ದಾವಣಗೆರೆ,ಸೆ. 25 – ಎಲೆಬೇತೂರಿನ ಶ್ರೀ ಕೊಂಡಜ್ಜಿ ಬಸಪ್ಪ ಪ್ರೌಢಶಾಲೆ ಮತ್ತು ಶ್ರೀ ತರಳಬಾಳು ಹಿರಿಯ ಪ್ರಾಥಮಿಕ ಶಾಲೆಗಳ ಸಂಯುಕ್ತಾಶ್ರಯದಲ್ಲಿ ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮಿಗಳ 32ನೇ ಶ್ರದ್ಧಾಂಜಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಸಮಾರಂಭದ ಅಧ್ಯಕ್ಷತೆಯನ್ನು ಪ್ರೌಢಶಾಲಾ ಸ್ಥಳೀಯ ಸಲಹಾ ಸಮಿತಿಯ ಅಧ್ಯಕ್ಷ ಎಂ. ಬಸವರಾಜಪ್ಪ ವಹಿಸಿದ್ದರು. ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಅಧ್ಯಾಪಕ ಹೆಚ್. ಎಸ್. ದ್ಯಾಮೇಶ್ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು. ಕನ್ನಡ ಸಾಹಿತ್ಯ ಪರಿಷತ್‌ನ ನಿರ್ದೇಶಕ ಷಡಕ್ಷರಪ್ಪ, ಸಲಹಾ ಸಮಿತಿಯ ಕಾರ್ಯದರ್ಶಿ ವಿರೂಪಾಕ್ಷಪ್ಪ, ಸದಸ್ಯರಾದ ನಾರದಮುನಿ ಗೌಡರು, ಹಳ್ಳಿಕೆರೆ ರಾಜಣ್ಣ, ಮುಖ್ಯೋಪಾಧ್ಯಾಯಿನಿ ಬಿ. ಎಂ. ಶಶಿಕಲಾ ಮೊದಲಾದವರು ಉಪಸ್ಥಿತರಿದ್ದರು.
ಆರಂಭದಲ್ಲಿ ಪ್ರೌಢಶಾಲೆಯ ವಿದ್ಯಾರ್ಥಿಗಳು `ಶಿವಯೋಗಿ ಸಿದ್ಧರಾಮೇಶ್ವರ’ ನಾಟಕ ಪ್ರದರ್ಶಿಸಿದರೆ, ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ವಚನ ನೃತ್ಯರೂಪಕ ನೀಡಿದರು. ಇದೇ ಸಂದರ್ಭದಲ್ಲಿ ಶಾಲಾ ಕಟ್ಟಡದ ಸ್ಥಳ ದಾನಿಗಳ ನಾಮಫಲಕವನ್ನು ಮಾಗೋಡು ಕೊಟ್ರೇಶ್ ಅನಾವರಣಗೊಳಿಸಿದರು. ಯಶವಂತ ವಚನಗೀತೆ ಹಾಡಿದರು. ಅಧ್ಯಾಪಕಿ ಎಸ್. ಅನಿತಾ ಸ್ವಾಗತಿಸಿದರೆ, ಎಸ್. ಆರ್. ನಾಗರಾಜ್ ವಂದಿಸಿದರು. ಅಧ್ಯಾಪಕ ಡಾ. ಎಸ್. ಓ. ಷಣ್ಮುಖಪ್ಪ ಕಾರ್ಯಕ್ರಮ ನಿರ್ವಹಿಸಿದರು. ಶಿವಕುಮಾರ ಶ್ರೀಗಳ ಭಾವಚಿತ್ರಕ್ಕೆ ಪುಷ್ಪಾಂಜಲಿ ಅರ್ಪಿಸಲಾಯಿತು.