ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ ಜಿ.ಬಿ. ವಿನಯ್ ಕುಮಾರ್ ಕರೆ
ದಾವಣಗೆರೆ, ಸೆ. 24 – ಅಹಿಂದ ವರ್ಗದ ನಾಯಕ, ಮುಖ್ಯಮಂತ್ರಿ ಸಿದ್ದರಾಮಯ್ಯರ ಪರ ನಾವೆಲ್ಲರೂ ನಿಲ್ಲೋಣ. ಷಡ್ಯಂತ್ರ ಕೊನೆಗಾಣಿಸೋಣ. ರಾಜ್ಯದ ಜನರು ಸಿದ್ದರಾಮಯ್ಯರ ಪರ ನಿಲ್ಲಬೇಕಿದೆ ಎಂದು ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ ಜಿ. ಬಿ. ವಿನಯ್ ಕುಮಾರ್ ಕರೆ ನೀಡಿದ್ದಾರೆ.
ಮಾಜಿ ಮುಖ್ಯಮಂತ್ರಿಗಳಾದ ದೇವರಾಜ ಅರಸು, ಎಸ್. ಬಂಗಾರಪ್ಪ, ವೀರಪ್ಪ ಮೊಯ್ಲಿ ಸೇರಿದಂತೆ ಹಿಂದುಳಿದ ವರ್ಗಗಳ ನಾಯಕರನ್ನು ತುಳಿಯುವ ಕೆಲಸ ಮೊದಲಿನಿಂದಲೂ ರಾಜ್ಯದಲ್ಲಿ ನಡೆದಿದೆ. ಹಿಂದುಳಿದ, ಅಲ್ಪಸಂಖ್ಯಾತ, ದಲಿತರು, ಬಡವರು ರಾಜಕೀಯವಾಗಿ ಮುಂದೆ ಬರ ಬಾರದೆನ್ನುವ ಹುನ್ನಾರ ಅಡಗಿರುವುದು ಸ್ಪಷ್ಟ. ಬಂಡವಾಳಶಾಹಿಗಳು, ಮೇಲ್ವರ್ಗದವರ ಪಿತೂರಿ ಸಿದ್ದರಾಮಯ್ಯರ ಪ್ರಕರಣದಲ್ಲಿ ಕಂಡು ಬರುತ್ತಿದೆ ಎಂದು ಅವರು ಹೇಳಿದ್ದಾರೆ.