ವೈಚಾರಿಕ ಕ್ರಾಂತಿಕಾರ, ಕೃಷಿ ದಾಸೋಹಿ

ವೈಚಾರಿಕ ಕ್ರಾಂತಿಕಾರ, ಕೃಷಿ ದಾಸೋಹಿ

32ನೇ ಶ್ರದ್ಧಾಂಜಲಿ ಸಭೆಯಲ್ಲಿ ತರಳಬಾಳು ಹಿರಿಯ ಜಗದ್ಗುರು 

ಲಿಂ. ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಸ್ಮರಣೆ

ಸಿರಿಗೆರೆ, ಸೆ. 24 – ತರಳಬಾಳು ಹಿರಿಯ ಜಗದ್ಗುರು ಲಿಂ. ಶ್ರೀ ಶಿವಕುಮಾರ ಸ್ವಾಮೀಜಿ ಅವರು ವೈಚಾರಿಕ ಕ್ರಾಂತಿಕಾರಿ, ಕೃಷಿ ದಾಸೋಹಿ, ಸಾಮಾಜಿಕ ಸಾಧಕ ಎಂದು ಅವರ 32ನೇ ಶ್ರದ್ಧಾಂಜಲಿ ಸಭೆಯಲ್ಲಿ ಗಣ್ಯರು ಪ್ರಶಂಸಿಸಿ ನುಡಿ ನಮನ ಸಲ್ಲಿಸಿದರು.

ಸಿರಿಗೆರೆ ಮಠದಲ್ಲಿ ಆಯೋಜಿಸಲಾಗಿದ್ದ ಹಿರಿಯ ಜಗದ್ಗುರುಗಳ 32ನೇ ಶ್ರದ್ಧಾಂಜಲಿ ಸಭೆಯ ಅಂತಿಮ ದಿನದ ಸಭಾ ಕಾರ್ಯಕ್ರಮದಲ್ಲಿ ಹಲವಾರು ಗಣ್ಯರು ಮಾತನಾಡಿ, ಸಿರಿಗೆರೆ ಮಠವನ್ನು ಹಿರಿಯ ಜಗದ್ಗುರುಗಳು ಹೆಮ್ಮರವಾಗಿ ಬೆಳೆಸಿದ್ದಾರೆ ಎಂದರು.

ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಸಿರಿಗೆರೆ ಮಠದ ಜಗದ್ಗುರು ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಹಿರಿಯ ಜಗದ್ಗುರುಗಳು ಕವಿ ಹೃದಯ, ಕೋಮಲ ಮನಸ್ಸಿನವರಾಗಿದ್ದರು. ಆದರೆ, ಮಠಕ್ಕೆ ಬಂದ ಮೇಲೆ ಸಮಾಜದ ಜೊತೆ ಹೊಡೆದಾಡುವ ಸಮಯ ಬಂದಾಗ ದಿಟ್ಟತನದ ನಿಲುವು ತೆಗೆದುಕೊಳ್ಳಬೇಕಾಯಿತು. ಆತ್ಮನಿವೇದನೆ ಪುಸ್ತಕದಲ್ಲಿ ಅವರ ಅಂತರಂಗದ ಭಾವನೆಗಳು  ಅಭಿವ್ಯಕ್ತವಾಗಿವೆ. ದಿಟ್ಟ ಹೆಜ್ಜೆ – ಧೀರ ಗುರು ಪುಸ್ತಕದಲ್ಲಿ ಬಹಿರಂಗದ ಹೋರಾಟದ ವಿವರಗಳಿವೆ ಎಂದರು.

ಸಾಧು ಸದ್ಧರ್ಮ ವೀರಶೈವ ಸಂಘದ ಅಧ್ಯಕ್ಷ ಹೆಚ್.ಆರ್. ಬಸವರಾಜಪ್ಪ ಮಾತನಾಡಿ, ತಿಥಿ – ಪಂಚಾಂಗ ಇತ್ಯಾದಿಗಳನ್ನು ತೊಡೆದು ಹಾಕಿದ್ದ ಹಿರಿಯ ಜಗದ್ಗುರುಗಳು ವೈಚಾರಿಕ ಕ್ರಾಂತಿ ಮಾಡಿದ್ದರು. ಮಕ್ಕಳ ಬಯಸಿ ಬಂದವರಿಗೆ ಬೈದು ವೈದ್ಯರ ಬಳಿ ಕಳಿಸುತ್ತಿದ್ದರು. ಸಮಾಜ ವಿರೋಧ ಮಾಡಿದರೂ ಲೆಕ್ಕಿಸದೇ ದಲಿತರ ಜೊತೆ ಸಹಭೋಜನ ಮಾಡಿದ್ದರು ಎಂದು ಹೇಳಿದರು.

ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ ಮಾತನಾಡಿ, ಹಿರಿಯ ಜಗದ್ಗುರುಗಳು ಸಂಸ್ಕಾರ ಹಾಗೂ ಸಂಸ್ಕೃತಿ ಕಲಿಸಿದ್ದಾರೆ. ಗ್ರಾಮೀಣ ಜನರು, ರೈತರ ನೋವುಗಳಿಗೆ ಸ್ಪಂದಿಸಿದ್ದಾರೆ. ಹೀಗಾಗಿ ಮಠ ಜನರ ಮನಸ್ಸಿನಲ್ಲಿ ಗಟ್ಟಿಯಾಗಿ ಬೇರೂರಿದೆ ಎಂದರು.

ಹಿರಿಯ ಜಗದ್ಗುರುಗಳು ಆರ್ಥಿಕ, ರಾಜಕೀಯ ಹಾಗೂ ವ್ಯವಹಾರಿಕವಾಗಿ ಸಮಾಜವನ್ನು ಗಟ್ಟಿಗೊಳಿಸಿದ್ದಾರೆ. ಅಮವಾಸ್ಯೆಯಂದು ಮದುವೆ ಹಾಗೂ ವಿಧವಾ ವಿವಾಹದ ಮೂಲಕ ಸಮಾಜವನ್ನು ಬದಲಾವಣೆಯ ದಾರಿಗೆ ತಂದಿದ್ದರು ಎಂದು ತಿಳಿಸಿದರು.

ಮಾಜಿ ಪೊಲೀಸ್ ಮಹಾನಿರ್ದೇಶಕ ಶಂಕರ್ ಬಿದರಿ ಮಾತನಾಡಿ, ಹಿರಿಯ ಜಗದ್ಗುರುಗಳು ನುಡಿದಂತೆ ನಡೆದವರು. ಏನೇ ಟೀಕೆಗಳು ಎದುರಾದರೂ ಋಜು ಮಾರ್ಗ ಹಾಗೂ ಸಾತ್ವಿಕ ಮಾರ್ಗದಿಂದ ಎಂದೂ ಹಿಂದೆ ಸರಿದವರಲ್ಲ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿಕೊಂಡಿದ್ದ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಶಿವರಾಜ್ ಪಾಟೀಲ್ ಮಾತನಾಡಿ, ಸಿರಿಗೆರೆ ಮಠವು ಧರ್ಮಪೀಠ, ನ್ಯಾಯಪೀಠ ಹಾಗೂ ಜ್ಞಾನ ಪೀಠದ ತ್ರಿವೇಣಿ ಸಂಗಮವಾಗಿದೆ ಎಂದು ಪ್ರಶಂಸಿಸಿದರು.

ಇದೇ ವೇಳೆ ಹಿರಿಯ ಜಗದ್ಗುರು ಲಿಂ. ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ರಚಿಸಿರುವ ಆತ್ಮನಿವೇದನೆ ಹಾಗೂ ಸಂಕಲ್ಪ, ಅಕ್ಕಮಹಾದೇವಿ ಹಾಗೂ ಅಲ್ಲಮಪ್ರಭುದೇವರ ವಚನಗಳ ಹಿಂದಿ ಅನುವಾದ ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು. ಏತ ನೀರಾವರಿ ಯೋಜನೆ ಜಾರಿಯಲ್ಲಿ ಭಾಗಿಯಾಗಿದ್ದ ನೀರಾವರಿ ನಿಗಮದ ಅಧಿಕಾರಿಗಳನ್ನು ಸನ್ಮಾನಿಸಲಾಯಿತು.

ವೇದಿಕೆಯ ಮೇಲೆ ಹೊಳಲ್ಕೆರೆ ಶಾಸಕ ಎಂ. ಚಂದ್ರಪ್ಪ, ಉದ್ಯಮಿ ರಾಜು ಪಾಟೀಲ್, ಉದ್ಯಮಿ ಶ್ರೀನಿವಾಸ ಶಿವಗಂಗಾ,  ಪಬ್ಲಿಕ್ ಪ್ರಾಸಿಕ್ಯೂಟರ್ ಸಾವಿತ್ರಿ ರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.

ಸಿರಿಗೆರೆಯ ತರಳಬಾಳು ಜಗದ್ಗುರು ವಿದ್ಯಾ ಸಂಸ್ಥೆ ಆಡಳಿತಾಧಿಕಾರಿ ಹೆಚ್.ವಿ. ವಾಮದೇವಪ್ಪ ಸ್ವಾಗತಿಸಿದರು.

error: Content is protected !!