ಸಾಮಾಜಿಕ ಸೇವೆಯಲ್ಲೂ ದೈವಜ್ಞ ಕ್ರೆಡಿಟ್‌ ಕೋ-ಆಪರೇಟಿವ್ ಸೊಸೈಟಿ

ಸಾಮಾಜಿಕ ಸೇವೆಯಲ್ಲೂ ದೈವಜ್ಞ ಕ್ರೆಡಿಟ್‌ ಕೋ-ಆಪರೇಟಿವ್ ಸೊಸೈಟಿ

ಸಂಘದ ಸರ್ವ ಸದಸ್ಯರ ಮಹಾಸಭೆಯಲ್ಲಿ ಸೊಸೈಟಿಯ ಅಧ್ಯಕ್ಷ ಪ್ರಶಾಂತ್ ವಿ. ವೆರ್ಣೇಕರ್ ಸಂತಸ

ದಾವಣಗೆರೆ, ಸೆ. 16 –  ದೈವಜ್ಞ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯು ದೊಡ್ಡ ಹಾಗೂ ಸಣ್ಣ ವ್ಯಾಪಾರಸ್ಥರಿಗೆ ಅವರ ವ್ಯಾಪಾರಾಭಿವೃದ್ಧಿಗಾಗಿ ಸಹಕಾರವನ್ನು ನೀಡುತ್ತಿದೆ. ಅಲ್ಲದೇ, ಆರ್ಥಿಕವಾಗಿ ಹಿಂದುಳಿದವರು ಮತ್ತು  ಮಧ್ಯಮ ವರ್ಗದವರನ್ನು ಮೇಲೆತ್ತಲು ಅನೇಕ ಕಾರ್ಯ ಯೋಜನೆಗಳನ್ನು ರೂಪಿಸಿ, ಕಾರ್ಯೋನ್ಮುಖವಾಗಿದೆ ಎಂದು ಸೊಸೈಟಿಯ ಅಧ್ಯಕ್ಷ ಪ್ರಶಾಂತ್ ವಿ. ವೆರ್ಣೇಕರ್ ಸಂತಸ ವ್ಯಕ್ತಪಡಿಸಿದರು.

ಇಲ್ಲಿನ ವಿನೋಬ ನಗರದ  ಶ್ರೀಮತಿ ಗೌರಮ್ಮ ನರಹರಿ ಶೇಟ್ ಸಭಾ ಭವನದಲ್ಲಿ ಏರ್ಪಾಡಾಗಿದ್ದ ದೈವಜ್ಞ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ 27ನೇ ವರ್ಷದ 2023-24ನೇ ಸಾಲಿನ ವಾರ್ಷಿಕ ಸರ್ವ ಸದಸ್ಯರ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಅತಿ ಶೀಘ್ರದಲ್ಲಿ ಸೊಸೈಟಿಯ ಹೊಸ ಶಾಖೆಯನ್ನು ಚನ್ನಗಿರಿಯಲ್ಲಿ ತೆರೆಯುವ ಉದ್ದೇಶ ಹೊಂದಿದ್ದು, ಸೊಸೈಟಿಯ ಗ್ರಾಹಕರು ಮತ್ತು ಷೇರುದಾರರ ಅನುಕೂಲಕ್ಕಾಗಿ ಆನ್‌ಲೈನ್ ಮೂಲಕ ವ್ಯವಹರಿಸುವ ಉದ್ದೇಶದಿಂದ ಈಗಾಗಲೇ ಹೊಸ ಸಾಫ್ಟ್‌ವೇರ್ ತಂತ್ರಾಂಶವನ್ನು ಅಳವಡಿಸಲಾಗುತ್ತಿದೆ. ಈ ಎಲ್ಲಾ ಮಹತ್ಕಾರ್ಯಗಳಿಗೆ ಸಮಾಜ ಮತ್ತು ಸಮಾಜದ ಸೇವಾ ಸಂಸ್ಥೆಗಳು ನಮ್ಮೊಂದಿಗೆ ಕೈ ಜೋಡಿಸುತ್ತಿವೆ ಎಂದು ಪ್ರಶಾಂತ್ ಹೇಳಿದರು.

ಪ್ರಸಕ್ತ ಸಾಲಿನಲ್ಲಿ ಸಂಘವು ಸುಮಾರು 89 ಕೋಟಿಗೂ ಹೆಚ್ಚು ವ್ಯವಹಾರವನ್ನು ನಡೆಸಿ, 1.12 ಕೋಟಿ ಲಾಭ ಗಳಿಸುವ ಮೂಲಕ ಅತ್ಯುತ್ತಮ ಲಾಭ ಗಳಿಸುವ ಸಂಘದ ಸಾಲಿನಲ್ಲಿ ಮೇರು ಪಂಕ್ತಿಯಲ್ಲಿ ಮುಂದುವರೆಯುತ್ತಿದೆ.  ಸಂಘವು ಹೆಚ್ಚು ಲಾಭ ಗಳಿಸುತ್ತಿರುವುದರಿಂದ ಸಮಾಜದ ಸದಸ್ಯರಿಗೆ ನೆರವಾಗಲು  ವಿದ್ಯಾಭ್ಯಾಸಕ್ಕೆ ಧನ ಸಹಾಯ, ಸಂತ್ರಸ್ಥರ ಸಹಾಯಕ್ಕಾಗಿ ಮರಣೋತ್ತರ ನಿಧಿ, ವಿಕಲಚೇತನ, ವಿಧವಾ ವೇತನ, 65 ವರ್ಷ ಮೇಲ್ಪಟ್ಟ ಆರ್ಥಿಕವಾಗಿ ಹಿಂದುಳಿದ ಸದಸ್ಯರಿಗೆ ಪಿಂಚಣಿ ಮುಂತಾದ ಯೋಜನೆಗಳನ್ನು ನೀಡಲಾಗುತ್ತಿದೆ ಎಂದು  ಅವರು ವಿವರಿಸಿದರು.

2024, ಮಾರ್ಚ್ ಅಂತ್ಯಕ್ಕೆ ತಮ್ಮ ಸೊಸೈಟಿಯು 2827 ಸದಸ್ಯರನ್ನು ಹೊಂದಿದ್ದು, 43.21 ಲಕ್ಷಗಳಷ್ಟು ಷೇರು ಬಂಡವಾಳ ಇದೆ. 5.01 ಕೋಟಿ ರೂ.ಗಳು ಕಾಯ್ದಿಟ್ಟ ಮತ್ತು ಇತರೆ ನಿಧಿಗಳಾಗಿದ್ದು 2023-24ಕ್ಕೆ ಸೊಸೈಟಿಯು 31.62 ಕೋಟಿ ರೂ. ದುಡಿಯುವ ಬಂಡವಾಳ ಹೊಂದಿದೆ ಎಂದು ಅಂಕಿ – ಅಂಶಗಳೊಂದಿಗೆ ಸಂಘದ ಪ್ರಗತಿಯನ್ನು ಸಭೆಯ ಮುಂದಿಟ್ಟರು.

ವರ್ಷಾಂತ್ಯಕ್ಕೆ 22.77 ಕೋಟಿ ರೂ. ಠೇವಣಿ ಸಂಗ್ರಹವಾಗಿದೆ.  ಸದರಿ ಸಾಲಿನಲ್ಲಿ ಸೊಸೈಟಿಯು ನೀಡಿರುವ ಸದಸ್ಯರ ಸಾಲಗಳ ಒಟ್ಟು ಮೊತ್ತ 26.44 ಕೋಟಿ ರೂ ಆಗಿದ್ದು, ಪ್ರತಿ ವರ್ಷದಂತೆ ಈ ಬಾರಿಯೂ ಗೃಹ, ಜಾಮೀನು ಸಾಲ, ವ್ಯವಹಾರ ಸಾಲ, ಆಸ್ತಿ ಆಧಾರಿತ, ವಾಹನ ಖರೀದಿಗೆ ಮತ್ತು ಆಭರಣ ಆಧಾರಿತ ಸಾಲಗಳನ್ನು ನೀಡಲಾಗಿದೆ ಎಂದು ಅವರು ತಿಳಿಸಿದರು.

ಸಮಾಜದ ಉನ್ನತಿಗಾಗಿ ಶ್ರಮಿಸಲು ಸಂಘವು ಕಾರ್ಯಪ್ರವೃತ್ತವಾಗಿದ್ದು, ಸದಸ್ಯರ ಠೇವಣಿಗಳ ಹಿತರಕ್ಷಣೆಯನ್ನು ಕಾಪಾಡುವ ಸಲುವಾಗಿ ಅಧಿಕ ವಾಗಿ ಸ್ಥಿರಾಸ್ತಿ ಮತ್ತು ಆಭರಣ ಆಧಾರಿತ ಸಾಲದಲ್ಲಿ ವಿನಿಯೋಗಿಸುತ್ತಿದ್ದೇವೆ. ನಮ್ಮ ಸೊಸೈಟಿಯ ಅಭಿವೃದ್ಧಿ ಮತ್ತು ಲಾಭಾಂಶವನ್ನು ಅವಲೋಕಿಸಿದಲ್ಲಿ ದಾವಣಗೆರೆ ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಅಭಿವೃದ್ಧಿ ಹೊಂದುತ್ತಿರುವ ಸೊಸೈಟಿಗಳ ಸಾಲಿನಲ್ಲಿ ನಮ್ಮ ಸೊಸೈಟಿಯೂ ಸೇರಿದೆ ಎಂದು ಪ್ರಶಾಂತ್ ವಿ. ವೆರ್ಣೇಕರ್ ಸಂತೋಷ ವ್ಯಕ್ತಪಡಿಸಿದರು.

ಕಾರ್ಯಕ್ರಮದ ದೈವಜ್ಞ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಸಂಸ್ಥಾಪಕ ಅಧ್ಯಕ್ಷ ಶಂಕರ್ ಎನ್. ವಿಠ್ಠಲ್‌ಕರ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು.

ಉಪಾಧ್ಯಕ್ಷ ರಾಜೀವ್‌ ವಿ. ವೆರ್ಣೇಕರ್, ನಿರ್ದೇಶಕರುಗಳಾದ ಮಂಜುನಾಥ್ ಕುಡತರ್‌ಕರ್, ಚಂದ್ರಹಾಸ ಕುರ್ಡೇಕರ್, ಸತೀಶ್ ಎಸ್. ಸಾನು, ವಾಸುದೇವ ರಾಯ್ಕರ್, ರಾಘವೇಂದ್ರ, ಎನ್. ದಿವಾಕರ್, ದೀಪಕ್ ಎನ್. ಶೇಟ್, ರಾಘವೇಂದ್ರ ಎಸ್. ಕುರ್ಡೇಕರ್, ವಿಜಯ ಎಸ್. ವಿಠ್ಠಲ್‌ಕರ್, ಶ್ವೇತಾ ಜಿ. ಶೇಟ್, ಹೊನ್ನಾಳಿ ನಾಮನಿರ್ದೇಶಕರಾದ ನಾರಾಯಣ ಎಂ. ರಾಯ್ಕರ್, ಶ್ರೀಕಾಂತ್ ಕುರ್ಡೇಕರ್, ನಾಮ ನಿರ್ದೇಶಿತ ನಿರ್ದೇಶಕರುಗಳಾದ ರಾಘವೇಂದ್ರ ಡಿ. ರೇವಣಕರ್, ಡಿ.ಎ. ವಿಶ್ವನಾಥ್ ಅವರುಗಳು ಸಮಾರಂಭದ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಂಘದ ಕಾರ್ಯದರ್ಶಿ ಸುವರ್ಣ  ಎಂ. ಕುರ್ಡೇಕರ್ ಸ್ವಾಗತಿಸಿ, ವಂದಿಸಿದರು.

ದೈವಜ್ಞ ಪುರಸ್ಕಾರ : ಕಾರ್ಯಕ್ರಮದ ನಂತರ ನಡೆದ ದೈವಜ್ಞ ಪುರಸ್ಕಾರ ಮತ್ತು ದೈವಜ್ಞ ಪ್ರೋತ್ಸಾಹ ಸಮಾರಂಭದ ಅಧ್ಯಕ್ಷತೆಯನ್ನು ದೈವಜ್ಞ ಕ್ರೆಡಿಟ್ ಕೋ-ಆಪರೇಟಿವ್ ಅಧ್ಯಕ್ಷ ಪ್ರಶಾಂತ್ ವಿ. ವೆರ್ಣೇಕರ್ ವಹಿಸಿದ್ದರು. 

ಅಖಿಲ ಕರ್ನಾಟಕ ದೈವಜ್ಞ ಸಮಾಜ ಸಂಘದ ಅಧ್ಯಕ್ಷ ರವಿ ಗಾಂವಕರ್, ಕಾರ್ಯದರ್ಶಿ ಉದಯ ರಾಯ್ಕರ್, ಉಪಾಧ್ಯಕ್ಷ ಸತ್ಯನಾರಾಯಣ ಆರ್. ರಾಯ್ಕರ್,  ದೈವಜ್ಞ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಸಂಸ್ಥಾಪಕ ಅಧ್ಯಕ್ಷ ಶಂಕರ್ ಎನ್. ವಿಠ್ಠಲ್‌ಕರ್, ಉಪಾಧ್ಯಕ್ಷ ರಾಜೀವ್ ವಿ. ವೆರ್ಣೇಕರ್, ಸರಾಫ್ ಅಸೋಸಿಯೇಷನ್ ಅಧ್ಯಕ್ಷ ನಲ್ಲೂರು ಅರುಣಾಚಲ ಮತ್ತು ಇನ್ನಿತರರು ಉಪಸ್ಥಿತರಿದ್ದರು.

ಸೊಸೈಟಿ ನಿರ್ದೇಶಕ ವಾಸುದೇವ ಎಲ್. ರಾಯ್ಕರ್  ಸ್ವಾಗತಿಸಿದರು. ಕಾರ್ಯದರ್ಶಿ ಸುವರ್ಣ ಎಂ.ಕುರ್ಡೇಕರ್ ವಂದಿಸಿದರು.

error: Content is protected !!