ಜಗಳೂರು, ಸೆ. 15 – ಸಾರ್ವಜನಿಕರೂ ಸಹ ಸ್ವಚ್ಛತೆ ಕಾಪಾಡಲು ಪೌರ ಕಾರ್ಮಿಕರೊಂದಿಗೆ ಕೈಜೋಡಿಸಬೇಕು ಎಂದು ಶಾಸಕ ಬಿ. ದೇವೇಂದ್ರಪ್ಪ ಕರೆ ನೀಡಿದರು.
ಪಟ್ಟಣದ ನಟರಾಜ್ ಟಾಕೀಸ್ ಬಳಿ ಸಸಿಗೆ ನೀರೆರೆದು, ಪ್ರತಿಜ್ಞಾ ವಿಧಿಯೊಂದಿಗೆ `ಸ್ವಚ್ಛತೆಯೇ ಸೇವೆ – 2024′ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪಟ್ಟಣ ಪಂಚಾಯಿತಿಯ ಕಸದ ವಾಹನ ಪ್ರತಿ ನಿತ್ಯ ಪ್ರತಿ ವಾರ್ಡ್ಗಳಲ್ಲಿ ಮನೆ ಬಾಗಿಲಿಗೆ ಬರುವಾಗ ಸಾರ್ವಜನಿಕರು ಒಣಕಸ, ಹಸಿ ಕಸ ಪ್ರತ್ಯೇಕ ಗೊಳಿಸಿ ವಿಲೆವಾರಿಯೊಂದಿಗೆ ಪಟ್ಟಣದ ನೈರ್ಮಲ್ಯ ಕಾಪಾಡಬೇಕು ಎಂದರು.
ಸಾರ್ವಜನಿಕ ಸ್ಥಳಗಳಲ್ಲಿ ಕಸವಿಲೆವಾರಿಗಳಿಂದ ಸಾಂಕ್ರಾಮಿಕ ರೋಗಗಳಿಗೆ ಕಾರಣವಾಗುತ್ತವೆ. ಜಾಗೃತರಾಗಿ ಮುಂಜಾಗ್ರತೆಯಿಂದ ಚರಂಡಿ ಸೇರಿದಂತೆ ಮನೆಯ ನೆರೆಹೊರೆಯಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು’ ಎಂದು ಸಲಹೆ ನೀಡಿದರು.
ಸರ್ಕಾರದ ನಿರ್ದೇಶನದಂತೆ ಪಟ್ಟಣ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಗಳು ಸೇರಿದಂತೆ ಸ್ಥಳೀಯ ಆಡಳಿತ ಸಂಸ್ಥೆಗಳು ಗಾಂಧಿ ಜಯಂತಿ ಅಂಗವಾಗಿ ಆಯೋಜಿಸುವ ಸ್ವಚ್ಛತೆಯ ಜನಜಾಗೃತಿ ಕುರಿತು ಆಯೋಜಿಸುವ ಕಾರ್ಯಕ್ರಮಗಳು ಪ್ರಶಂಸನೀಯ ಸಾರ್ವಜನಿಕರು ಸಕ್ರಿಯವಾಗಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು’ ಎಂದು ಶಾಸಕ ದೇವೇಂದ್ರಪ್ಪ ತಿಳಿಸಿದರು.
ಪ.ಪಂ. ಮುಖ್ಯಾಧಿಕಾರಿ ಲೋಕ್ಯಾನಾಯ್ಕ ಮಾತನಾಡಿ,’ ಸರ್ವರೂ ಸ್ವಚ್ಚತೆಯೇ ಸೇವೆ ಎಂಬ ಭಾವನೆ ಮೈಗೂಡಿಸಿಕೊಳ್ಳಬೇಕಿದೆ. ಸೆ.19 ರಿಂದ ಅ. 2 ರವರೆಗೆ ಸ್ವಚ್ಛತಾ ಅಭಿಯಾನ ನಡೆಸಲಾಗುತ್ತಿದೆ. ಪರಿಸರ ಸ್ವಚ್ಚತೆಗೆ ಸಹಕರಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪ.ಪಂ. ಅಧ್ಯಕ್ಷ ನವೀನ್ ಕುಮಾರ್, ಸದಸ್ಯರಾದ ರಮೇಶ್ ರೆಡ್ಡಿ, ಲಲಿತಾಶಿವಣ್ಣ, ಶಕೀಲ್ ಅಹಮ್ಮದ್, ಲುಕ್ಮಾನ್ ಖಾನ್, ಮಹಮ್ಮದ್ ಅಲಿ, ಆರೋಗ್ಯ ನಿರೀಕ್ಷಕ ಪ್ರಶಾಂತ್ ಹಾಗೂ ಪೌರ ಕಾರ್ಮಿಕರು ಇದ್ದರು.