ರಾಣೇಬೆನ್ನೂರು, ಸೆ. 26 – ಕನ್ನಡವನ್ನು ಉಸಿರಾಗಿಸಿಕೊಂಡ ಅಪ್ರತಿಮ ಹೋರಾಟಗಾರರು, ಪತ್ರಕರ್ತರಾಗಿದ್ದ ದಿವಂಗತ ಪಾಟೀಲ ಪುಟ್ಟಪ್ಪ ಅವರ ಸ್ಮಾರಕವನ್ನು, ಅವರ ತವರು ರಾಣೇಬೆನ್ನೂರು ತಾಲ್ಲೂಕಿನ ಹಲಗೇರಿಯಲ್ಲಿ ನಿರ್ಮಿಸಬೇಕು ಎಂದು ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿಯವರು ಹಾವೇರಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಅವರ ಅಂತಿಮ ವಿಧಿ-ವಿಧಾನಗಳು ಹಲಗೇರಿಯಲ್ಲಿ ನಡೆದಿದ್ದು, ಆ ಸ್ಥಳದಲ್ಲಿ ಸ್ಮಾರಕ ನಿರ್ಮಿಸಿ ಕರ್ನಾಟಕ ರಾಜ್ಯೋತ್ಸವದಂದು ಲೋಕಾರ್ಪಣೆ ಮಾಡಿ, ದಿವಂಗತರ ಕನ್ನಡ ಪ್ರೀತಿಯನ್ನು ಸ್ಮರಿಸುವ ಅವಕಾಶವನ್ನು ಕನ್ನಡಿಗರಿಗೆ ಕಲ್ಪಿಸುವಂತೆ ಕ್ರಿಯಾ ಸಮಿತಿಯವರು ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರಿಗೆ ಒತ್ತಾಯಿಸಿದರು. ಜಿಲ್ಲಾಧಿಕಾರಿಗಳು ಸೂಕ್ತ ಕ್ರಮದ ಭರವಸೆ ನೀಡಿದ್ದಾರೆ.