ದಾವಣಗೆರೆ, ಸೆ. 19 – ನಗರದ ರೈಲ್ವೆ ನಿಲ್ದಾಣದಲ್ಲಿ ನಿನ್ನೆ ರಾತ್ರಿ 12 ಗಂಟೆಗೆ ಆರ್ಪಿಎಫ್ ಮತ್ತು ಜಿಆರ್ಪಿ ಸಿಬ್ಬಂದಿಗಳು ಗಸ್ತಿನಲ್ಲಿದ್ದಾಗ ವಿಶ್ರಾಂತಿ ಕೊಠಡಿ ಹತ್ತಿರ ಅನುಮಾನಾಸ್ಪದವಾಗಿ ಇಟ್ಟಿದ್ದ ಬ್ಯಾಗ್ಗಳನ್ನು ನೋಡಿ, ಆರ್ಪಿಎಫ್ ಪೋಸ್ಟ್ ಕಮಾಂಡರ್ಗೆ ತಿಳಿಸಲಾಗಿದೆ.
ತಕ್ಷಣ ಆರ್ಪಿಎಫ್ ಪೋಸ್ಟ್ ಕಮಾಂಡರ್ ಬಿ.ಎನ್. ಕುಬೇರಪ್ಪ ನಿರೀಕ್ಷಕ ಸಂತೋಷ್ ಪಾಟೀಲ್, ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಬಂದು ಮತ್ತು ಬ್ಯಾಗ್ಗಳ ಸುತ್ತಲಿನ ಪ್ರದೇಶವನ್ನು ಪ್ಲೋರಸೆಂಟ್ ಟೇಪ್ಗಳ ಮೂಲಕ ಸುತ್ತುವರೆದು, ಎಲ್ಲಾ ಪ್ರಯಾಣಿಕರನ್ನು ಹತ್ತಿರದ ಪ್ರದೇಶದಿಂದ ತೆರವುಗೊಳಿಸಿ ಬಂದೋಬಸ್ತ್ ಮೂಲಕ ಪ್ರಯಾಣಿಕರ ಚಲನೆಯನ್ನು ನಿರ್ಭಂದಿಸಿದರು. ಆ ಹೊತ್ತಿಗೆ ಅಗ್ನಿಶಾಮಕ ಅಧಿಕಾರಿ ನಾಗೇಶ್ ಸ್ಥಳಕ್ಕೆ ಆಗಮಿಸಿ ವಿಧಿವಿಜ್ಞಾನ ಅಪರಾಧ ಅಧಿಕಾರಿಗಳು, ಸ್ಥಳೀಯ ಜಿಲ್ಲಾ ಪೆೊಲೀಸ್ ಶ್ವಾನದಳ ಮತ್ತು ವಿಧ್ವಂಸಕ ತಡೆ ತಪಾಸಣಾ ತಂಡ ಮತ್ತು ಆರ್ಪಿಎಫ್ ಡಾಗ್ ಸ್ಕ್ವಾಡ್ ಸ್ಥಳಕ್ಕೆ ಆಗಮಿಸಿ ಎಆರ್ಎಸ್ಐ ವೀರಭದ್ರಪ್ಪ ಮತ್ತು ಪ್ರಕಾಶ್ ಡಾಗ್ ಸ್ಕ್ವಾಡ್ ತಂಡವು ಶ್ವಾನ ದೃತಿ ಮತ್ತು ಶ್ವಾನ ವಾರಿಯರ್ ಸಹಾಯದಿಂದ ಬ್ಯಾಗ್ಗಳನ್ನು ಪರೀಕ್ಷಿಸಿ ಸ್ಫೋಟಕ ವಸ್ತುಗಳಿದ್ದ ಚೀಲವನ್ನು ಗುರುತಿಸಿ ಬ್ಯಾಗ್ ತೆರೆದಾಗ ಒಂದು ಪಿಸ್ತೂಲ್ ಮತ್ತು ಮದ್ದುಗುಂಡುಗಳು ಇರುವುದು ಕಂಡುಬರುತ್ತದೆ.
ನಂತರ ಅಪರಾಧ ದೃಶ್ಯ ತನಿಖಾಧಿಕಾರಿಗಳಾದ ದೇವರಾಜ್ ಮತ್ತು ರಘುನಾಥ್ ಅವರು ಸ್ಥಳಕ್ಕೆ ಆಗಮಿಸಿ ಸಂಪೂರ್ಣ ಪರಿಶೀಲನೆ ನಡೆಸಿ ಸ್ಥಳದಿಂದ ಮಾದರಿಗಳನ್ನು ಸಂಗ್ರಹಿಸಿ ಬ್ಯಾಗ್ನಲ್ಲಿರುವ ವಸ್ತುಗಳ ಅಗತ್ಯ ಮಾದರಿಗಳನ್ನು ಎಸ್ಒಸಿ ಕಿಟ್ ಬಳಸಿ ಎಚ್ಚರಿಕೆಯಿಂದ ಸಂಗ್ರಹಿಸಿ ಪಿಸ್ತೂಲ್ ಮತ್ತು ಮದ್ದುಗುಂಡುಗಳನ್ನು ಆರ್ಪಿಎಫ್ ನಿರೀಕ್ಷಕರಿಗೆ ಹಸ್ತಾಂತರಿಸಿದರು.