ಕೆಲವೇ ವರ್ಷಗಳಲ್ಲಿ ಐಎಎಸ್ ಹಬ್ ಆಗಿ ದಾವಣಗೆರೆ

ಕೆಲವೇ ವರ್ಷಗಳಲ್ಲಿ ಐಎಎಸ್ ಹಬ್ ಆಗಿ ದಾವಣಗೆರೆ

ದಾವಣಗೆರೆ, ಸೆ.15- ಮುಂದಿನ ಹತ್ತು ವರ್ಷಗಳಲ್ಲಿ ಭಾರತ ದೇಶದಲ್ಲಿ ಐಎಎಸ್ ಹಬ್ ಆಗಿ ದಾವಣಗೆರೆ ರೂಪುಗೊಳ್ಳಲಿದೆ ಎಂದು ಇನ್ ಸೈಟ್ಸ್ ಐಎಎಸ್ ಸಂಸ್ಥೆ ಸಂಸ್ಥಾಪಕ ಜಿ.ಬಿ. ವಿನಯ್ ಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.

ನಗರದ ಜಾಧವ್ ಕಾಂಪ್ಲೆಕ್ಸ್‌ನಲ್ಲಿ ಇಂದು ಏರ್ಪಾಡಾಗಿದ್ದ ಇನ್‌ಸೈಟ್ಸ್ ಐಎಎಸ್ ಸಂಸ್ಥೆಯ ದಾವಣಗೆರೆ ಶಾಖೆಯ ಉದ್ಘಾಟನಾ ಸಮಾರಂಭದಲ್ಲಿ ಪೂಜೆ ಸಲ್ಲಿಸಿದ ಬಳಿಕ ಅವರು ಮಾತನಾಡಿದರು.

ಇನ್‌ಸೈಟ್ಸ್ ಸಂಸ್ಥೆಯು ಸ್ಪರ್ಧಾತ್ಮಕ ಪರೀಕ್ಷೆಗಳ ಕೋಚಿಂಗ್ ನಲ್ಲಿ ಕ್ರಾಂತಿಕಾರಕ ಬದಲಾವಣೆ ತಂದಿದೆ. ದಾವಣಗೆರೆ ಶಿಕ್ಷಣ ಕಾಶಿ, ಕೈಗಾರಿಕಾ ನಗರಿಯೆಂದು ಕೀರ್ತಿ ಪಡೆದಿದ್ದು, ಮುಂದೆ ದಾವಣಗೆರೆ ಐಎಎಸ್ ಫ್ಯಾಕ್ಟರಿ ಆಗಿ ಬೆಳೆಯಲಿದೆ ಎಂದು ಹೇಳಿದರು. 

ಲೋಕಸಭೆ ಚುನಾವಣೆ ವೇಳೆ ಜಿಲ್ಲೆಯ ಗ್ರಾಮೀಣ ಪ್ರದೇಶಗಳಿಗೆ ಹೋದಾಗ ಸರ್ಕಾರಿ ಅಧಿಕಾರಿಗಳು ಆಗಬೇಕೆಂದು ಹೇಳಿದ್ದೆ. ಆರ್ಥಿಕವಾಗಿ ಹಿಂದುಳಿದವರು, ಅಹಿಂದ ಸೇರಿದಂತೆ ಎಲ್ಲಾ ವರ್ಗದ ಬಡವರಿಗೆ ರಿಯಾಯಿತಿ ದರದಲ್ಲಿ ಐಎಎಸ್, ಕೆಎಎಸ್ ಕೋಚಿಂಗ್ ನೀಡಲಾಗುತ್ತದೆ ಎಂದರು.

ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 10 ವಿದ್ಯಾರ್ಥಿಗಳಂತೆ ಒಟ್ಟು ಜಿಲ್ಲೆಯ 80 ವಿದ್ಯಾರ್ಥಿಗಳಿಗೆ ಮುಂದಿನ ವರ್ಷದ ಜನವರಿಯಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ ನೀಡುವ ಯೋಜನೆ ರೂಪಿಸಲಾಗಿದೆ ಎಂದು ಮಾಹಿತಿ ನೀಡಿದರು.

2016 ರಲ್ಲಿ ಕೆ.ಆರ್. ನಂದಿನಿ ಎಂಬ ವಿದ್ಯಾರ್ಥಿನಿ ದೇಶಕ್ಕೆ ರಾಂಕ್ ಬಂದ ಬಳಿಕ ಇನ್‌ಸೈಟ್ಸ್ ಸಂಸ್ಥೆಯತ್ತ ಎಲ್ಲರ ಚಿತ್ತ ನೆಟ್ಟಿತು. ನಮ್ಮ ಸಂಸ್ಥೆಯಲ್ಲಿ ತರಬೇತಿ ಪಡೆದಿದ್ದ ನಾಲ್ವರು ಜಿಲ್ಲಾಧಿಕಾರಿಗಳಾಗಿದ್ದಾರೆ, 

ಆಗುತ್ತಲೂ ಇದ್ದಾರೆ. ಐಎಎಸ್, ಕೆಎಎಸ್ ಕೇವಲ ಪ್ರತಿಷ್ಠೆಗಾಗಿ ಆಗುವುದಲ್ಲ, ಜನರ ಸೇವೆಗಾಗಿ ಆಯ್ದುಕೊಳ್ಳುವ ಕ್ಷೇತ್ರ ಎಂದು ಹೇಳಿದರು.

ಜಮ್ಮು – ಕಾಶ್ಮೀರ, ಬೆಂಗಳೂರು ಸೇರಿದಂತೆ ಹಲವೆಡೆ ಸಂಸ್ಥೆಯು ಶಾಖೆಗಳನ್ನು ಹೊಂದಿದ್ದು, ದೇಶದಲ್ಲಿಯೇ ಮೂರನೆ ಸ್ಥಾನದಲ್ಲಿದೆ ಎಂಬ ಹೆಗ್ಗಳಿಕೆ ಹೊಂದಿದೆ. ಬೇರೆ ಬೇರೆ ರಾಜ್ಯಗಳ ವಿದ್ಯಾರ್ಥಿಗಳು ಸಂಸ್ಥೆಗೆ ಸೇರ್ಪಡೆಯಾಗುತ್ತಿದ್ದಾರೆ. ಗುಣಮಟ್ಟದ ಕೋಚಿಂಗ್ ನೀಡುತ್ತಿರುವುದೇ ಇದಕ್ಕೆ ಕಾರಣ ಎಂದು ತಿಳಿಸಿದರು.

ನಿವೃತ್ತ ಪ್ರಾಂಶುಪಾಲ ಹದಡಿ ಯಲ್ಲಪ್ಪ ಕಕ್ಕರಗೊಳ್ಳ, ಉಪನ್ಯಾಸಕ ಮಳಲ್ಕೆರೆ ಓಬಳೇಶ್, ಉಪನ್ಯಾಸಕ ಷಣ್ಮುಖಪ್ಪ ಅವರುಗಳು ಮಾತನಾಡಿ,  ಗ್ರಾಮೀಣ ಪ್ರದೇಶದ ಮಕ್ಕಳಿಗೆ ಗಗನ ಕುಸುಮವಾಗಿದ್ದ ಸ್ಪರ್ಧಾತ್ಮಕ ಪರೀಕ್ಷೆಗಳ ಕೋಚಿಂಗ್ ಸುಲಭವಾಗಿ ಸಿಗುವಂತೆ ಮಾಡಿದ ಹೆಗ್ಗಳಿಕೆ ವಿನಯ್ ಕುಮಾರ್‌ಗೆ ಸಲ್ಲುತ್ತದೆ ಎಂದರು.

ಈ ವೇಳೆ ಇನ್‌ಸೈಟ್ಸ್ ಸಂಸ್ಥೆಯ ಎಂ.ಡಿ. ಶರತ್ ಕುಮಾರ್, ಕರಿಬಸಯ್ಯ ಮಠದ್, ಶಿವಮೂರ್ತಿ, ಶಿವಕುಮಾರ ಸಂಬಳಿ ಮನು, ಆಕಾಶ್, ಅಯ್ಯಣ್ಣ, ಶ್ವೇತಾ ಒಡೆಯರ್ ಸೇರಿದಂತೆ ಇತರರು ಹಾಜರಿದ್ದರು. ಪುರಂದರ ಲೋಕಿಕೆರೆ ಸ್ವಾಗತಿಸಿದರು.

error: Content is protected !!