ಪ್ರಸ್ತುತ ಕುಂಠಿತಗೊಳ್ಳುತ್ತಿರುವ ಪ್ರಜಾಪ್ರಭುತ್ವ ಮೌಲ್ಯಗಳು

ಪ್ರಸ್ತುತ ಕುಂಠಿತಗೊಳ್ಳುತ್ತಿರುವ ಪ್ರಜಾಪ್ರಭುತ್ವ ಮೌಲ್ಯಗಳು

ರಾಣೇಬೆನ್ನೂರು ಶಾಸಕ ಪ್ರಕಾಶ ಕೋಳಿವಾಡ ವ್ಯಾಕುಲತೆ

ರಾಣೇಬೆನ್ನೂರು, ಸೆ. 15 – ವಿಶ್ವದಲ್ಲಿಯೇ ಅತೀ ದೊಡ್ಡ  ಪ್ರಜಾಪ್ರಭುತ್ವ ರಾಷ್ಟ್ರ ಭಾರತ ಎನ್ನುವುದು ಹೆಮ್ಮೆಯ ಸಂಗತಿ. ಇಂದು ಪ್ರಜಾಪ್ರಭುತ್ವ ಮೌಲ್ಯಗಳು ಕುಂಠಿತಗೊಳ್ಳುತ್ತಿವೆ, ಪ್ರಜಾಪ್ರಭುತ್ವ ಉಳಿಸಿ ಬೆಳೆಸುವುದು ಪ್ರತಿ ಪ್ರಜೆಯ ಕರ್ತವ್ಯವಾಗಿದೆ  ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು.

ರವಿವಾರ ನಗರದ ಆರ್.ಟಿ.ಇ.ಎಸ್. ಕಾಲೇಜು ಮುಂಭಾಗ ಜಿಲ್ಲಾಡಳಿತ, ಜಿ.ಪಂ. ಹಾಗೂ ಸಮಾಜ ಕಲ್ಯಾಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ನಡೆದ  ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಬೃಹತ್ ಮಾನವ ಸರಪಳಿ ನಿರ್ಮಾಣ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.

ಇಡೀ ವಿಶ್ವದಲ್ಲಿಯೇ ಪವಿತ್ರ ಹಾಗೂ ಶಕ್ತಿಯುತವಾದ ಪ್ರಜಾಪ್ರಭುತ್ವವವನ್ನು ಹೊಂದಿರುವ ದೇಶ ಭಾರತ. ಇಂತಹ ನಮ್ಮ ದೇಶವು ವಿವಿಧತೆಯಲ್ಲಿ ಏಕತೆಯನ್ನು ಹೊಂದಿದೆ. ನಮ್ಮ ದೇಶದಲ್ಲಿ 2.5 ಸಾವಿರ ರಾಜಕೀಯ ಪಕ್ಷಗಳು ಇವೆ. ಅದರಲ್ಲಿ 20 ಪಕ್ಷಗಳು ದೇಶದಲ್ಲಿ ಆಡಳಿತವನ್ನು ನಡೆಸುತ್ತಿವೆ. ದುರಂತವೆಂದರೆ 180ಕ್ಕೂ ಅಧಿಕ ಸಂಸದರು ಕ್ರಿಮಿನಲ್ ಮೊಕದ್ದಮೆಯಲ್ಲಿದ್ದಾರೆ ನಿಜಕ್ಕೂ ಇದು ವಿಷಾದದ ಸಂಗತಿ. ಇಂತಹ ವ್ಯವಸ್ಥೆಯನ್ನು ಬದಲಾಯಿಸುವ ಅಗತ್ಯವಿದೆ ಎಂದರು.

ಶಿಕ್ಷಣದಿಂದ ಮಾತ್ರ ಪ್ರಜಾಪ್ರಭುತ್ವವನ್ನು ಉಳಿಸಿಕೊಂಡು ಹೋಗಲು ಸಾಧ್ಯ. ಈ ನಿಟ್ಟಿನಲ್ಲಿ ಸರ್ವರೂ ಜಾತೀಯತೆ ಬಿಟ್ಟು ನಮ್ಮ ಸಂವಿಧಾನ, ನಮ್ಮ ಪ್ರಜಾಪ್ರಭುತ್ವ, ನಮ್ಮ ದೇಶ ಎಂಬ ಮನೋಭಾವನೆಯಿಂದ ಮುನ್ನಡೆದಾಗ ಮಾತ್ರ ನಾವು ಪ್ರಜಾಪ್ರಭುತ್ವ ದಿನಾಚರಣೆಯನ್ನು ಆಚರಿಸಿದ್ದಕ್ಕೂ ಸಾರ್ಥಕವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಹಿರೇಕೇರೂರ ಶಾಸಕ ಯು.ಬಿ. ಬಣಕಾರ ಮಾತನಾಡಿ,  ಪ್ರಜಾಪ್ರಭುತ್ವದ ಆಶಯಗಳು  ಹಾಗೂ ಮೌಲ್ಯಗಳು ಕಡಿಮೆಯಾಗುತ್ತಿವೆ. ಅವುಗಳನ್ನು ಎತ್ತಿಹಿಡಿಯುವ ಕೆಲಸವಾಗಬೇಕು.  ವಿಶ್ವಸಂಸ್ಥೆಯು 2007ರಲ್ಲಿ ಪ್ರಜಾಪ್ರಭುತ್ವ ದಿನಾಚರಣೆ ಜಾರಿಗೆ ತಂದಿತು. 2008ರಿಂದ ಅಂತರಾಷ್ಟ್ರೀಯ ಪ್ರಜಾಭುತ್ವ ದಿನಾಚರಣೆ  ಆಚರಿಸಲಾಗುತ್ತಿದೆ. ಮಹಾತ್ಮಗಾಂಧೀಜಿ ಸೇರಿದಂತೆ ಸ್ವಾತಂತ್ರ್ಯ ಹೋರಾಟಗಾರರು ಸಂವಿಧಾನ ಕರಡು ಸಮಿತಿ ರಚಿಸಿದರು. ಎಲ್ಲರಿಗೂ ಸಮಾನ ಅವಕಾಶ ದೊರೆಯುವ ಬಹುದೊಡ್ಡ ಲಿಖಿತ ಸಂವಿಧಾನ ನೀಡಿದ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ನಾವು ಸ್ಮರಿಸಬೇಕು ಎಂದರು.

ಜಿಲ್ಲಾಧಿಕಾರಿ ಡಾ. ವಿಜಯ ಮಹಾಂತೇಶ ದಾನಮ್ಮನವರ ಮಾತನಾಡಿ, ಚುನಾವಣೆ ಮೂಲಕ ಹೊಸ ಸರ್ಕಾರಗಳ ಆಯ್ಕೆ ಪ್ರಜಾಪ್ರಭುತ್ವದಲ್ಲಿ ಮಾತ್ರ ಮಾಡಲಾಗುತ್ತದೆ.  ಪ್ರಜಾಪ್ರಭುತ್ವದಲ್ಲಿ ಮತದಾನ ಹಕ್ಕು, ಪ್ರಜಾಸ್ವಾತಂತ್ರ್ಯ ಹಾಗೂ ಕಾನೂನು ಸೌಲಭ್ಯಗಳು ಸೇರಿದಂತೆ ಅನೇಕ ಮೂಲಭೂತ ಹಕ್ಕುಗಳನ್ನು  ನೀಡಲಾಗಿದೆ.  ಆದರೆ ಬೇರೆ ರಾಷ್ಟ್ರಗಳಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಇದ್ದರೂ ಸಹ ಅವರಿಗೆ ಪ್ರಜಾಸ್ವಾತಂತ್ರ್ಯ ಇರುವುದಿಲ್ಲ ಎಂದರು.

ಗ್ಯಾರಂಟಿ ಯೋಜನೆಗಳ ರಾಜ್ಯ ಉಪಾಧ್ಯಕ್ಷ ಎಸ್.ಆರ್. ಪಾಟೀಲ ಮಾತನಾಡಿ, ಡಾ.ಬಿ.ಆರ್. ಅಂಬೇಡ್ಕರ್ ಅವರು ನೀಡಿದ ಸಂವಿಧಾನದ ಮೂಲಭೂತ ಹಕ್ಕು ಮತ್ತು  ಕರ್ತವ್ಯಗಳನ್ನು ಅರಿತುಕೊಳ್ಳಬೇಕು. ಇದೊಂದು ಅವಿಸ್ಮರಣೀಯ ಕಾರ್ಯಕ್ರಮ ಎಂದು ಬಣ್ಣಿಸಿದರು.

ಹಾವೇರಿ ನಗರಸಭೆ ಅಧ್ಯಕ್ಷರಾದ ಶಶಿಕಲಾ ಮಾಳಗಿ, ಉಪಾಧ್ಯಕ್ಷ ಮಲ್ಲಿಕಾರ್ಜುನ ಸಾತೇನಹಳ್ಳಿ, ಜಿ.ಪಂ. ಇಓ ಅಕ್ಷಯ್ ಶ್ರೀಧರ, ಅಪರ ಜಿಲ್ಲಾಧಿಕಾರಿ ವೀರಮಲ್ಲಪ್ಪ ಪೂಜಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ, ತಹಶೀಲ್ದಾರ್ ಆರ್.ಎಸ್. ಭಗವಾನ್, ಪೌರಾಯುಕ್ತ ಎಫ್.ಐ. ಇಂಗಳಗಿ, ಕ್ಷೇತ್ರ ಶಿಕ್ಷಣಾಧಿಕಾರಿ ಶಾಮಸುಂದರ ಅಡಿಗ, ನಗರಸಭಾ ಸದಸ್ಯರಾದ ಪುಟ್ಟಪ್ಪ ಮರಿಯಮ್ಮನವರ, ಗಂಗಮ್ಮ ಹಾವನೂರ, ಶೇಖಪ್ಪ ಹೊಸಗೌಡ್ರ, ಮಂಜುಳಾ ಹತ್ತಿ, ಜಿ.ಪಂ. ಮಾಜಿ ಅಧ್ಯಕ್ಷ ಏಕನಾಥ ಬಾನುವಳ್ಳಿ, ವೀರನಗೌಡ ಪೋಲಿಸಗೌಡ್ರ, ರಾಮಣ್ಣ ನಾಯಕ ಸೇರಿದಂತೆ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಪ್ರಜಾಪ್ರಭುತ್ವ ದಿನಾಚರಣೆಯ ಮಾನವ ಸರಪಳಿಯು ತಾಲ್ಲೂಕಿನ ಕುಮಾರಪಟ್ಟಣ ತುಂಗಭದ್ರ ನದಿಯಿಂದ ಗದಗ ಜಿಲ್ಲೆಯ ಬಾಲೆಹೊಸೂರಿನವರೆಗೆ ಜರುಗಿತು. 

error: Content is protected !!