ರಂಗಾಯಣಗಳ ನಾಟಕ ತರಬೇತಿ ಕೇಂದ್ರ ದಾವಣಗೆರೆಯಲ್ಲೇ ಆಗಲಿ

ರಂಗಾಯಣಗಳ ನಾಟಕ ತರಬೇತಿ ಕೇಂದ್ರ ದಾವಣಗೆರೆಯಲ್ಲೇ ಆಗಲಿ

ರಂಗಾಯಣ ಮಾಜಿ ನಿರ್ದೇಶಕ ಬಸವಲಿಂಗಯ್ಯ

ದಾವಣಗೆರೆ, ಸೆ.15- ರಾಜ್ಯದ ಎಲ್ಲಾ ರಂಗಾಯಣಗಳ ನಾಟಕ ತರಬೇತಿ ಕೇಂದ್ರ ದಾವಣಗೆರೆಯಲ್ಲಿಯೇ ಆಗಬೇಕು ಎಂದು   ಹಿರಿಯ ರಂಗಕರ್ಮಿ ಹಾಗೂ ರಂಗಾಯಣದ ಮಾಜಿ ನಿರ್ದೇಶಕ ಬಸವಲಿಂಗಯ್ಯ ಆಶಯ ಪಟ್ಟರು.

ವೃತ್ತಿ ರಂಗಭೂಮಿ ರಂಗಾಯಣದ ವತಿಯಿಂದ ನಗರದ ಬಾಪೂಜಿ ಸಭಾಂಗಣದಲ್ಲಿ ಇಂದು ಆಯೋಜಿಸಿದ್ದ ರಾಜ್ಯ ಮಟ್ಟದ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ದಿಕ್ಸೂಚಿ ನುಡಿಗಳನ್ನಾಡಿದರು.

ಇಲ್ಲಿನ ರಂಗಾಯಣಕ್ಕೆ ಲಭಿಸಿದ 10 ಎಕರೆ ಜಾಗದಲ್ಲಿ ಶೀಘ್ರವಾಗಿ ಮ್ಯೂಸಿಯಂ ತಲೆ ಎತ್ತಿ ನಿಲ್ಲಬೇಕಿದ್ದು, ಅಲ್ಲಿ ವೃತ್ತಿ ಕಂಪನಿಯ ತಾರೆಯರ ಚರಿತ್ರೆ ತಿಳಿಸುವ ಯೋಜನೆ ಆಗಬೇಕು ಎಂದು ಹೇಳಿದರು. ರಾಜ್ಯದ 31 ಜಿಲ್ಲೆಗಳ ಲ್ಲಿಯೂ ರಂಗಾಯಣದ ನಾಟಕ ಶಾಲೆ ಪ್ರಾರಂಭವಾಗ ಬೇಕು. ಬೀದರ್‌ನಿಂದ ಚಾಮರಾಜ ನಗರದ ವರೆಗೆ ಹೊಸ- ಹೊಸ ಪ್ರಯೋಗ ಮಾಡುವ ಮೂಲಕ ವೃತ್ತಿ ರಂಗಾಯ ಣವು ಉತ್ತಮ ಸಂದೇಶ ನೀಡಬೇಕು ಎಂದು ಹೇಳಿದರು.

ಹವ್ಯಾಸಿ ರಂಗಭೂಮಿಯ ಪ್ರಯೋಗ ಶೀಲ ವೈಚಾರಿಕತೆ ಹಾಗೂ ವೃತ್ತಿ ರಂಗಭೂಮಿಯ ವೈಭವ ಇವೆರಡನ್ನು ಬೆಸೆದು ಕನ್ನಡ ರಂಗಭೂಮಿಯನ್ನು ಆಧುನಿಕರಣಗೊಳಿಸಲು ರಂಗಾಯಣ ಪ್ರಾರಂಭವಾಯಿತು ಎಂದು ತಿಳಿಸಿದರು.

ರಾಜರು, ಪಾಳೇಗಾರರು ಹಾಗೂ ಜನರ ಸಹಾಯದಿಂದ ವೃತ್ತಿ ಕಂಪನಿ ಬೆಳವಣಿಗೆ ಕಂಡವು. ಈ ಕಂಪನಿಗಳೇ ಹಲವಾರು ಕುಟುಂಬಗಳಿಗೆ ಜೀವನ ಕಟ್ಟಿಕೊಟ್ಟಿದ್ದವು ಎಂದು ಹೇಳಿದರು.

ರಂಗಭೂಮಿಯಲ್ಲಿ ಜಾತಿ, ಧರ್ಮ, ಗಂಡು-ಹೆಣ್ಣು ಎಂಬ ಭೇದ ಭಾವಗಳಿಲ್ಲ ಎಂದ ಅವರು, ರಂಗಭೂಮಿ ವ್ಯವಹಾರ ಆಗಬಾರದು ಎಂದು ತಿಳಿಸಿದರು.

ಪೆಡಲ್‌ ಹಾರ್ಮೋನಿಯಂ ನುಡಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಅವರು, ಈ ವರ್ಷ ಮಳೆ-ಬೆಳೆ ಉತ್ತಮವಾಗಿರುವುದರಿಂದ ನಗರದ ಗಾಜಿನ ಮನೆಯಲ್ಲಿ ಹೆಚ್ಚೆಚ್ಚು ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿವ ಚಿಂತನೆ ಮಾಡಿದ್ದೇವೆ ಎಂದು ತಿಳಿಸಿದರು.

ನಾಟಕ ಶೈಲಿಯ ಕಾರ್ಯಕ್ರಮ ವೇದಿಕೆ ಗಮನಿಸಿದ ಜಿಲ್ಲಾಧಿಕಾರಿಗಳು ತಮ್ಮ ಬಾಲ್ಯದ ದಿನಗಳನ್ನು ಸಭಿಕರೊಂದಿಗೆ ಹಂಚಿಕೊಂಡರು.

ನಟ ಅರುಣ ಸಾಗರ್‌ ಮಾತನಾಡಿ, ವೃತ್ತಿ ರಂಗಭೂಮಿಯ ಜೀವನ ಉದಾತ್ತವಾದುದು, ಈ ನಿಟ್ಟಿನಲ್ಲಿ ಮುಗ್ಧತೆಯೇ ಕಲೆಯ ಮೂಲ ಮಂತ್ರ ಎಂದು ಹೇಳಿದರು. ವೇದಿಕೆ ಮುಂದಿರುವ ಬಣ್ಣದ ಪರಿದೆಯೊಂದೆ ನಾಟಕದ ಪರಿಕರವಲ್ಲ, ವೃತ್ತಿ ರಂಗಭೂಮಿಯ ಪ್ರತಿಯೊಂದು ಅಂಶವು   ರಂಗ ಪರಿಕರಗಳಾಗಿವೆ ಎಂದರು.

ಕಂಪನಿ ನಾಟಕಗಳಲ್ಲಿ ಉದ್ಯೋಗಾವಕಾಶಗಳು ದೊಡ್ಡದಾಗಿ ಇರುತ್ತಿದ್ದವು ಎಂದು ಹೇಳಿದರು.

ವೃತ್ತಿ ರಂಗಭೂಮಿ ರಂಗಾಯಣದ ನಿರ್ದೇಶಕ ಮಲ್ಲಿಕಾರ್ಜುನ ಕಡಕೋಳ, ರಂಗಾಯಣದ ವಿಶೇಷಾಧಿಕಾರಿ ರವಿಚಂದ್ರ, ಹಿರಿಯ ರಂಗಕರ್ಮಿ
ಎಲ್‌.ಬಿ. ಶೇಖ್‌ ಮಾಸ್ತಾರ್‌, ಪ್ರಕಾಶ್‌ ಗರುಡಾ, ಶ್ರೀಧರ್‌ ಹೆಗಡೆ, ಬಸವರಾಜ್‌, ಶಿವಮೊಗ್ಗಾದ ಡಿ. ಪ್ರಸನ್ನ, ಪತ್ರಕರ್ತರಾದ ಬಾ.ಮ. ಬಸವರಾಜಯ್ಯ, ಬಿ.ಎನ್‌. ಮಲ್ಲೇಶ್‌, ವಾಮದೇವಪ್ಪ ಸೇರಿದಂತೆ ಇತರರಿದ್ದರು.

error: Content is protected !!