ಜಗಳೂರು ತಾಲ್ಲೂಕು ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಜಿ.ಎಸ್. ವೀಣಾ ಗೋಗುದ್ದು ರಾಜು
ಜಗಳೂರು, ಸೆ. 26 – ರೈತರ ಹಿತ ಕಾಪಾಡುವುದೇ ನಮ್ಮ ಬ್ಯಾಂಕ್‌ನ ಮೂಲ ಉದ್ದೇಶವಾಗಿದೆ ಎಂದು ತಾಲ್ಲೂಕು ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಜಿ.ಎಸ್. ವೀಣಾ ಗೋಗುದ್ದು ರಾಜು ಹೇಳಿದರು.
ಪಟ್ಟಣದ ವಾಲ್ಮೀಕಿ ಭವನದಲ್ಲಿ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ 2023-24ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜಗಳೂರು ತಾಲ್ಲೂಕು ಬರ ಪೀಡಿತ ಪ್ರದೇಶ. ಮಳೆ ಆಶ್ರಿತವಾಗಿಯೇ ಇಲ್ಲಿನ ಕೃಷಿ ಚಟುವಟಿಕೆಗಳು ನಡೆಯುತ್ತವೆ. ಇಂತಹ ಸಂದರ್ಭದಲ್ಲಿಯೂ ಸಹ ರೈತರು ಸ್ವಾಭಿಮಾನ ಉಳಿಸಿಕೊಂಡು ಶೇ. 90% ಸಾಲ ಮರು ಪಾವತಿ ಮಾಡಿ ಬ್ಯಾಂಕ್ ಅಭಿವೃದ್ಧಿಗೆ ಕೈ ಜೊಡಿಸಿದ್ದಾರೆ. ಸರ್ಕಾರದಿಂದ ಹೆಚ್ಚಿನ ಅನುದಾನ ಕೇಳ ಬೇಕಾದರೆ ಸಾಲ ಮರುಪಾವತಿ ಮಾಡಲೇ ಬೇಕಾದ್ದರಿಂದ ಆರ್ಥಿಕವಾಗಿ ಸಧೃಡವಾಗಿರುವ ರೈತ ಸದಸ್ಯರು ತಮ್ಮ ಸಾಲವನ್ನು ಸಕಾಲದಲ್ಲಿ ಪಾವತಿ ಮಾಡಿ ಉಳಿದ ರೈತರಿಗೆ ಸಹಾಯ ಮಾಡ ಬೇಕಿದೆ ಎಂದರು.
ಬ್ಯಾಂಕ್ ಪ್ರದಾನ ವ್ಯವಸ್ಥಾಪಕ ಟಿ. ನಾಗಭೂಷಣ್ ಮಾತನಾಡಿ, ಸಹಕಾರಿ ಬ್ಯಾಂಕ್‌ನಲ್ಲಿ 2605 ಸದಸ್ಯರಿದ್ದು ಈ ವರ್ಷದ ಮಾರ್ಚ್ ಅಂತ್ಯಕ್ಕೆ 86.12 ಲಕ್ಷ ಬ್ಯಾಂಕ್ ಷೇರು ಮೊತ್ತವಿರುತ್ತದೆ. ರಾಜ್ಯ ಬ್ಯಾಂಕ್ ವತಿಯಿಂದ 214.26 ಲಕ್ಷ ಸಾಲ ಪಡೆಯಲಾಗಿದೆ. ಶೇ.90 ಸಾಲ ರಾಜ್ಯ ಬ್ಯಾಂಕ್‌ಗೆ ಮರುಪಾವತಿಯಾಗಿದೆ ಎಂದರು. 1 ಕೋಟಿ 30 ಲಕ್ಷ ಹಣ ಹೂಡಿಕೆ ಯಾಗಿದೆ. ಬ್ಯಾಂಕ್ ವತಿಯಿಂದ ಇ. ಸ್ಟಾಪಿಂಗ್, ಸೇವಾ ಕೇಂದ್ರ, ಉಳಿತಾಯ ಖಾತೆ, ನಿಶ್ಚಿತ ಠೇವಣಿ ಹಾಗೂ ಪಿಗ್ಮಿ ಖಾತೆಗಳಲ್ಲಿ ವ್ಯವಹರಿಸಲು ಅವಕಾಶ ಮಾಡಿಕೊಡಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬ್ಯಾಂಕ್ ಉಪಾಧ್ಯಕ್ಷೆ ದ್ಯಾಮಕ್ಕ , ಸದಸ್ಯರಾದ ಕೆ. ತಿಮ್ಮರಾಯಪ್ಪ, ಯು.ಜಿ. ವಾಮದೇವಪ್ಪ, ಎಂ.ಟಿ. ಧನಂಜಯ್, ಕೆ.ಬಿ.ಚೌಡಮ್ಮ, ಎಂ.ವಿ. ರಾಜು, ಕೆ.ಬಿ. ಸಿದ್ದೇಶ್, ಸಿ.ಟಿ. ರಾಘವೇಂದ್ರ, ಜೆ.ಶ್ರೀನಿವಾಸ್, ಎನ್. ರಾಘವೇಂದ್ರ ಸೇರಿದಂತೆ ಸದಸ್ಯರು ಭಾಗವಹಿಸಿದ್ದರು.