ದಾವಣಗೆರೆ, ಸೆ.17- ತಾಲ್ಲೂಕಿನ ಗೋಣಿವಾಡದ ಶ್ರೀ ಸೋಮೇಶ್ವರ ವಿದ್ಯಾಲಯ ಹಾಗೂ ಸರ್.ಎಂ.ವಿ. ಎಲೈಟ್ ಒಲಂಪಿಯಾಡ್ ಶಾಲೆಯಲ್ಲಿ ಈಚೆಗೆ ಶ್ರೀಕೃಷ್ಣ ಜನ್ಮಾಷ್ಠಮಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಈ ವೇಳೆ ಶಾಲೆಯ ಪ್ರಾಚಾರ್ಯರಾದ ವೀಣಾ ಮಾತ ನಾಡಿ, ಭಾರತೀಯ ಸಾಂಸ್ಕೃತಿಕ ಪರಂಪರೆಯು ಅರ್ಥ ಪೂರ್ಣ ಸಂಪ್ರದಾಯಗಳನ್ನು ಒಳಗೊಂಡಿದೆ. ಭಾರತೀ ಯರು ಅತ್ಯಂತ ಸಂಭ್ರಮ ಹಾಗೂ ಭಕ್ತಿಭಾವದಿಂದ ಆಚರಿ ಸುವ ಹಬ್ಬವೇ ಶ್ರೀ ಕೃಷ್ಣ ಜನ್ಮಾಷ್ಟಮಿ ಎಂದು ಹೇಳಿದರು.
ಶಾಲೆಯ ಮಕ್ಕಳು ಕೃಷ್ಣ-ರಾಧೆಯರ ವೇಷ ಧರಿಸಿ ನಂದಗೋಕುಲ ಸೃಷ್ಠಿಸಿದ್ದಾರೆ ಎಂದು ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.
ಸರ್ಎಂವಿ ಕಾಲೇಜಿನ ನಿರ್ದೇಶಕ ಪ್ರದೀಪ್ ಮಾತನಾಡಿ, ಗ್ರಾಮೀಣ ಭಾಗದ ಜನರಲ್ಲಿ ಹಬ್ಬ ಹಾಗೂ ಸಂಪ್ರದಾಯದ ಆಚರಣೆಗಳ ವೈಶಿಷ್ಟ್ಯತೆ ಇಂದಿಗೂ ಜೀವಂತವಾಗಿವೆ. ಗ್ರಾಮಾಂತರ ಪ್ರದೇಶದ ಈ ಶಾಲೆಯ ಮಕ್ಕಳಿಗೆ ಶಿಕ್ಷಣದೊಂದಿಗೆ ಉತ್ತಮ ಸಂಸ್ಕಾರ ನೀಡುತ್ತಿರುವುದು ಶ್ಲ್ಯಾಘನೀಯ ಎಂದರು.