ವಿಆರ್‌ಎಲ್ ಹೆಸರಲ್ಲಿ ವ್ಯಕ್ತಿಗೆ ವಂಚನೆ

ದಾವಣಗೆರೆ, ಸೆ.25- ಬೆಂಗಳೂರಿನಿಂದ ದಾವಣಗೆರೆಗೆ ಮನೆಯ ವಸ್ತುಗಳನ್ನು ಸಾಗಾಣಿಕೆ ಮಾಡುವುದಾಗಿ ವಿಆರ್‌ಎಲ್ ಸಂಸ್ಥೆಯ ಹೆಸರನ್ನು ದುರ್ಬಳಕೆ ಮಾಡಿ ವಂಚಿಸಿರುವ ಘಟನೆ ನಡೆದಿದೆ.

ಬೆಂಗಳೂರಿನ ಖಾಸಗಿ ಕಂಪನಿಯೊಂದರ ಉದ್ಯೋಗಿಯೊಬ್ಬರು ದಾವಣಗೆರೆಗೆ ಸ್ಥಳಾಂತರಗೊಳ್ಳಲು  ಬಯಸಿ, ತಮ್ಮ ಮನೆಯ ಸಾಮಾನುಗಳನ್ನು ಕಳಿಸಿಕೊಡಲು ಗೂಗಲ್‌ನಲ್ಲಿ ಹುಡುಕಾಟ ನಡೆಸಿದ್ದರು.

ಗೂಗಲ್‌ನಲ್ಲಿ ಅಗರವಾಲ್ ಮೂವರ್ಸ್ ಅಂಡ್ ಪ್ಯಾಕರ್ಸ್ ಸಂಸ್ಥೆಗೆ ಸಂಪರ್ಕಿಸಿದಾಗ ಅವರು 40 ಸಾವಿರ ರೂ.ಗಳ ಕೊಟೇಷನ್ ಕಳುಹಿಸಿದ್ದರು. ಇದು ಇಷ್ಟವಾಗದ ಕಾರಣ ಉದ್ಯೋಗಿ ಸುಮ್ಮನಾಗಿದ್ದರು.

ಇದಾಗಿ ಎರಡು ಗಂಟೆ ನಂತರ ‘ವಿಆರ್‌ಎಲ್ ಲಾಜಿಸ್ಟಿಕ್ಸ್ ಪ್ಯಾಕರ್ಸ್ ಅಂಡ್ ಮೂವರ್ಸ್’ ಹೆಸರಿನಲ್ಲಿ ವಾಟ್ಸಾಪ್ ಸಂದೇಶ ಬಂದಿತ್ತು, ನಾವು 12 ಸಾವಿರ ರೂ.ಗಳಿಗೆ ಪ್ಯಾಕಿಂಗ್ ಲೋಡಿಂಗ್, ಅನ್‌ಲೋಡಿಂಗ್ ಸೇವೆ ನೀಡುವುದಾಗಿ ಹೇಳಲಾಗಿತ್ತು. ಇದನ್ನು ನಂಬಿದ ಉದ್ಯೋಗಿ,  ಸೆ. 18 ರಂದು 1 ಸಾವಿರ ರೂ. ಮುಂಗಡ ಹಣ ಪಾವತಿಸಿದ್ದಾರೆ. 22 ರಂದು ಬೆಳಗ್ಗೆ ಬೆಂಗಳೂರಿನ ಮನೆಯಿಂದ ವಸ್ತುಗಳನ್ನು ಪ್ಯಾಕಿಂಗ್ ಮಾಡಿಕೊಂಡು ಹೋಗಿದ್ದಾರೆ. ಅದಾದ ಸ್ವಲ್ಪ ಹೊತ್ತಿನಲ್ಲೇ ಮತ್ತೊಮ್ಮೆ ಕರೆ ಮಾಡಿ ಬಾಕಿ ಇರುವ 11 ಸಾವಿರ ರೂ. ಕಟ್ಟಿಸಿಕೊಂಡಿದ್ದಾರೆ.

 ವಿಮೆ, ಸಾರಿಗೆ ವೆಚ್ಚ, ಜಿಎಸ್‌ಟಿ ಸೇರಿ ಒಟ್ಟು 29,926 ರೂ.ಗಳ ಬಿಲ್ ಕಳಿಸಿ, ಈಗಾಗಲೇ ಪಾವತಿಸಿರುವ 12 ಸಾವಿರ ರೂ. ಬಿಟ್ಟು ಉಳಿದ 17,926 ರೂ.ಗಳನ್ನು 3 ಗಂಟೆಯೊಳಗೆ ಪಾವತಿಸುವಂತೆ ಹೇಳಿದ್ದಾರೆ. ಗ್ರಾಹಕ ದಾವಣಗೆರೆ ತಲುಪಿದ ನಂತರ ಬೇರೊಬ್ಬರಿಂದ ಸಾಲ ಪಡೆದು ಬಾಕಿ ಹಣ ಪಾವತಿಸಿದ್ದಾರೆ. ಅಷ್ಟಾಗಿಯೂ 3 ದಿನ ಸತಾಯಿಸಿದ್ದು, ಬುಧವಾರ ಬೆಳಗ್ಗೆ ವಾಹನ ದಾವಣಗೆರೆಗೆ ಬಂದಿದೆ.

ಉದ್ಯೋಗಿಯು ಸೆ. 23 ರಂದು ಚಿತ್ರದುರ್ಗದ ವಿಆರ್‌ಎಲ್ ಶಾಖೆಗೆ ಹೋಗಿ ವಿಚಾರಿಸಿದಾಗ, ನಾವು ಆ ರೀತಿಯ ಸೇವೆ ನೀಡುವುದಿಲ್ಲ, ನೇರವಾಗಿ ಕಚೇರಿಗೇ ಬಂದು ಬುಕ್ ಮಾಡುವ ವ್ಯವಸ್ಥೆಯಿದೆ ಎಂದು ಹೇಳಿದಾಗ, ತಾನು ಮೋಸ ಹೋಗಿರುವುದು ಗೊತ್ತಾಗಿದೆ. ಸೋಮವಾರ ಬೆಂಗಳೂರಿನ ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಗ್ರಾಹಕರು ಈ ಕುರಿತು ದೂರು ದಾಖಲಿಸಿದ್ದಾರೆ.

ವಿಆರ್‌ಎಲ್ ಹೆಸರು, ಲೋಗೋ, ಜಿಎಸ್‌ಟಿ ಮತ್ತು ಪಾನ್ ಸಂಖ್ಯೆ ಬಳಸಿ ವಂಚನೆ ಮಾಡಿರುವ ಬಗ್ಗೆ ದಾವಣಗೆರೆಯ ಆರ್.ಎಂ.ಸಿ. ಯಾರ್ಡ್ ಪೊಲೀಸ್ ಠಾಣೆಯಲ್ಲಿ ವಿಆರ್‌ಎಲ್ ದಾವಣಗೆರೆ ಶಾಖೆಯ ವ್ಯವಸ್ಥಾಪಕ ಬಿ.ಆರ್. ಮಧು ಸಹ ದೂರು ದಾಖಲಿಸಿದ್ದಾರೆ.

error: Content is protected !!