ಹಿಂದಿ ಸಪ್ತಾಹ ಆಚರಣೆ ವಿರೋಧಿಸಿ ಕರವೇ ಪ್ರತಿಭಟನೆ

ಹಿಂದಿ ಸಪ್ತಾಹ ಆಚರಣೆ ವಿರೋಧಿಸಿ ಕರವೇ ಪ್ರತಿಭಟನೆ

ದಾವಣಗೆರೆ, ಸೆ.15- ಹಿಂದಿ ಸಪ್ತಾಹ ಆಚರಣೆ ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆ (ಟಿ.ಎ. ನಾರಾಯಣಗೌಡ ಬಣ) ಕಾರ್ಯಕರ್ತರು ಕಪ್ಪು ಪಟ್ಟಿ ಧರಿಸಿ ನಗರದ ಲೋಕೋಪಯೋಗಿ ಇಲಾಖೆ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮೂಲಕ ಕರಾಳ ದಿನವನ್ನಾಗಿ ಆಚರಿಸಲಾಯಿತು.

ಇದೇ ವೇಳೆ ಕರವೇ ಜಿಲ್ಲಾಧ್ಯಕ್ಷ ಎಂ.ಎಸ್. ರಾಮೇಗೌಡ ಮಾತನಾಡಿ, ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ 22 ಅಧಿಕೃತ ಭಾಷೆ ಗಳಿವೆ. ಅದರಲ್ಲಿ ಹಿಂದಿ ಭಾಷೆಯೂ ಒಂದು. ಹಲವು ದಶಕಗಳಿಂದ ಹಿಂದಿ ರಾಷ್ಟ್ರಭಾಷೆ ಎಂದು ಸುಳ್ಳು ಹೇಳುತ್ತಾ ಬರಲಾಗಿದೆ. ಆದರೆ ಕರವೇ ಹೋರಾಟದಿಂದಾಗಿ ಇತ್ತೀಚಿಗೆ ಕೇಂದ್ರ ಸರ್ಕಾರದ ಸಚಿವರು ಹಿಂದಿ ರಾಷ್ಟ್ರಭಾಷೆ ಅಲ್ಲ ಎಂದು ಸ್ಪಷ್ಟನೆ ನೀಡಿದ್ದರೂ ಸಹ ಹಿಂದಿ ಸಪ್ತಾಹ ಆಚರಣೆ ಖಂಡನೀಯ ಎಂದರು.

ಭಾರತ ಎಂದಾಕ್ಷಣ ಬರೀ ಹಿಂದಿ ಭಾಷಿಕರು ಎಂದಲ್ಲ. ರಾಜ್ಯವಾರು ಆಯಾ ಸ್ಥಳೀಯ ಭಾಷೆ, ಸ್ಥಳೀಯ ಸಂಸ್ಕೃತಿಯಲ್ಲಿ ವ್ಯತ್ಯಾಸವಿದ್ದರೂ ಕೇಂದ್ರ ಸರ್ಕಾರ ನಮ್ಮ ರಾಜ್ಯದ ಭಾಷೆ ಮೇಲೆ ದಬ್ಬಾಳಿಕೆ ನಡೆಸುತ್ತಾ ಬರುತ್ತಿದೆ ಎಂದು ಹೇಳಿದರು.

2005 ರಿಂದಲೂ ಸೆಪ್ಟಂಬರ್ 14 ರಂದು ಪ್ರತಿವರ್ಷ ಕೇಂದ್ರ ಸರ್ಕಾರ ಹಿಂದಿ ಸಪ್ತಾಹ ಆಚರಣೆ ಮಾಡುತ್ತಾ ಬಂದಿದೆ. ಇದನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಪ್ರತಿ ವರ್ಷ 14 ರಂದು ಹೋರಾಟ ಮಾಡುತ್ತಾ ಬಂದಿದೆ. ಬ್ಯಾಂಕುಗಳಲ್ಲಿ, ಅಂಚೆ ಕಚೇರಿ, ಬಿಎಸ್ಸೆನ್ನೆಲ್ ಹಾಗೂ ಕೇಂದ್ರೀಯ ವಿದ್ಯಾಶಾಲೆಗಳಲ್ಲಿ ಮತ್ತು ಸಿಬಿಎಸ್‌ಇ ಶಾಲೆಗಳಲ್ಲಿ ಹಿಂದಿ ಸಪ್ತಾಹ ಆಚರಣೆ ನಡೆಸುತ್ತಾ ಬರಲಾಗಿದೆ ಎಂದರು.

ಬೀರೂರು-ಸಮ್ಮಸಗಿಗೆ ಹೋಗುವ ರಸ್ತೆಯ ಮಾರ್ಗಸೂಚಿಗಳು ಮತ್ತು ನಾಮ ಫಲಕಗಳು ಹಿಂದಿಯಲ್ಲೇ ಬರೆಸಿರುವುದು ಕನ್ನಡ ನಾಡಿಗೆ ಮಾಡುವ ದೊಡ್ಡ ಅವಮಾನವಾಗಿದೆ. ರಾಜ್ಯದ ಆಡಳಿತ ಭಾಷೆ ಕನ್ನಡ ಅದರಲ್ಲೂ ಇತ್ತೀಚಿಗೆ ಶೇ. 60 ರಷ್ಟು ಕನ್ನಡದಲ್ಲಿ ಇರಬೇಕು ಎಂಬ ಆದೇಶವಿದ್ದರೂ ಸಹ ರಾಜ್ಯ ಹೆದ್ದಾರಿಗಳಲ್ಲಿ ಮಾರ್ಗಸೂಚಿ ಹಾಗೂ ನಾಮಫಲಕಗಳು ಕನ್ನಡದಲ್ಲಿ ಶೇ.60 ರಷ್ಟು ಇದ್ದು ಹೊರ ರಾಜ್ಯದವರಿಗೆ ಅರ್ಥವಾಗುವ ರೀತಿಯಲ್ಲಿ ಸಣ್ಣದಾಗಿ ಆಂಗ್ಲಭಾಷೆಯಲ್ಲಿ ಬರೆಸಿದರೆ ಸಾಕು. ಆದರೆ ಅಧಿಕಾರಿ ವರ್ಗದವರು ಹಿಂದಿ ಭಾಷೆಯಲ್ಲಿ ಮಾರ್ಗಸೂಚಿಗಳು ಹಾಗೂ ಊರುಗಳ ಹೆಸರು ಬರೆಸಿದೆ. ಇದನ್ನು ಕರ್ನಾಟಕ ರಕ್ಷಣಾ ವೇದಿಕೆ ಖಂಡಿಸುವ ಮೂಲಕ ಅಂತವುಗಳಿಗೆ ಮಸಿ ಬಳಿಯಲಾಗುವುದು ಎಂದು ಎಚ್ಚರಿಸಿದರು.

ಯುಗಧರ್ಮ ರಾಮಣ್ಣ, ಕರವೇ ಪದಾಧಿಕಾರಿಗಳಾದ ಎನ್.ಟಿ.ಹನುಮಂತಪ್ಪ, ಎನ್.ಬಿ. ಲೋಕೇಶ್, ಜಬೀವುಲ್ಲಾ, ಖಾದರ್ ಬಾಷಾ, ಮುಸ್ತಾಫ್, ಆಟೋ ರಫೀಕ್, ತನ್ವೀರ್, ಸುರೇಶ್, ಸಂಜು, ನಾಗರರಾಜಪ್ಪ, ರಾಜು, ಅಕ್ಷಯ್, ಪ್ರಕಾಶ್, ಸಾಗರ್, ದಾದಾಪೀರ್, ಬಸವರಾಜ್, ಹರಿಹರ ರಾಜೇಶ್, ಅಮಾನುಲ್ಲಾ ಖಾನ್, ಇಮ್ತಿಯಾಜ್, ಶಶಿನಾಯ್ಕ, ರುದ್ರೇಶ್, ಕೋಡಿಹಳ್ಳಿ ಗಂಗಾಧರ್, ಮಂಜುಳಾ ಗಣೇಶ್, ನಾಗಮ್ಮ, ರವಿಚಂದ್ರ, ರವಿಕುಮಾರ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

error: Content is protected !!