ಹರಿಹರ ತಾಲ್ಲೂಕು ಬಗರ್ ಹುಕ್ಕು ಸಮಿತಿ ಸಭೆಯಲ್ಲಿ ಶಾಸಕ ಬಿ.ಪಿ. ಹರೀಶ್
ಹರಿಹರ, ಸೆ.24- ಬಗರ್ ಹುಕ್ಕುಂ ಸಭೆ ಪ್ರಥಮ ಸಭೆಯಾಗಿರುವುದರಿಂದ ಹಲವಾರು ಗ್ರಾಮ ರೈತರ ಅರ್ಜಿಗಳ ವಿಚಾರಕ್ಕೆ ಸಂಬಂಧಿ ಸಿದಂತೆ ಬಹಳಷ್ಟು ಚರ್ಚೆಯ ವಿಚಾರಗಳಿಗೆ, ಅಲ್ಲದೇ ಅದಕ್ಕೆ ಪೂರಕವಾದ ದಾಖಲೆಗಳು ಸಮಂಜಸವಾಗಿ ಇರದೇ ಇರುವುದರಿಂದ ಅವುಗಳನ್ನು ಪರಿಶೀಲನೆ ನಡೆಸಲು ಸಮಯ ಬೇಕಾಗಿರುವುದರಿಂದ ಮುಂದಿನ 15 ದಿನದ ನಂತರ ಮತ್ತೊಮ್ಮೆ ಸಭೆಯನ್ನು ಆಯೋಜಿಸಿ ರೈತರ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳೋಣ ಎಂದು ಶಾಸಕ ಬಿ.ಪಿ. ಹರೀಶ್ ಹೇಳಿದರು.
ನಗರದ ತಹಶೀಲ್ದಾರ್ ಕಚೇರಿ ಸಭಾಂಗ ಣದಲ್ಲಿ ತಾಲ್ಲೂಕಿನ ಬಗರ್ ಹುಕುಂ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಈ ವೇಳೆ ರೈತ ದೇವೇಂದ್ರಪ್ಪ ಹಾಲಿವಾಣ ಮಾತನಾಡಿ ಗ್ರಾಮದ ಕಾರ್ಯದರ್ಶಿ ಅಣ್ಣಪ್ಪ ಎಂಬುವರು ಹಕ್ಕು ಪತ್ರ ನೀಡುವುದಾಗಿ 38ಕ್ಕು ಹೆಚ್ಚು ರೈತರಿಂದ 8 ರಿಂದ 10 ಸಾವಿರ ರೂಪಾಯಿ ಹಣವನ್ನು ಪಡೆದುಕೊಂಡು ವರ್ಷಾನುಗಟ್ಟಲೇ ಆದರೂ ಸಹ ಇದುವರೆಗೂ ಹಕ್ಕು ಪತ್ರವನ್ನು ನೀಡದೇ ರೈತರಿಗೆ ತೊಂದರೆ ನೀಡುತ್ತಿದ್ದಾರೆ. ಇವತ್ತು ಅದಕ್ಕೆ ಪರಿಹಾರ ಕಂಡುಕೊಳ್ಳಬಹುದು ಎಂಬ ಆಸೆಯಿಂದ ಸಭೆಗೆ ಬಂದರೆ ಶಾಸಕರು ವಿವಿಧ ಗ್ರಾಮಗಳಿಂದ ಬಂದು ಬೆಳಗ್ಗೆಯಿಂದ ಕಚೇರಿಯ ಹೊರಗಡೆ ಕಾದಿರುವ ರೈತರ ಸಮಸ್ಯೆಗಳನ್ನು ಆಲಿಸದೆ ತರಾತುರಿಯಲ್ಲಿ ಸಭೆಯನ್ನು ಮುಂದಿನ 15 ದಿನಗಳ ನಂತರ ಮಾಡಲಾಗುತ್ತದೆ ಎಂದು ತಿಳಿಸಿ ಸಭೆಯಿಂದ ದಿಢೀರ್ ಹೊರಗಡೆ ಹೋಗಿದ್ದು ಬಹಳಷ್ಟು ಬೇಸರ ತರಿಸಿದೆ ಎಂದು ಹೇಳಿದರು.
ಈ ವೇಳೆ ನೂತನ ಬಗರ್ ಹುಕ್ಕುಂ ಸದಸ್ಯರಾದ ಕರಿಬಸಪ್ಪ ಎಳಹೊಳೆ, ಚಂದ್ರಶೇಖರ್ ಹಳ್ಳಿಹಾಳ, ಸವಿತಾ ವಾಸನ ಮಾತನಾಡಿ, ನಾವು ಪ್ರಥಮ ಬಾರಿಗೆ ಸಭೆಗೆ ಆಗಮಿಸಿದ್ದು, ತಹಶೀಲ್ದಾರ್ ಮತ್ತು ಗ್ರಾಪಂ ವಿ.ಎ ರವರು ಯಾವ ಯಾವ ಗ್ರಾಮದ ರೈತರ ಅರ್ಜಿಗಳು ಬಂದಿವೆ ಎಂಬುದರ ಬಗ್ಗೆ ದಾಖಲೆಗಳ ಮೂಲಕ ಮಾಹಿತಿ ನೀಡಿದ್ದಾರೆ. ಅವುಗಳನ್ನು ಪರಿಶೀಲನೆ ನಡೆಸಿ, ನಂತರ ಮುಂದಿನ ಸಭೆಯಲ್ಲಿ ತಾಲ್ಲೂಕಿನ ಎಲ್ಲಾ ಗ್ರಾಮದ ರೈತರ ಸಮಸ್ಯೆಗಳನ್ನು ಪರಿಹರಿಸಲು ಮುಂದಾಗುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಗುರುಬಸವರಾಜ್, ಗ್ರಾಮ ಲೆಕ್ಕಾಧಿಕಾರಿ ಆನಂದ್, ಹೇಮಂತ್ ಕುಮಾರ್, ಸಮೀರ್, ಹೊಳಿಯಪ್ಪ, ರೇವಣಸಿದ್ದಪ್ಪ, ದೇವೇಂದ್ರಪ್ಪ, ಹಾಲಪ್ಪ, ನಾಗಪ್ಪ ಇತರರು ಹಾಜರಿದ್ದರು.