ಕೆಚ್ಚೆದೆಯ ಸಾಧಕಿ, ಮೃದು ಹೃದಯಿ ಮೇಡಂ ನಿರ್ಮಲಾ ಕೇಸರಿ

ಕೆಚ್ಚೆದೆಯ ಸಾಧಕಿ, ಮೃದು ಹೃದಯಿ ಮೇಡಂ ನಿರ್ಮಲಾ ಕೇಸರಿ

ರಾಜ್ಯದ ಆರೋಗ್ಯ ಕ್ಷೇತ್ರದಲ್ಲಿ ಹಲವಾರು ವೈದ್ಯರು, ಸಹಾಯಕ ಸಿಬ್ಬಂದಿ ಸಮಾಜಕ್ಕೆ ಅವಿಸ್ಮರಣೀಯ ಸೇವೆಯನ್ನು ಸಲ್ಲಿಸಿದ್ದಾರೆ. ಅವರಲ್ಲಿ ಅಪ ರೂಪದ ವ್ಯಕ್ತಿತ್ವದ ಪರಿಪೂರ್ಣ ಮಹಿಳೆ ದಾವಣಗೆರೆಯ ಸುತ್ತಲಿನ ಜಿಲ್ಲೆಗಳ ಜನಮಾನಸದಲ್ಲಿ ಗತಿಸಿದ ನಂತರವೂ ಅಮರರಾಗಿದ್ದಾರೆ ಡಾ. ನಿರ್ಮಲ ಕೇಸರಿ.

ಈಗಿನ ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲ್ಲೂಕಿನ ಸೋಮನಹಳ್ಳಿ ಇವರ ಉಗಮ ಸ್ಥಾನ. ಅವರ ಪಾಟೀಲ ಮನೆತನ ನಂತರ ಕೇಸರಿಯಾಗಿ ಬದಲಾದದ್ದು ಈಗ ಇತಿಹಾಸ. ಅಸಂಖ್ಯಾತ ವೈದ್ಯರು/ ವೈದ್ಯೇತರ ವಿದ್ಯಾರ್ಥಿಗಳಿಗೆ ಮಾದರಿಯಾಗಿರುವ ನಿರ್ಮಲ ಕೇಸರಿಯವರಿಗೆ ಅವರ ತಂದೆ ವಕೀಲ ಮಹಾದೇವ ಕೇಸರಿಯವರೇ ಮೊದಲ ಆದರ್ಶ ವ್ಯಕ್ತಿ. ಅವರ ಮೇಲೆ ಅಪಾರವಾದ ಗೌರವ, ಪ್ರೀತಿಯನ್ನು ಹೊಂದಿದ್ದ ನಿರ್ಮಲ ಕೇಸರಿ ತಮ್ಮ ಜೀವನದುದ್ದಕ್ಕೂ  ಅವರ ನೀತಿಯನ್ನು ಪಾಲಿಸುತ್ತಿದ್ದರು. ವಿದ್ಯಾರ್ಥಿ ಜೀವನವನ್ನು ಧಾರವಾಡದಲ್ಲಿ ಕಳೆದಿದ್ದ ನಿರ್ಮಲ ಕೇಸರಿಯವರದು ತುಂಬು ಕುಟುಂಬ. ಸೀಮಿತ ಆದಾಯದಲ್ಲಿ ಕುಟುಂಬ ನಿರ್ವಹಣೆಯ ಜೊತೆಗೆ ಸಮಾಜಸೇವೆಗೂ ಹಣ ವ್ಯಯಿಸುತ್ತಿದ್ದ ತಂದೆಯ ವಿಶಾಲ ಮನೋಭಾವ ಮೇಡಂ ಅವರ ಮೇಲೆ ಆಳವಾದ ಪ್ರಭಾವವನ್ನು ಬೀರಿತು. ಪ್ರತಿ ಭಾನುವಾರ ಅವರ ಮನೆಯಲ್ಲಿ ಬಡ, ಅಸಹಾಯಕ ಜನರಿಗೆ ಕಲ್ಯಾಣ ಕಾರ್ಯಗಳನ್ನು ಏರ್ಪಡಿಸಿ ಪಾಯಸವನ್ನು ಉಣಬಡಿಸಿ ಹಬ್ಬದಂತೆ ಆಚರಿಸುತ್ತಿದ್ದರು. ಅಸಹಾಯಕರಿಗೆ ಕಾನೂನಿನ ಸಹಾಯ, ವಿಧವಾ ವಿವಾಹದಂತ ಕ್ರಾಂತಿಕಾರಿ ಕಾರ್ಯಕ್ರಮ ಗಳನ್ನು ಅಂದಿನ ದಿನಗಳಲ್ಲೇ ತಮ್ಮ ಮನೆಯಲ್ಲಿ ನಡೆಸಿಕೊಡುತ್ತಿದ್ದರು ಮಹಾದೇವ ಕೇಸರಿ. ಸೇವೆಗೆ ಮನಸ್ಸು ಮಾಡಿದರೆ ಕೌಟುಂಬಿಕ ವ್ಯವಸ್ಥೆ, ವೈವಾಹಿಕ ಸ್ಥಿತಿಗಳು ಎಂದಿಗೂ ನಮ್ಮ ಮಾರ್ಗಕ್ಕೆ ಅಡ್ಡಬರಲಾರವು ಎಂಬುದು ಮೇಡಂ ಅವರ ಅಚಲವಾದ ನಿಲುವು. ಅದಕ್ಕೆ ತಮ್ಮ ತಂದೆಯವರೇ ಸಾಕ್ಷಿ ಎಂದು ಆಗಾಗ ಹೇಳುತ್ತಿದ್ದರು. ತುಂಬು ಕುಟುಂಬದ ಯಜಮಾನರಾಗಿಯೂ ಕಷ್ಟದ ಆರ್ಥಿಕ ಪರಿಸ್ಥಿತಿಯಲ್ಲಿಯೂ ಅವರು ಸಮಾಜದ ನಿರ್ಗತಿಕರ ಸೇವೆಗೆ ಹಿಂಜರಿಯಲಿಲ್ಲ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು.

ಹಣದ ಮುಗ್ಗಟ್ಟಿನಲ್ಲೇ ಮುಂಬೈನ ಗ್ರಾಂಟ್ ಮೆಡಿಕಲ್  ಕಾಲೇಜಿನಲ್ಲಿ ಎಂ.ಬಿ.ಬಿ.ಎಸ್‌ ವಿದ್ಯಾಭ್ಯಾಸವನ್ನು ಮುಗಿಸಿದರು. ಆ ದಿನಗಳಲ್ಲಿ ವಿದ್ಯಾಭ್ಯಾಸದ ನಿರ್ವಹಣೆಗೆ ಆಕಾಶವಾಣಿಯಲ್ಲಿ ನಿರೂಪಕಿಯಾಗಿ ಕೆಲಸ ಮಾಡಿದ್ದನ್ನು ಅವರು ಹಲವು ಬಾರಿ ನೆನಪಿಸಿಕೊಳ್ಳುತ್ತಿದ್ದರು.

ನಂತರದ ದಿನಗಳಲ್ಲಿ ಹೆಚ್ಚಿನ ವೈದ್ಯಕೀಯ ವಿದ್ಯಾಭ್ಯಾಸಕ್ಕಾಗಿ ಇಂಗ್ಲೆಂಡ್‌ ಮತ್ತು ಅಮೇರಿಕಾ ದೇಶಗಳಿಗೂ ತೆರಳಿ ದರು. ಹತ್ತಾರು ವರ್ಷಗಳು ಪಾಶ್ಚಿಮಾತ್ಯ ಸಂಸ್ಕೃತಿಯ ಆರ್ಭಟದ ಮಧ್ಯೆಯೂ ಭಾರತೀಯ ನಡವಳಿಕೆಯನ್ನು ಪಾಲಿಸಿ ಕೊಂಡು ತಾಯ್ನಡಿನ ಸಂಸ್ಕೃತಿ ಕರೆಗೆ ಓಗೊಟ್ಟು ಅನೇಕ ವಿದೇಶಿ ವೈದ್ಯಕೀಯ ಪದವಿಗಳೊಂದಿಗೆ ಮತ್ತೆ ಭಾರತಕ್ಕೆ ಹಿಂದಿರುಗಿ, ಜೆ.ಜೆ.ಎಂ. ವೈದ್ಯಕೀಯ ಕಾಲೇಜಿನಲ್ಲಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದರು.  ವ್ಯಕ್ತಿಗಳ ಕಾರ್ಯಕ್ಷಮತೆ, ಬುದ್ಧಿಮತ್ತೆ, ಸೇವಾವೈಖರಿ, ಪ್ರಾಮಾಣಿಕತೆ ಗುರುತಿಸಿ, ಆದರಿಸಿ ಪ್ರೊತ್ಸಾಹಿಸುವ ಪರಿಪಾಠವನ್ನಿಟ್ಟುಕೊಂಡಿರುವ ಬಾಪೂಜಿ ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿ ಶಾಮನೂರು ಶಿವಶಂಕರಪ್ಪನವರು ನಿರ್ಮಲ ಕೇಸರಿಯವರಲ್ಲಿರುವ ಪ್ರತಿಭೆ, ಇಚ್ಛಾಶಕ್ತಿಯನ್ನು ಗಮನಿಸಿ ಅವರಿಗೆ ಹೆಚ್ಚಿನ ಜವಾಬ್ದಾರಿಯನ್ನು ವಹಿಸುತ್ತಲೇ ಬಂದರು.

ಮುಂದುವರೆದ ದೇಶಗಳಲ್ಲಿನ ಮತ್ತು ಭಾರತದಲ್ಲಿಯ ಆರೋಗ್ಯ ಸ್ಥಿತಿಗತಿಗಳಲ್ಲಿ ಅಜಗಜಾಂತರ ವ್ಯತ್ಯಾಸವಿರುವು ದನ್ನು ಮನಗಂಡು ದಂಗಾದರು. ಇಂಥಾ ಸ್ಥಿತಿಯಲ್ಲಿ ತಾವು ದೇಶಕ್ಕೆ ಮರಳಿ ಬಂದದ್ದು ಸಾರ್ಥಕವಾಯಿತೆಂದುಕೊಂಡು ಜನಸೇವೆಗೆ ನಿಂತರು. ಸಮುದಾಯದಲ್ಲಿ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವುದರೊಂದಿಗೆ ತಮ್ಮ ಸೇವೆಯನ್ನು ಪ್ರಾರಂಭಿಸಿದರು. ಸ್ವಚ್ಛತೆಯ ಮೂಲಕ ಕಾಯಿಲೆಗಳನ್ನು ದೂರವಿಡುವ ಬಗ್ಗೆ ಜನರಿಗೆ ಅಂದಿನ ದಿನಗಳಲ್ಲೇ (ಸುಮಾರು 50 ವರ್ಷಗಳ ಹಿಂದೆ) ಮನದಟ್ಟು ಮಾಡಲು ಪ್ರಯತ್ನಿಸಿದರು.

ಅವರ ವೈದ್ಯಕೀಯ/ ವೈದ್ಯಕೇತರ ಕ್ಷೇತ್ರದಲ್ಲಿನ ಸಾಧನೆ, ಸೇವೆಗಳ ಪಟ್ಟಿ ಮಾಡುತ್ತಾ ಹೋದರೆ ಅದು ದಾವಣಗೆರೆಯಿಂದ ಬೆಂಗಳೂರಿನಷ್ಟು ಉದ್ದವಾಗಬಹುದೆಂದರೂ ಉತ್ಪ್ರೇಕ್ಷೆಯಾಗಲಾರದು. ಮಕ್ಕಳ ಆರೋಗ್ಯದ ಬಗ್ಗೆ ಮುಖ್ಯವಾಗಿ ಆಹಾರ ಪೋಷಣೆ, ಸ್ತನ್ಯಪಾನದ ಬಗ್ಗೆ ಅವರ ಕಾಳಜಿ, ಸಂಶೋಧನೆ ಕೊಡುಗೆಗಳು ಇಡೀ ದೇಶದ ಗಮನವನ್ನು ಸೆಳೆದವು. 

ಅಂದಿನ ದಿನಗಳಲ್ಲಿ ಅಪೌಷ್ಟಕತೆ ನಮ್ಮ ದೇಶದಲ್ಲಿ ಮನೆ ಮಾಡಿ,  ದೇಶದ ಪ್ರಗತಿಗೂ ಮಾರಕವಾಗಿತ್ತು. ಸಾಂಕ್ರಾಮಿಕ ರೋಗಗಳಿಂದ ಮಕ್ಕಳ ಸಾವು ಏರುಗತಿಯಲ್ಲಿ ನಡೆದಿದ್ದ ಆ ಸಂದರ್ಭದಲ್ಲಿ ಮಧ್ಯ ಕರ್ನಾಟಕಕ್ಕೆ ಮಕ್ಕಳ ಪಾಲಿಗೆ ಸಂಜೀವಿನಿಯಾಗಿದ್ದರು ಡಾ. ನಿರ್ಮಲ ಕೇಸರಿ.

ಆಡಳಿತ ವರ್ಗ/ ಸರ್ಕಾರದ ಸಂಯೋಗದೊಂದಿಗೆ ಮಕ್ಕಳಿಗೆ ಪೌಷ್ಟಿಕ ಆಹಾರ ಔಷಧಿಗಳ ವ್ಯವಸ್ಥೆ ಮಾಡುವುದರ ಜೊತೆಗೆ ಬಾಟಲಿಯಲ್ಲಿ ಹಾಲುಣಿಸುವ ಮಾರಕ ವಿಧಾನಗಳ ಬಗ್ಗೆ ವೈದ್ಯರಲ್ಲಿ, ಸಮಾಜದಲ್ಲಿ, ಆರೋಗ್ಯ ಮತ್ತು ಸಾಮಾಜಿಕ ಕಾರ್ಯಕರ್ತರಲ್ಲಿ, ವಿದ್ಯಾರ್ಥಿಗಳಲ್ಲಿ ಅರಿವನ್ನು ಮೂಡಿಸುವಲ್ಲಿ ಯಶಸ್ವಿಯಾದರು. ಸ್ತನ್ಯಪಾನ ಕ್ಷೇತ್ರದಲ್ಲಿ ಅನೇಕ ಸ್ಥಳೀಯ, ಸರಳ ಮತ್ತು ಜನಸ್ನೇಹಿ ಆವಿಷ್ಕಾರಗಳನ್ನು ಪ್ರಚಾರಗೊಳಿಸಿದರು.  ಅವುಗಳಲ್ಲಿ ಒಂದಾದ ತಾಯಂದಿರ ಸ್ತನದ ಹುದುಗಿರುವ ತೊಟ್ಟನ್ನು ಸುಲಭವಾಗಿ ಸರಿಪಡಿಸಬಹುದಾದ ಸಿರಿಂಜ್‌ ವಿಧಾನವು ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದುಮಾಡಿ ಅನೇಕ ತಾಯಿ-ಮಕ್ಕಳ ಪಾಲಿಗೆ ವರವಾಗಿ ಪರಿಣಮಿಸಿತು. ಇವರು ಪರಿಚಯಿಸಿದ ದಾವಣಗೆರೆ ಮಿಕ್ಸ್‌ ಎಂಬ ಪೌಷ್ಠಿಕ ಆಹಾರ ಪ್ರಾಣಾಪಾಯದ ಅಂಚಿನಲ್ಲಿದ್ದ ಅನೇಕ ಅಪೌಷ್ಠಿಕ ಮಕ್ಕಳ ಜೀವನವನ್ನು ಉಳಿಸಿದ್ದು ಈಗ ಇತಿಹಾಸ.

ಗುರುವಾಗಿ ಡಾ. ನಿರ್ಮಲ ಕೇಸರಿ : ಮಕ್ಕಳ ಆರೋಗ್ಯ ಮತ್ತು ಕ್ಷೇಮದ ಬಗ್ಗೆ ದೂರದೃಷ್ಟಿಯನ್ನಿಟ್ಟುಕೊಂಡಿದ್ದ ಮೇಡಂ ಅದನ್ನು ಕಾರ್ಯರೂಪಕ್ಕೆ ತರಲು ಅನುವಾಗುವಂತೆಯೇ ತಮ್ಮ ವಿದ್ಯಾರ್ಥಿಗಳನ್ನು ಹುರಿದುಂಬಿಸಿ ಸಿದ್ಧಗೊಳಿಸಿದರು. ಅವರ ಮಾರ್ಗದರ್ಶನದಲ್ಲಿ ನೂರಾರು ವೈದ್ಯರು ಮತ್ತು ಮಕ್ಕಳ ವೈದ್ಯರು ದೇಶಾದ್ಯಂತ ಕಾರ್ಯಪ್ರವೃತ್ತರಾಗಿ ಮೇಡಂ ಕನಸನ್ನು ನನಸಾಗಿಸಲು ಪಣ ತೊಟ್ಟು ಅದರಲ್ಲಿ ಯಶಸ್ವಿಯೂ ಆದರು. ತಮ್ಮ ವಿಶಾಲ ಮನೋಭಾವ, ಕಾರ್ಯಕ್ಷಮತೆ, ಎಲ್ಲರನ್ನು ಪ್ರೀತಿಸುವ ಸ್ವಭಾವದ ಮೂಲಕ ತಮ್ಮ ಎಲ್ಲಾ ವಿದ್ಯಾರ್ಥಿಗಳ ಪಾಲಿಗೆ ಆದರ್ಶಪ್ರಾಯ ಗುರುವಾದರು. ಅದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿ ಮಾತೃ ಸ್ವರೂಪಿಯಾದರು.

ತಮ್ಮ ಜೀವನದಲ್ಲಿ  ಆರೋಗ್ಯವಾಗಿರುವವರೆಗೂ ಬಾಪೂಜಿ ಮಕ್ಕಳ ಆಸ್ಪತ್ರೆಯ ನಿರ್ದೇಶಕರಾಗಿ ಮಕ್ಕಳ ಸೇವೆಯನ್ನು ಮುಂದುವರೆಸಿದರು. ಅಲಂಕಾರ, ಆಡಂಬರ, ದೊಡ್ಡಸ್ತಿಕೆ, ದರ್ಪ ಅವರಲ್ಲಿ ಎಂದೂ ಕಂಡುಬರಲಿಲ್ಲ. ಬದಲಾಗಿ ಪ್ರೀತಿ, ಆತ್ಮವಿಶ್ವಾಸ, ಪ್ರಾಮಾಣಿಕತೆಗಳನ್ನೇ ಆಭರಣವಾಗಿ ಧರಿಸಿದ್ದರು. ಬಹುತೇಕ ಸ್ತ್ರೀವಾದಿಯಾಗಿದ್ದ ಅವರು ಎಂದಿಗೂ ಹೆಣ್ಣುಮಕ್ಕಳನ್ನು ಬಿಟ್ಟುಕೊಡುದೇ ಪ್ರತಿ ಹೆಣ್ಣು ಮಗುವನ್ನು ಭಾರತೀಯ ಸಂಸ್ಕೃತಿಯ ಪ್ರತೀಕ  ಎನ್ನುವಂತೆ ಕಾಣುತ್ತಿದ್ದರು. ಆದರೆ ಇತ್ತೀಚಿನ ವಿದ್ಯಾಮಾನಗಳಲ್ಲಿ ಯುವ ಜನತೆ ನಡೆಯುತ್ತಿರುವ ದಿಕ್ಕನ್ನು ಕಂಡು ಮರುಗಿದ್ದೂ ಉಂಟು.

ನಾಡಿನ ಮಕ್ಕಳ, ಮಹಿಳೆಯರ, ವೈದ್ಯರ, ವಿದ್ಯಾರ್ಥಿಗಳ ಹೃದಯದಲ್ಲಿ ಉನ್ನತ ಸ್ಥಾನವನ್ನು ಅಲಂಕರಿಸಿ ಅವರೆಲ್ಲರ ಪಾಲಿಗೆ ಅಜರಾಮರವಾದರು. ಮಕ್ಕಳ ಉನ್ನತ ಚಿಕಿತ್ಸೆ ಅಭ್ಯುದಯದ ಕಾಯಕದಲ್ಲಿ ಮುಳುಗಿದ್ದವರಿಗೆ ಕೊನೆಗೆ ಕಾಲ ಸ್ವಲ್ಪ ವಿರ್ದಯಿಯಾಗಿದ್ದು ಕಾಕತಾಳೀಯ. ಮೆದುಳಿನ ಸವೆತದ ಖಾಯಿಲೆಗೆ  ಒಳಗಾಗಿ ತೀವ್ರತರವಾದ ಮರೆವು ಅವರನ್ನು ಕಾಡತೊಡಗಿತು. ಮಕ್ಕಳ ತಜ್ಞೆ ನಿರ್ಮಲ ಕೇಸರಿ ಕೊನೆಯ ದಿನಗಳಲ್ಲಿ ಮಗುವಿನಂತಾದರು. ಶರಣರ ಮಹಿಮೆ ಮರಣದಲ್ಲಿ ನೋಡು ಎಂಬ ನುಡಿಯಂತೆ ಮೇಡಂರವರ ಕೊನೆಯ ದಿನಗಳಲ್ಲಿ ಅವರ ಸೇವೆಯನ್ನು ಅವರ ವಿದ್ಯಾರ್ಥಿಗಳು ಸಹೋದ್ಯೋಗಿ ವೈದ್ಯರು, ಬಾಪೂಜಿ ಮಕ್ಕಳ ಆಸ್ಪತ್ರೆಯ ಎಲ್ಲಾ ಶುಶ್ರೂಕಿಯರು ತಮಗೆ ಸಿಕ್ಕ ಸದಾವಕಾಶ ಎಂಬಂತೆ ಡಾ. ಬಾಣಾಪೂರಮಠ್‌ ರವರ ನೇತೃತ್ವದಲ್ಲಿ ಡಾ. ಎಲಿಯವರ ಸಹಾಯದೊಂದಿಗೆ,  ಟೊಂಕಕಟ್ಟಿ ನಿಂತರು. ಅವರು ಜನರಿಗೆ ನೀಡಿದ ಪ್ರೀತಿ, ಆದರಗಳು ವ್ಯರ್ಥ ವಾಗದೇ. ಅವರ ಅನುಯಾಯಿಗಳು, ವಿದ್ಯಾರ್ಥಿಗಳು ತೋರಿದ ಪ್ರೀತಿ, ಮಮತೆ, ಗೌರವ ಅಪಾರ.  08.01.2016 ರಂದು ಅವರು ಈ ಲೋಕದಿಂದ ಭೌತಿಕವಾಗಿ ಮರೆಯಾದರು. ಅವರ ಜೀವನ, ಕಾಯಕ ನಿಷ್ಠೆ. ಮಾನವ ಪ್ರೇಮ, ಪ್ರಾಮಾಣಿಕತೆ, ಸಮುದಾಯದ ಕಾಳಜಿ ನಮಗೆ ಎಂದೆಂದಿಗೂ ಮಾದರಿ ಎಂಬುದು ಸೂರ್ಯಚಂದ್ರರಷ್ಟೇ ಸತ್ಯ.

ಕೆಚ್ಚೆದೆಯ ಸಾಧಕಿ, ಮೃದು ಹೃದಯಿ ಮೇಡಂ ನಿರ್ಮಲಾ ಕೇಸರಿ - Janathavani– ಡಾ. ಎಸ್. ಮೃತ್ಯುಂಜಯ, ಪ್ರಾಧ್ಯಾಪಕರು, ಮಕ್ಕಳ ವಿಭಾಗ,ಜೆ.ಜೆ.ಎಂ. ವೈದ್ಯಕೀಯ ಮಹಾವಿದ್ಯಾಲಯ, ದಾವಣಗೆರೆ.

error: Content is protected !!