ಭಾರತಕ್ಕೆ ಸ್ವಾತಂತ್ರ್ಯವು ಆಗಸ್ಟ್ 15, 1947ರಂದು ದೊರಕಿದರೆ, ಭಾರತದೊಳಗಿನ, ಕರ್ನಾಟಕದ ಹೈದರಾಬಾದ್ ಕರ್ನಾಟಕಕ್ಕೆ ಅಂದು ಸ್ವಾತಂತ್ರ್ಯ ದೊರಕಿರಲಿಲ್ಲ ಎನ್ನುವುದು ಅಚ್ಚರಿ ಯಾದರೂ ಸತ್ಯ. ಈಗಿನ ಕಲ್ಯಾಣ ಕರ್ನಾಟಕವು ನಿಜಾಮನ ಕಪಿಮುಷ್ಠಿಯಿಂದ ಬಿಡುಗಡೆಗೊಂಡಿ ರುವುದು ಸೆಪ್ಟೆಂಬರ್ 17, 1948 ರಂದು. ಅಂದರೆ ಭಾರತಕ್ಕೆ ಸ್ವಾತಂತ್ರ್ಯ ದೊರಕಿದ ಒಂದು ವರ್ಷ ಮೂವತ್ತೆರಡು ದಿನಗಳ ಬಳಿಕ ಹೈದರಾಬಾದ್ ಕರ್ನಾಟಕ/ ಕಲ್ಯಾಣ ಕರ್ನಾಟಕಕ್ಕೆ ಸ್ವಾತಂತ್ರ್ಯ ದೊರಕಿತು. ಹೀಗಾಗಿ, ಈ ವಿಮೋಚನಾ ದಿನವು ಕಲ್ಯಾಣ ಕರ್ನಾಟಕಕ್ಕೆ ಸ್ವಾತಂತ್ರ್ಯ ದಿನವೂ ಹೌದು.
ಇಂದು ಹೈದರಾಬಾದ್ ನಿಜಾಮನ ಆಳ್ವಿಕೆಗೆ ಒಳಪಟ್ಟ ಕರ್ನಾಟಕ ಮತ್ತು ಆಂಧ್ರ, ಮಹಾರಾಷ್ಟ್ರದ ಕೆಲವು ಪ್ರದೇಶಗಳಿಗೆ ಸ್ವಾತಂತ್ರ್ಯ ದೊರಕಿದ ದಿನವಾಗಿದೆ. ಬ್ರಿಟಿಷರು ಆಗಸ್ಟ್ 15ಕ್ಕೆ ಭಾರತ ಬಿಟ್ಟು ತೊಲಗಿದರೂ, ಹೈದರಾಬಾದ್ ರಾಜ್ಯದ ನಿಜಾಮನಾದ ಮೀರ್ ಉಸ್ಮಾನ್ ಅಲಿ ಮಾತ್ರ ಭಾರತದ ಒಕ್ಕೂಟದಲ್ಲಿ ವಿಲೀನವಾಗಲು ಒಪ್ಪಿರಲಿಲ್ಲ. ಇದಕ್ಕಾಗಿ ಮತ್ತೊಂದು ಹೋರಾಟವೇ ನಡೆಯಬೇಕಾಯಿತು.
ಭಾರತದ ಒಕ್ಕೂಟದ ಭಾಗವಾಗಲು ಒಪ್ಪದ ನಿಜಾಮರ ವಿರುದ್ಧದ ಹೋರಾಟ ದಲ್ಲಿ ನೂರಾರು ಹೋರಾಟಗಾರರು ಪ್ರಾಣ ಕಳೆದುಕೊಂಡರು. ನಿಜಾಮನ ವಿರುದ್ಧ ಜನರು ದಂಗೆ ಎದ್ದಾಗ ನಿಜಾಮನ ಸೇನಾನಿ ಖಾಸಿಂ ರಜ್ವಿಯು ತನ್ನ ರಜಾಕಾರ್ ಸಂಘಟನೆಯ ಮೂಲಕ ಜನರ ಹತ್ಯೆ ಮಾಡಲಾರಂಭಿಸಿದ. ಕೊಲೆ, ಲೂಟಿ, ಅತ್ಯಾಚಾರಗಳು ಮೇರೆ ಮೀರಿ ದವು. ನಿಜಾಮರ ವಿರುದ್ಧ, ರಜಾಕಾರಾರ ವಿರುದ್ಧ ಹಳ್ಳಿಹಳ್ಳಿಗಳಲ್ಲಿ ಜನರು ದಂಗೆ ಎದ್ದರು. ಆದರೆ, ಅಂದಿನ ಕಾಂಗ್ರೆಸ್ ಅಧ್ಯಕ್ಷರಾದ ಸ್ವಾಮಿ ರಮಾನಂದತೀರ್ಥರ ನೇತೃತ್ವದಲ್ಲಿ `ಮಾಡು ಇಲ್ಲವೇ ಮಡಿ’ ಎನ್ನುವ ಸಂದೇಶದೊಂದಿಗೆ ವಿಲೀನ ಚಳುವಳಿಯ ಕಿಡಿ ಹೊತ್ತಿತು. ಆಗಲೇ ರಜಾಕಾರರ ಹಾವಳಿ ಮತ್ತು ಕೋಮುಗಲಭೆಗಳ ಪ್ರಭಾವದಿಂದ ಈ ಭಾಗದಲ್ಲಿ ಅಪಾರ ಪ್ರಮಾಣದ ಆಸ್ತಿಪಾಸ್ತಿಗಳ ಲೂಟಿ ಮತ್ತು ಪ್ರಾಣ ಹಾನಿಗಳು ನಡೆದು ಹೋಗಿದ್ದವು. ಅಂದಿನ ಉಪಪ್ರಧಾನಿ ಸರ್ದಾರ್ ವಲ್ಲಭಭಾಯಿ ಪಟೇಲರು 13-ಸಪ್ಟೆಂಬರ್-1948 ರಂದು ವಿಲೀನ ಪ್ರಕ್ರಿಯೆಗೆ ಒಪ್ಪಲಾರದ ಹೈದರಾಬಾದ್ ಸಂಸ್ಥಾನದ ವಿರುದ್ಧ ಐತಿಹಾಸಿಕ ಪೊಲೀಸ್ ಕಾರ್ಯಾಚರಣೆಗೆ ಆಜ್ಞೆ ಮಾಡಿದರು. ಭಾರತೀಯ ಸೇನಾಧಿ ಕಾರಿ ಜನರಲ್ ಚೌಧರಿ ಯವರ ನಾಯಕ ತ್ವದಲ್ಲಿ ಹೈದರಾಬಾದ್ ಸಂಸ್ಥಾನದ ಮೇಲೆ ಎಂಟು ದಿಕ್ಕುಗಳಿಂದ ದಾಳಿ ನಡೆಸಲಾ ಯಿತು. ಕೊನೆಗೆ ಹೈದರಾಬಾದ್ ನಿಜಾ ಮನು 18- 9-1948 ರಂದು ಶರಣಾ ಗತನಾಗಿ ಭಾರತ ಒಕ್ಕೂಟಕ್ಕೆ ಹೈದರಾ ಬಾದ ಪ್ರಾಂತವನ್ನು ಸೇರಿಸುವ ಪತ್ರಕ್ಕೆ ಸಹಿ ಹಾಕಿದನು. ಕಾಶಿಮ್ ರಜ್ವಿ ತಲೆತಪ್ಪಿ ಸಿಕೊಂಡು ಭಾರತ ವಿಭಜನೆಯಿಂದ ಸೃಷ್ಟಿಯಾದ ಪಾಕಿಸ್ತಾನ ಸೇರಿದನು.
ಈ ಐತಿಹಾಸಿಕ ಘಟನೆಯ ನೆನಪಿನಲ್ಲಿ ಇತ್ತೀಚೆಗೆ ಪ್ರತಿವರ್ಷ ಸಪ್ಟೆಂಬರ್ 17ನ್ನು `ಹೈದರಾಬಾದ ಕರ್ನಾಟಕ ವಿಮೋಚನಾ ದಿನ’ ಎಂದು ಆಚರಿಸಲಾಗುತ್ತದೆ. ಕಲಬುರ್ಗಿ, ಬೀದರ್, ರಾಯಚೂರು, ಕೊಪ್ಪಳ, ಯಾದಗಿರಿ ಜಿಲ್ಲೆಗಳು ಅಂದಿನ ಹೈದರಾಬಾದ್ ಪ್ರಾಂತ್ಯಕ್ಕೆ ಸೇರಿದ್ದವು. ಆಡಳಿತದ ಅನುಕೂಲಕ್ಕಾಗಿ ಬಳ್ಳಾರಿಯನ್ನು ಕೂಡ ಈಗ ಹೈದರಾಬಾದ್ ಕರ್ನಾಟಕ ಪ್ರಾಂತ್ಯದಲ್ಲಿಯೇ ಗುರುತಿಸಲಾಗುತ್ತಿದೆ. ಮತ್ತು ಈಗ ಈ ಭಾಗವನ್ನು `ಕಲ್ಯಾಣ ಕರ್ನಾಟಕ’ ಎಂದು ಹೆಸರಿಸಲಾಗಿದೆ. ಆದರೆ ಈ ದಿನವನ್ನು `ವಿಮೋಚನಾ ದಿನಾಚರಣೆ’ ಅಥವಾ `ವಿಲೀನ ದಿನಾಚರಣೆ’ ಯಾವ ಹೆಸರಿನಿಂದ ಗುರುತಿಸಬೇಕು ಎಂಬ ದ್ವಂದ್ವ ಇನ್ನೂ ಜೀವಂತ ವಾಗಿದೆ. ಈ ಭಾಗದ ಜನರಿಗೆ ಇದು ನಿಜಾಮನ ಕಪಿಮುಷ್ಠಿಯಿಂದ ಬಿಡಿಸಿಕೊಂಡ ವಿಮೋಚನೆಯ ದಿನ ಎಂಬ ಸಂತೋಷವಿದೆ. ಆದರೆ, ಭಾರತದ ರಾಷ್ಟ್ರೀಯ ಒಕ್ಕೂಟದ ವಿಷಯದಲ್ಲಿ ನೋಡಿದರೆ ಇದು ವಿಲೀನ ದಿನವೇ ಹೌದು. ಹೈದರಾಬಾದ್ ಸಂಸ್ಥಾನದ ಸಾಮಾನ್ಯ ಪ್ರಜೆಗಳು ನಿಜಾಮಶಾಹಿಯ ಅಸಫಜಾಹ ಧ್ವಜವನ್ನು ಕಳಚಿ ತ್ರಿವರ್ಣ ಧ್ವಜವನ್ನು ಅಂಗೀಕರಿಸಿದ್ದಾರೆ. ಮತ್ತು ಅಲ್ಲಿನ ಸೇನೆ, ಕರೆನ್ಸಿಯನ್ನು ತೆಗೆದುಹಾಕಿ ಭಾರತ ಸರಕಾರದ ರೂಪಾಯಿಯನ್ನು ಸ್ವೀಕರಿಸಿ ಭಾರತೀಯತೆಯ ಚಿಹ್ನೆಗಳಿಗೆ ಅರ್ಪಿಸಿಕೊಂಡದ್ದು ಇದೇ ದಿನ.ಆದ್ದರಿಂದ ಇಂದು ಈ ಭಾಗದ ಜನರು ಭಾರತದಲ್ಲಿ ನಿಜವಾಗಿ ಒಂದುಗೂಡಿದ ದಿನವಾಗಿದೆ.ಈ ಕಾರಣಕ್ಕಾಗಿ ಸಪ್ಟೆಂಬರ್ ಹದಿನೇಳನ್ನು ಹೈದರಾಬಾದ್-ಕರ್ನಾಟಕದ `ವಿಲೀನ ದಿನ’ ವೆಂದು ಆಚರಿಸುವುದೇ ಸರಿಯಾದ ಪರಿಪಾಠ ಆಗಬಹುದು.
– ಬಸವರಾಜ ಕರುವಿನ, ಬಸವನಾಳು.