ದಾವಣಗೆರೆ, ಸೆ. 20 – ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ. ಕೆಂಪಣ್ಣ ನಿಧನದ ಸುದ್ದಿ ತಿಳಿದು ರಾಜ್ಯದ ಗುತ್ತಿಗೆದಾರರಿಗೆ ದಿಗ್ಬ್ರಮೆ ಮೂಡಿಸಿದೆ ಎಂದು ಜಿಲ್ಲಾ ಗುತ್ತಿಗೆದಾರರ ಸಂಘದ ಅಧ್ಯಕ್ಷರು ಹಾಗೂ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಮಾಜಿ ಉಪಾಧ್ಯಕ್ಷ ಡಿ. ಬಸವರಾಜ್ ಕೆಂಪಣ್ಣ ನಿಧನಕ್ಕೆ ಶ್ರದ್ಧಾಂಜಲಿ ಸಭೆಯಲ್ಲಿ ಕಂಬನಿ ಮಿಡಿದರು.
ಇಂದಿಲ್ಲಿ ಸಂಘದ ಕಚೇರಿಯಲ್ಲಿ ಏರ್ಪಡಿಸಿದ್ದ ಕೆಂಪಣ್ಣನವರ ಶ್ರದ್ಧಾಂಜಲಿ ಸಭೆಯಲ್ಲಿ ಕೆಂಪಣ್ಣನವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ದೇಶಾದ್ಯಂತ ಸುದ್ದಿ ಮಾಡಿದ್ದ 40 % ಕಮಿಷನ್ ಭ್ರಷ್ಟಾಚಾರ ಹಗರಣವನ್ನು ಹೊರತಂದು, ರಾಜ್ಯದಲ್ಲಿ ಗುತ್ತಿಗೆ ಕಾಮಗಾರಿಗಳಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರದ ವಿರುದ್ದ ಅವರು ಜೀವದ ಹಂಗು ತೊರೆದು ಸೆಟೆದು ನಿಂತಿದ್ದನ್ನು ಡಿ. ಬಸವರಾಜ್ ಸ್ಮರಿಸಿದರು. ಯಾವುದೇ ಒತ್ತಡ, ಆಮಿಷಗಳಿಗೆ ಒಳಗಾಗದ ನಿರ್ಭೀತ ಧ್ವನಿಯೊಂದನ್ನು ನಾಡು ಇಂದು ಕಳೆದುಕೊಂಡಿದೆ ಎಂದು ಅವರು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಬಿಜೆಪಿಯ 40% ಭ್ರಷ್ಟಾಚಾರ ಹಗರಣಗಳ ತನಿಖೆಗೆ ಆದೇಶಿಸಿ ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗದ ರಚಿಸಿದ್ದು, ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗದ ಮುಂದೆ ಭ್ರಷ್ಟಾಚಾರ ಹಗರಣಗಳ 8000 ಪುಟಗಳ ದಾಖಲಾತಿಗಳನ್ನು ಒದಗಿಸಿರುವ ಕೆಂಪಣ್ಣ ನವರು ಜೀವನದ ಕೊನೆ ಉಸಿರು ಇರುವ ತನಕ ಗುತ್ತಿಗೆದಾರರ ಹಿತ ಚಿಂತನೆಗಾಗಿ ಶ್ರಮಿಸಿದರು ಎಂದು ಬಸವರಾಜ್ ಸ್ಮರಿಸಿದರು. ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದಲ್ಲಿ ಕಳೆದ ಮೂರು ದಶಕಗಳ ಅವಧಿಗೂ ಮೀರಿ ಕೆಂಪಣ್ಣನವರ ಒಟ್ಟಿಗೆ ಕೆಲಸ ಮಾಡಿರುವುದನ್ನು ಅವರು ನೆನಪಿಸಿಕೊಂಡರು.
ಕೆಂಪಣ್ಣನವರ ಶ್ರದ್ಧಾಂಜಲಿ ಸಭೆಯಲ್ಲಿ ಗುತ್ತಿಗೆದಾರರಾದ ಜಿ.ಎಲ್. ಚಂದ್ರಶೇಖರ್, ಕೆ.ಎಂ. ಮಂಜುನಾಥ್, ಡಿ. ಶಿವಕುಮಾರ್, ಬಿ.ಹೆಚ್. ಉದಯಕುಮಾರ್, ಬಿ.ಎಸ್. ಸುರೇಶ್, ಎಂ.ಕೆ. ಲಿಯಾಖತ್ ಅಲಿ, ಗಿರಿಧರ್ ಸಾತಾಲ್, ಜಿ.ಡಿ. ನವೀನ್ ಕುಮಾರ್, ಚಿಗಟೇರಿ ಕೊಟ್ರೇಶ್, ಆರ್.ಶಿವಪ್ರಸಾದ್, ಹೆಚ್. ಹರೀಶ್, ಫಾರುಕ್, ಮಂಜುನಾಥ್, ರಾಜಶೇಖರ್, ಅಶೋಕ್ ಸೇರಿದಂತೆ ಇತರರು ಹಾಜರಿದ್ದರು.