ದಾವಣಗೆರೆ, ಸೆ.20- ಪಂಚಮಸಾಲಿ ಸಮಾ ಜಕ್ಕೆ 2ಎ ಮೀಸಲಾತಿ ನೀಡಬೇಕೆಂದು ಆಗ್ರಹಿಸಿ ನಾಡಿದ್ದು ದಿನಾಂಕ 22ರ ಭಾನುವಾರ ಬೆಳಗ್ಗೆ 10 ಗಂಟೆಗೆ ಬೆಳಗಾವಿಯಲ್ಲಿ ಪಂಚಮಸಾಲಿ ವಕೀಲರ ರಾಜ್ಯ ಮಟ್ಟದ ಸಮಾವೇಶ ನಡೆಯಲಿದೆ ಎಂದು ಕೂಡಲ ಸಂಗಮ ಪಂಚಮಸಾಲಿ ಪೀಠಾಧ್ಯಕ್ಷ ಬಸವ ಜಯ ಮೃತ್ಯುಂಜಯ ಶ್ರೀಗಳು ತಿಳಿಸಿದರು.
ಮೊನ್ನೆ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾ ಡಿದ ಶ್ರೀಗಳು, ಶಾಸಕಾಂಗ ಸರಿಯಾಗಿ ಸ್ಪಂದಿಸದ ಕಾರಣ ಕಾನೂನಿನ ಮೂಲಕ ಸರ್ಕಾರಕ್ಕೆ ಒತ್ತಡ ಹೇರಿ ನ್ಯಾಯ ಪಡೆಯಲು, ಅಂದು ರಾಜ್ಯದ ವಿವಿಧ ಜಿಲ್ಲೆಗಳಿಂದ ಸಾವಿರಾರು ವಕೀಲರು ಭಾಗ ವಹಿಸಲಿದ್ದು, ಕಾನೂನು ಮೂಲಕ ಸರ್ಕಾರದ ಮೇಲೆ ಒತ್ತಡ ಹೇರಲು ವಕೀಲರ ಸಮಾವೇಶ ನಡೆಸಲು ಸಂಘಟಿಸಲಾಗುತ್ತಿದೆ ಎಂದರು.
ಪಂಚಮಸಾಲಿ ಹೋರಾಟ ನಿಂತ ನೀರಲ್ಲ. ನಿರಂತರವಾಗಿ ನಡೆಯುತ್ತದೆ. ಅದೇ ರೀತಿ ಈ ಸಮಾಜದಕ್ಕೆ 2ಎ ಮೀಸಲಾತಿ ಪ್ರಮಾಣಪತ್ರ ಸಿಗುವವರೆಗೂ ಹೋರಾಟ ಮುಂದುವರಿಯುತ್ತದೆ.
ಪಂಚಮಸಾಲಿ ಮೀಸಲಾತಿ ಹೋರಾಟಕ್ಕೆ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಸಿಕ್ಕಷ್ಟು ಸ್ಪಂದನೆ ಈಗಿನ ಕಾಂಗ್ರೆಸ್ ಸರ್ಕಾರದಿಂದ ಸಿಕ್ಕಿಲ್ಲ. ಹೋರಾಟಕ್ಕಿಳಿದಾಗ ಬಿಜೆಪಿಯವರು ಬಂದು ಭರವಸೆಯ ಮಾತುಗಳನ್ನಾಡಿ ಹೋರಾಟಕ್ಕೆ ಗೌರವ ಕೊಡುತ್ತಿದ್ದರು. ಆದರೆ, ಈಗಿನ ಕಾಂಗ್ರೆಸ್ ಸರ್ಕಾರ ಹೋರಾಟವನ್ನು ಸಂಪೂರ್ಣವಾಗಿ ನಿರ್ಲಕ್ಷಿಸುತ್ತಿದೆ ಎಂದು ದೂರಿದರು.
ಹಿಂದಿನ ಬಿಜೆಪಿ ಸರ್ಕಾರ ವಿರುದ್ಧ ನಾವು ಮಾಡಿದ ಹೋರಾಟದ ಫಲವಾಗಿಯೇ ಈಗ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಕ್ಕೆ ಪಂಚಮಸಾಲಿ ಗಳ ಕೊಡುಗೆಯನ್ನು ಮುಖ್ಯಮಂತ್ರಿಯವರು ಮರೆಯುವಂತಿಲ್ಲ. ಕಾನೂನು ಹೋರಾಟಕ್ಕೂ ಮೊದಲೇ ಸರ್ಕಾರ ಎಚ್ಚೆತ್ತುಕೊಂಡು ಪಂಚಮಸಾಲಿಗಳ ಮೀಸಲಾತಿಗೆ ಕ್ರಮವಹಿಸಲಿ ಎಂದು ಸ್ವಾಮೀಜಿ ಆಗ್ರಹಿಸಿದರು. ವಕೀಲರಾದ ಯೋಗೇಶ್, ರವಿಶಂಕರ್, ಹೆಚ್. ಗುರುಮೂರ್ತಿ, ರಮೇಶ್, ಮುರುಗೇಶ್, ಬಸವರಾಜಪ್ಪ, ಶಿವಕುಮಾರ್ ಸುದ್ದಿಗೋಷ್ಠಿಯಲ್ಲಿದ್ದರು.