ಮಲೇಬೆನ್ನೂರು, ಸೆ. 17- ಇಲ್ಲಿನ ನೀರಾವರಿ ಇಲಾಖೆಯ ಕಚೇರಿ ಮೈದಾನದಲ್ಲಿ ಪ್ರತಿಷ್ಠಾಪಿಸಿರುವ 3ನೇ ವರ್ಷದ ಹಿಂದೂ ಮಹಾಗಣಪತಿ ಮಹೋತ್ಸವದ ಅಂಗವಾಗಿ ಪಿಡಬ್ಲ್ಯೂಡಿ ಕ್ರಿಕೆಟರ್ಸ್ ವತಿಯಿಂದ ಹಮ್ಮಿಕೊಂಡಿದ್ದ ರಂಗೋಲಿ ಸ್ಪರ್ಧೆಯಲ್ಲಿ ಪಟ್ಟಣದ ಮುಸ್ಲಿಂ ಮಹಿಳೆ ನಗೀನಾ ಬಾನು ಅವರು ಪ್ರಥಮ ಸ್ಥಾನಗಳಿಸುವ ಮೂಲಕ ಗಮನ ಸೆಳೆದಿದ್ದಾರೆ.
ಹಿಂದೂಗಳೇ ನಡೆಸಿದ ರಂಗೋಲಿ ಸ್ಪರ್ಧೆಯಲ್ಲಿ ಮುಸ್ಲಿಂ ಮಹಿಳೆಯೊಬ್ಬರು ಭಾಗವಹಿಸಿ ಪ್ರಥಮ ಸ್ಥಾನದಲ್ಲಿ ವಿಜೇತರಾಗುವ ಮೂಲಕ ಕೋಮು ಸೌಹಾರ್ದತೆಗೆ ಸಾಕ್ಷಿಯಾಗುವುದುರ ಜೊತೆಗೆ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾದರು.
ರಂಗೋಲಿ ಸ್ಪರ್ಧೆಯಲ್ಲಿ ನಗೀನಾ ಬಾನು ಇವರು ಬಿಡಿಸಿದ್ದ `ಹೆಣ್ಣು ಮಕ್ಕಳ ರಕ್ಷಿಸಿ ಮತ್ತು ಅವಳಿಗೆ ನ್ಯಾಯ ಕೊಡಿ’ ಎಂಬ
ಸಂದೇಶ ಸಾರುವ ರಂಗೋಲಿ ಚಿತ್ರ ಜನರ ಗಮನ ಸೆಳೆದು, ಪ್ರಥಮ ಬಹುಮಾನ ಗಳಿಸಿತು.
ರಂಗೋಲಿ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಪೂಜಾ ಶೇಖರಪ್ಪ, ತೃತೀಯ ಬಹುಮಾನ ರಾಧಾ ಬಿ.ಎಸ್., 4ನೇ ಬಹುಮಾನ ಸಹನಾ ನಾಗರಾಜ್, 5ನೇ ಬಹುಮಾನವನ್ನು ಜಯಮ್ಮ ಗಳಿಸಿದರು.
ವಿಜೇತರಿಗೆ ಹಿಂದೂ ಮಹಾಗಣಪತಿ ಸಮಿತಿ ಅಧ್ಯಕ್ಷ ಅಶೋಕ್ ಯರೆಚಿಕ್ಕನಹಳ್ಳಿ, ಖಜಾಂಚಿ ಪಿ ಆರ್ ರಾಜು, ಪಿಡಬ್ಲ್ಯೂಡಿ ಕ್ರಿಕೆಟರ್ಸ್ ಅಧ್ಯಕ್ಷ ಎ ಕೆ ಆಂಜನೇಯ ಮತ್ತಿತರರು ಬಹುಮಾನ ವಿತರಿಸಿದರು.
40ಕ್ಕೂ ಹೆಚ್ಚು ಮಹಿಳೆಯರು ರಂಗೋಲಿ ಸ್ಪರ್ಧೆಯಲ್ಲಿ ಪಾಲ್ಗೊಂಡು ಅತ್ಯಾಕರ್ಷಕ ರಂಗೋಲಿ ಚಿತ್ರಗಳನ್ನು ಬಿಡಿಸಿದ್ದು, ಜನರ ಗಮನ ಸೆಳೆದವು.