ಜಗಳೂರು, ಸೆ. 25 – ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ನಂಜುಂಡಸ್ವಾಮಿ ಬಣದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಪಟ್ಟಣದ ಪ್ರವಾಸಿ ಮಂದಿರದಿಂದ ಹೊರಟ ಪ್ರತಿಭಟನಾಕಾರರು ಅಧಿಕಾರಿಗಳ ವಿರುದ್ದ ಘೋಷಣೆ ಕೂಗುತ್ತಾ ಮಹಾತ್ಮಗಾಂಧಿ ವೃತ್ತ, ಅಂಬೇಡ್ಕರ್ ವೃತ್ತದ ಮೂಲಕ ತಾಲ್ಲೂಕು ಪಂಚಾಯಿತಿ ಕಛೇರಿ ಮುಂಭಾಗ ಜಮಾಯಿಸಿ ತಾ.ಪಂ.ಇಓಗೆ ಮನವಿ ಸಲ್ಲಿಸಿದರು.
ತಾಲ್ಲೂಕು ಅಧ್ಯಕ್ಷ ಕೆ. ಬಸವರಾಜಪ್ಪ ಮಾತನಾಡಿ, ತಾಲ್ಲೂಕಿನ 22 ಗ್ರಾಮ ಪಂಚಾಯಿತಿಗಳಲ್ಲಿ ಅಧಿಕಾರಿಗಳು ಸಕ್ರಿಯವಾಗಿ ಕಾರ್ಯ ನಿರ್ವಹಿಸದೇ ಅಭಿವೃದ್ದಿ ಕುಂಠಿತವಾಗಿದೆ. ಪಿಡಿಓಗಳು ಸಾರ್ವಜನಿಕರ ಅಹವಾಲುಗಳನ್ನು ಸಕಾಲದಲ್ಲಿ ಸ್ವೀಕರಿಸಿ, ವಿಲೇವಾರಿಗೊಳಿಸದೇ ವಿಳಂಬ ಮಾಡುತ್ತಿದ್ದಾರೆ.
ಬೆಳೆಗಳು ಕಟಾವಿಗೆ ಬಂದಿದ್ದು ಪ್ರತಿ ಪಂಚಾಯಿತಿ ವ್ಯಾಪ್ತಿಯಲ್ಲಿ ರೈತರ ಜಮೀನುಗಳ ರಸ್ತೆ ಪಕ್ಕದಲ್ಲಿ ಜಂಗಲ್ ಕಟ್ಟಿಂಗ್ ಮಾಡುತ್ತಿಲ್ಲ.
ಇ ಸ್ವತ್ತು ನೀಡಲು ಹಣದ ಬೇಡಿಕೆಯ ಕೂಗು ಕೇಳಿಬರುತ್ತಿವೆ. ಸಮರ್ಪಕ ಕುಡಿಯುವ ನೀರಿನ ಪೂರೈಕೆ, ಗ್ರಾಮಗಳಲ್ಲಿ ವಿದ್ಯುತ್ ದೀಪ, ಚರಂಡಿ ನಿರ್ಮಾಣ, ಸೇರಿದಂತೆ ಅಗತ್ಯ ಮೂಲಸೌಕರ್ಯ ಒದಗಿಸಬೇಕು ಎಂದು ಒತ್ತಾಯಿಸಿದರು.
ಸಂಘಟನೆ ಜಂಟಿ ಕಾರ್ಯದರ್ಶಿ ಭರಮ ಸಮುದ್ರ ಕುಮಾರ್ ಮಾತನಾಡಿ,’ತಾಲ್ಲೂಕಿನ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 14 ಮತ್ತು 15ನೇ ಹಣಕಾಸು ಅನುದಾನ ಸದ್ಬಳಕೆಯಾಗಬೇಕು. ಮನರೇಗಾ ಯೋಜನೆಯ ಕೂಲಿ ಕಾರ್ಮಿಕರ ಖಾತೆಗೆ ಸಕಾಲದಲ್ಲಿ ಹಣಪಾವತಿ ಯಾಗಬೇಕಿದೆ ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಂಘಟನೆ ಗೌರವಾಧ್ಯಕ್ಷ ಗುರುಸಿದ್ದಪ್ಪ, ಉಪಾಧ್ಯಕ್ಷ ಲೋಕೇಶ್,
ಆರ್. ವಕೀಲ ಓಬಳೇಶ್ ಪ್ರಧಾನ
ಕಾರ್ಯದರ್ಶಿ ಲಕ್ಷ್ಮಣನಾಯಕ, ಪದಾಧಿಕಾರಿಗಳಾದ ಖಾಸಿಂ ಸಾಹೇಬ್, ಪರಸಪ್ಪ ಚೌಡಪ್ಪ, ಮಂಜುನಾಥ್, ಪಾಲನಾಯಕ, ಶಿವಪ್ಪ, ಅಂಜಿನಪ್ಪ, ಸೇರಿದಂತೆ ಇದ್ದರು.