ನಾವೆಲ್ಲರೂ ಬೆಳೆಸಿಕೊಳ್ಳಬೇಕು. ಆಗ ಜೀವನ ಸುಂದರವಾಗುತ್ತದೆ  ಎಂದು ತಿಳಿಸಿದರು.

ಮುಖ್ಯ ಅತಿಥಿಯಾಗಿ ಮಾತನಾಡಿದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹರೇಕಳ ಹಾಜಬ್ಬ, ನನ್ನಲ್ಲಿ ವಿಶೇಷತೆ ಏನಿಲ್ಲ. ನಾನೊಬ್ಬ ಬಡವ. ನನ್ನಲ್ಲಿ ವಿಶೇಷತೆಯನ್ನು ಗುರುತಿಸಿ ಸನ್ಮಾನಿಸಿದ್ದೀರಿ. ಇದು ನನಗೆ ಧನ್ಯತಾ ಭಾವ ತಂದಿದೆ ಎಂದು ಹೇಳಿದರು.

ಲೇಖಕ ಸುರೇಶ್ ಕುಲಕರ್ಣಿ ಮಾತನಾಡಿ, ಒಳ್ಳೆಯ ಮಾತುಗಳನ್ನು ಆಡುವ ಹಾಗೂ ಒಳ್ಳೆಯ ಮಾತುಗಳನ್ನು ಕೇಳುವ ಸ್ವಭಾವ ಇರಬೇಕು. ಇಂತಹ ಸ್ವಭಾವದಿಂದ ನಮಗಷ್ಟೇ ಅಲ್ಲದೇ, ಜಗತ್ತಿಗೇ ಒಳ್ಳೆಯದಾಗುತ್ತದೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸರ್ ಎಂ.ವಿ. ಸಮೂಹದ ಕಾರ್ಯದರ್ಶಿ ಎಸ್.ಜೆ. ಶ್ರೀಧರ್, ಎನ್.ಟಿ.ಎ. ರಾಷ್ಟ್ರ ಮಟ್ಟದಲ್ಲಿ ಗುರುತಿಸುವ 25 ನಗರಗಳ ಸಾಲಿಗೆ ದಾವಣ ಗೆರೆಯೂ ಸೇರ್ಪಡೆಯಾಗಿದೆ. ಅತಿಹೆಚ್ಚು ಜನ ನೀಟ್ ಹಾಗೂ ಐಐಟಿ ಪರೀಕ್ಷೆಗೆ ಹಾಜರಾಗುವ ಮತ್ತು ಉತ್ತೀರ್ಣರಾಗುವ ಕಾರಣದಿಂದ ಈ ಮಾನ್ಯತೆ ದೊರೆತಿದೆ. ಇಂತಹ ಮಾನ್ಯತೆ ಪಡೆಯುವಲ್ಲಿ ಸರ್ ಎಂ.ವಿ. ಸಮೂಹ ತನ್ನದೇ ಆದ ಕೊಡುಗೆ ನೀಡಿದೆ ಎಂದರು.

ಸರ್ ಎಂ. ವಿಶ್ವೇಶ್ವರಾಯ ಅವರು ದೊಡ್ಡ ಕನಸು ಕಾಣುವ ಹಾಗೂ ದೊಡ್ಡ ಚಿಂತನೆ ಮಾಡುವ ಗುಣ ಹೊಂದಿದ್ದರು. ಸದಾ ಸಕ್ರಿಯರಾಗಿದ್ದರು. ಅವರ ಈ ಗುಣ ನಮ್ಮೆಲ್ಲರಿಗೂ ಆದರ್ಶವಾಗಿದೆ ಎಂದರು.

ಈ ಸಂದರ್ಭದಲ್ಲಿ ಶಿಕ್ಷಣ ಕ್ಷೇತ್ರದಲ್ಲಿನ ಸಾಧನೆಗಾಗಿ ಎಸ್.ಎನ್. ರಾಘವೇಂದ್ರ, ವಿ. ರಾಜು ಹಾಗೂ ಎಂ.ಬಿ. ಪ್ರಭಾಕರ್ ಅವರಿಗೆ `ಛಾತ್ರ ಪ್ರಿಯ’ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಸರ್ ಎಂ.ವಿ. ಸಮೂಹದ ಅಧ್ಯಕ್ಷ ವಿ. ಸುರೇಶ್ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೈಷ್ಣವಿ ಹಾಗೂ ಅಮೃತ ಪ್ರಾರ್ಥಿಸಿದರು. ಸೈಯದ್ ಷಂಶೀರ್ ಸ್ವಾಗತಿಸಿದರು. ದೇವರಾಜ ಸರಾಪದ ನಿರೂಪಿಸಿದರೆ, ಜೆ. ಪದ್ಮನಾಭ ವಂದಿಸಿದರು.

error: Content is protected !!