ಕಲೆ ಜನಪರವಾಗಿರಲಿ, ಮಕ್ಕಳಲ್ಲಿ ಕಲೆ ಅಭಿರುಚಿ ಬೆಳೆಸಿ

ಕಲೆ ಜನಪರವಾಗಿರಲಿ, ಮಕ್ಕಳಲ್ಲಿ ಕಲೆ ಅಭಿರುಚಿ ಬೆಳೆಸಿ

ಕಲಾ ಶಾಲೆಯ ವಜ್ರ ಮಹೋತ್ಸವ ಸಮಾರೋಪದಲ್ಲಿ ಕರ್ನಾಟಕ ಲಲಿತಕಲಾ ಅಕಾಡೆಮಿ ಅಧ್ಯಕ್ಷ ಪ.ಸ. ಕುಮಾರ್

ದಾವಣಗೆರೆ, ಸೆ. 22- ಚಿತ್ರಕಲೆ ಜನಪರವಾಗಿರಲಿ. ಕಲಾವಿದರು ಚಿತ್ರಕಲೆ ಮೂಲಕ ನೇರವಾಗಿ ಜನರನ್ನು ತಲುಪಬೇಕಾಗಿದೆ. ಮಕ್ಕಳಲ್ಲಿಯೂ ಕಲೆಯ ಅಭಿರುಚಿ ಬೆಳೆಸಬೇಕಾದ ಅವಶ್ಯವಿದೆ ಎಂದು ಕರ್ನಾಟಕ ಲಲಿತಕಲಾ ಅಕಾಡೆಮಿ ಅಧ್ಯಕ್ಷ ಪ.ಸ. ಕುಮಾರ್ ಹೇಳಿದರು.

ವಿಶ್ವವಿದ್ಯಾನಿಲಯ ದೃಶ್ಯಕಲಾ ಮಹಾವಿದ್ಯಾಲಯದ ವತಿಯಿಂದ ಎರಡು ದಿನಗಳ ಕಾಲ ನಡೆದ ದಾವಣಗೆರೆ ಕಲಾ ಶಾಲೆಯ ವಜ್ರ ಮಹೋತ್ಸವ ಸಮಾರೋಪ ಸಮಾರಂಭದಲ್ಲಿ ಸಮಾರೋಪ ನುಡಿಗಳನ್ನಾಡಿದರು.

ಇತರೆ ಕಲಾವಿದರಿಗೆ ಇರುವ ಗಟ್ಟಿಧ್ವನಿ, ಗಡಸುತನ ಚಿತ್ರಕಲಾವಿದರಲ್ಲಿ ಇಲ್ಲದಿರುವುದು ವಿಷಾದದ ಸಂಗತಿಯಾ ಗಿದೆ. ನಾಡಿನ ಏನೆ ಗಂಭೀರ ಮತ್ತು ಜನಪರ ಸಮಸ್ಯೆಗಳ ಬಗ್ಗೆ ಕಲಾವಿದರೂ ಧ್ವನಿ ಎತ್ತಬೇಕಾಗುತ್ತದೆ ಎಂದರು.

ಸಾಹಿತಿಗಳು, ಲೇಖಕರು, ಬರಹಗಾರರು ತಮ್ಮ ಲೇಖನ, ಪದ್ಯ, ಅಂಕಣಗಳ ಮೂಲಕ ಜನಪರವಾಗಿ ಇರುವುದನ್ನು ತೋರಿಸಿಕೊಡುತ್ತಾರೆ.ಹಾಗೆಯೇ ಚಿತ್ರಕಲಾವಿದರು ಕೂಡ ತಮ್ಮ ಕಲೆಯನ್ನು ಜನಪರವನ್ನಾಗಿಸಿ, ಜನರನ್ನು ನೇರವಾಗಿ ತಲುಪುವಂತೆ ಮಾಡಬೇಕಾಗಿದೆ ಎಂದು ಹೇಳಿದರು.

ಲಲಿತಕಲಾ ಕಾಲೇಜುಗಳು ಸಹ ಆಧುನಿಕತೆಗೆ ತಕ್ಕಂತೆ ಬದಲಾಗಬೇಕಾಗಿದೆ. ತನ್ಮೂಲಕ ಕಲಾವಿದರು ಒಟ್ಟುಧ್ವನಿ ಎತ್ತಿದಾಗ ಮಾತ್ರ ಕಲಾವಿದರ ಅಸ್ತಿತ್ವ ಗೊತ್ತಾಗುತ್ತದೆ. ಎಲ್ಲಾ ಕಲಾವಿದರು ಸಂಘಟಿತರಾಗಿ ಬಂದಾಗ ಅಕಾಡೆಮಿ ಇನ್ನಷ್ಟು ಬಲಗೊಳ್ಳುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟರು.

ವಿಶ್ವವಿದ್ಯಾನಿಲಯ ದೃಶ್ಯಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಜೈರಾಜ್ ಎಂ. ಚಿಕ್ಕಪಾಟೀಲ್ ಮಾತ ನಾಡಿ, ಕನ್ನಡ ಸಾಹಿತ್ಯ ಸಮ್ಮೇಳನ ಮಾದರಿಯಲ್ಲಿ `ಚಿತ್ರಕಲಾ ಸಮ್ಮೇಳನ’ ನಡೆಸಬೇಕು ಮತ್ತು ನಾಡಿನ ಲಲಿತಕಲಾ ಮಹಾವಿದ್ಯಾಲಯಗಳನ್ನು ಲಲಿತಕಲಾ ಅಕಾಡೆಮಿಗೆ ಆಯ್ಕೆ ಮಾಡುವ ಮೂಲಕ ವರ್ಷದ ಉತ್ತಮ ಕಾಲೇಜು ಎಂದು ಗೌರವಿಸಬೇಕು ಎಂಬ ಇಂಗಿತ ವ್ಯಕ್ತಪಡಿಸಿದರು.

ನಾವು ನೋಡುವ ದೃಷ್ಟಿಕೋನ ಮೊದಲು ಸರಿ ಇರಬೇಕು. ಯಾವುದನ್ನೇ ಆಗಲಿ ಸಕಾರಾತ್ಮಕ ಮನೋಭಾವದಿಂದ ನೋಡಬೇಕಾಗುತ್ತದೆ. ಆಧುನಿಕತೆಯ ಬದಲಾದ ವ್ಯವಸ್ಥೆಗೆ ಅನುಗುಣವಾಗಿ ನಾವು ಬದಲಾಗಬೇಕಾದ ಅನಿವಾರ್ಯತೆ ಇದೆ. ಎಲ್ಲಾ ಕಲಾ ಶಾಲೆಗಳಿಗಿಂತ ಮಾದರಿ ಶಾಲೆಯನ್ನಾಗಿ ದಾವಣಗೆರೆ ವಿಶ್ವವಿದ್ಯಾನಿಲಯ ದೃಶ್ಯಕಲಾ ಮಹಾವಿದ್ಯಾಲಯವನ್ನು ಮಾಡಬೇಕಾಗಿದೆ. ಇದಕ್ಕೆ ಹಳೆ ವಿದ್ಯಾರ್ಥಿಗಳು, ನಿವೃತ್ತ ಪ್ರಾಧ್ಯಾಪಕರು ಹಾಗೂ ಹಾಲಿ ವಿದ್ಯಾರ್ಥಿಗಳ ಸಹಕಾರ ಅತ್ಯಗತ್ಯ ಎಂದರು.

ಅಧ್ಯಕ್ಷರು ಮತ್ತು ವಜ್ರಮಹೋತ್ಸವ ಸಮಿತಿ ಸದಸ್ಯರಾದ ಚಿ.ಸು. ಕೃಷ್ಣಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇದೇ ವೇಳೆ ನಿವೃತ್ತ ಪ್ರಾಧ್ಯಾಪಕರಾದ ಎಲ್.ಕೆ. ಹನುಮಂತಾಚಾರ್‌, ಜಿ.ಹೆಚ್.ಸೂಗೂರು, ಬಿ. ಸೋಮಶೇಖರಪ್ಪ ಅವರನ್ನು ಸಮಿತಿ ವತಿಯಿಂದ ಗೌರವಿಸಲಾಯಿತು.

ಕೀರ್ತನಾ, ಜಯಲಕ್ಷ್ಮಿ, ಅರುಣ್ ಕುಮಾರ್ ಹಾಗೂ ವಿನಯ್ ಕುಮಾರ್ ಈ ನಾಲ್ವರು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಕಾರ್ಯಕ್ರಮದಲ್ಲಿ ಗಣಪತಿ ಎಸ್.ಹೆಗಡೆ, ಸುರೇಶ್ ಎಸ್. ವಾಘ್ಮೋರೆ, ಗೋಪಾಲಕೃಷ್ಣ ಮನುವಾಚಾರ್ಯ, ಸತೀಶ್, ದತ್ತಾತ್ರೇಯ ಭಟ್, ಮಹಾಂತೇಶ ಹರ್ತಿ, ಸುನೀಲ್ ಮಳಗಿ, ನಾಗಪತಿ ಭಟ್, ಕೆ.ಎಂ. ಶೇಷಗಿರಿ, ಗಣೇಶ್ ಧಾರೇಶ್ವರ, ಶೀಲವಂತ ಯಾದಗಿರಿ ಮುಂತಾದವರಿದ್ದರು.

error: Content is protected !!