ಕೋಲ್ಕುಂಟೆ : ಅಂಗನವಾಡಿಗೆ ಶಾಸಕ ಬಸವಂತಪ್ಪ ಭೇಟಿ

ಕೋಲ್ಕುಂಟೆ : ಅಂಗನವಾಡಿಗೆ ಶಾಸಕ ಬಸವಂತಪ್ಪ ಭೇಟಿ

ಹಾಜರಿ ಹಾಕಿ ಹೋದ ಕಾರ್ಯಕರ್ತೆ ಬರಲೇ ಇಲ್ಲ !

ದಾವಣಗೆರೆ, ಸೆ. 24 – ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ಹಾಜರಾತಿ ಇಲ್ಲ. ಬೆಳಗ್ಗೆ ಮಕ್ಕಳು ಬಂದರೂ ಹಾಜರಾತಿ ಹಾಕಿಲ್ಲ. ಕಾರ್ಯಕರ್ತೆ ಬೆಳಿಗ್ಗೆ ಮಕ್ಕಳಿಗೆ ಊಟ ಕೊಟ್ಟು ಹಾಜರಿ ಪುಸ್ತಕದಲ್ಲಿ ಸಹಿ ಮಾಡಿ ಹೊರಗೆ ಹೋಗಿದ್ದರು. ಇದನ್ನು ಕಂಡು ಶಾಸಕ ಕೆ.ಎಸ್.ಬಸವಂತಪ್ಪ ಗರಂ ಆದರು.

ಮಾಯಕೊಂಡ ಕ್ಷೇತ್ರ ವ್ಯಾಪ್ತಿಯ ಕೋಲ್ಕುಂಟೆ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಮಂಗಳವಾರ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. 

ಮಕ್ಕಳಿಗೆ ಕೊಡುವ ಊಟ, ಆಹಾರ ಧಾನ್ಯ ದಾಸ್ತಾನು, ಮಕ್ಕಳ ಸಂಖ್ಯೆಯನ್ನು ಪರಿಶೀಲಿಸಿದರು. ಈ ವೇಳೆ ಅಂಗನವಾಡಿ ಕಾರ್ಯ ಕರ್ತೆ ಹಾಜರಿ ಹಾಕಿ ಹೊರ ಹೋಗಿದ್ದರು. 

ಶಾಸಕರು ಕಾರ್ಯಕರ್ತೆ ಬರುವವರೆಗೂ ಕೇಂದ್ರದಲ್ಲಿ ಎರಡು ತಾಸು ಕಾದರು. ಆದರೆ ಕಾರ್ಯಕರ್ತೆ ಬರಲಿಲ್ಲ. ಇದರಿಂದ ಸಹಾಯಕಿಯನ್ನು ಶಾಸಕರು ತರಾಟೆಗೆ ತೆಗೆದುಕೊಂಡರು.

ಅಂಗನವಾಡಿ ಕೇಂದ್ರದಲ್ಲಿ ಮಕ್ಕಳು ಇದ್ದರೂ ಹಾಜರಿ ಹಾಕಿಲ್ಲ. ಮಕ್ಕಳಿಗೆ ತಿಳಿದಷ್ಟು ಆಹಾರ ಕೊಡಲಾಗುತ್ತಿದೆ. ಆಹಾರ ಧಾನ್ಯ ಸರಿಯಾಗಿ ವಿತರಣೆ ಆಗುತ್ತಿಲ್ಲ. ಅಲ್ಲದೇ ಸಣ್ಣ ಮಕ್ಕಳು ಕೇಂದ್ರದ ಹೊರಗಡೆ ಆಟ ಆಡುತ್ತಿದ್ದವು. ಪೋಷಕರು ಇವರನ್ನು ನಂಬಿ ಅಂಗನವಾಡಿ ಕೇಂದ್ರಕ್ಕೆ ಕಳುಹಿಸುತ್ತಾರೆ. ಮಕ್ಕಳಿಗೆ ಏನಾದರೂ ತೊಂದರೆಯಾದರೆ ಯಾರು ಹೊಣೆ ? ಎಂದು ಪ್ರಶ್ನಿಸಿದರು.

ಕೂಡಲೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಅಂಗನವಾಡಿ ಕೇಂದ್ರದಲ್ಲಿರುವ ಸಮಸ್ಯೆ ಬಗ್ಗೆ ವಿವರಿಸಿ ಕಾರ್ಯಕರ್ತೆ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಗ್ರಾ.ಪಂ. ಉಪಾಧ್ಯಕ್ಷೆ ಜಯಮ್ಮ,  ಚಂದ್ರಪ್ಪ, ಅಣ್ಣಪ್ಪ, ಮಂಜಪ್ಪ, ಬಸಣ್ಣ, ಮುಖ್ಯ ಶಿಕ್ಷಕ ಚಂದ್ರಪ್ಪ ಹಾಗೂ ಗ್ರಾಮಸ್ಥರು ಹಾಜರಿದ್ದರು.

error: Content is protected !!