ದಾವಣಗೆರೆ, ಸೆ. 16- ನಗರದಲ್ಲಿ ಖಾಸಗಿ ಮಹಿಳಾ ವಸತಿ ನಿಲಯಗಳು ಹೆಚ್ಚಾಗುತ್ತಿದ್ದು, ಈ ನಿಲಯಗಳಲ್ಲಿ ಸುರಕ್ಷತೆ ಇಲ್ಲದಿರುವುದು ಆತಂಕದ ವಿಷಯವಾಗಿದೆ ಎಂದು ಜಿಲ್ಲಾ ಜೆಡಿಎಸ್ ಮುಖಂಡ ಎಂ.ಎನ್. ನಾಗರಾಜ್ ದೂರಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು ಬಹುತೇಕ ಖಾಸಗಿ ಮಹಿಳಾ ವಸತಿ ನಿಲಯಗಳು ಸಂಬಂಧಿಸಿದ ಇಲಾಖೆಗಳಿಂದ ಪರವಾನಿಗೆ ಪಡೆಯದೆ ಅನಧಿಕೃತವಾಗಿ ಕಾರ್ಯ ನಿರ್ವಹಿಸುತ್ತಿವೆ ಎಂದು ಆರೋಪಿಸಿದ್ದಾರೆ.
ದಾವಣಗೆರೆ ಮಹಾನಗರಕ್ಕೆ ವಿದ್ಯಾರ್ಥಿನಿಯರು ಮತ್ತು ಕೆಲಸದ ಮೇಲೆ ಅಕ್ಕಪಕ್ಕದ ಊರುಗಳಲ್ಲದೇ ದೂರದ ಊರುಗಳಿಂದ ಮಹಿಳೆಯರು ಬರುತ್ತಿದ್ದಾರೆ. ಇದರಿಂದಾಗಿ ಖಾಸಗಿ ಮಹಿಳಾ ವಸತಿ ನಿಲಯಗಳ ಸಂಖ್ಯೆ ಹೆಚ್ಚುತ್ತಿವೆ. ಆದರೆ, ಬಹುತೇಕ ಖಾಸಗಿ ಹಾಸ್ಟೆಲ್‌ಗಳು ಸುರಕ್ಷತೆಯಿಂದ ಕೂಡಿಲ್ಲ.
ಮಹಿಳಾ ವಸತಿ ನಿಲಯಗಳು ನೀತಿ-ನಿಬಂಧನೆಗಳನ್ನು ಹೊಂದಿರಬೇಕು. ಪರವಾನಿಗೆ ಪಡೆದಿರಬೇಕು. ಸುರಕ್ಷತೆ ಹೊಂದಿರಬೇಕು. ಆದರೆ, ಇದ್ಯಾವುದೇ ಇಲ್ಲದೇ, ಎಗ್ಗಿಲ್ಲದೇ ಹಾಸ್ಟೆಲ್‌ಗಳನ್ನು ನಡೆಸುತ್ತಿದ್ದು, ಸಂಬಂಧಿತ ಅಧಿಕಾರಿಗಳು ಗಮನಹರಿಸದಿರುವುದು ದುರ್ದೈವದ ಸಂಗತಿ.
ಈ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆ ಆಯುಕ್ತರು ತಕ್ಷಣ ಗಮನ ಹರಿಸಬೇಕು ಎಂದು ನಾಗರಾಜ್ ಒತ್ತಾಯಿಸಿರುವ ಅವರು, ವಿದ್ಯಾರ್ಥಿನಿಯರ ಪೋಷಕರು ಕೂಡಾ ಖಾಸಗಿ ವಸತಿ ನಿಲಯಗಳ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಕೇಳಿಕೊಂಡಿದ್ದಾರೆ.