ಸಿರಿಗೆರೆ, ಯಲವಟ್ಟಿ ಶ್ರೀಗಳು, ಎಸ್ಸೆಸ್ಸೆಂ, ಡಾ. ಪ್ರಭಾ, ಬಿ.ಪಿ. ಹರೀಶ್ ಭಾಗಿ
ಮಲೇಬೆನ್ನೂರು, ಸೆ.12- ಸಿರಿಗೆರೆ ಬೃಹನ್ಮಠದಲ್ಲಿ ಇದೇ ದಿನಾಂಕ 24 ರಂದು ಜರುಗುವ ಲಿಂಗೈಕ್ಯ ಜಗದ್ಗುರು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮೀಜಿಯವರ 32ನೇ ಶ್ರದ್ಧಾಂಜಲಿ ಸಮಾರಂಭದ ದಾಸೋಹಕ್ಕೆ ಹರಿಹರ ತಾಲ್ಲೂಕಿನಿಂದ ಭಕ್ತಿ ಸಮರ್ಪಣೆ (ಅಕ್ಕಿ ಸಮರ್ಪಣೆ) ಸಮಾರಂಭವನ್ನು ಯಲವಟ್ಟಿ ಗ್ರಾಮದಲ್ಲಿ ನಾಡಿದ್ದು ದಿನಾಂಕ 14ರ ಶನಿವಾರ ಬೆಳಗ್ಗೆ 11.30ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ಹರಿಹರ ತಾಲ್ಲೂಕು ಸಾಧು ವೀರಶೈವ ಸಮಾಜದ ಕಾರ್ಯದರ್ಶಿ ನಿಟ್ಟೂರಿನ ಇಟಗಿ ಶಿವಣ್ಣ ತಿಳಿಸಿದ್ದಾರೆ.
ಪಟ್ಟಣದ ಶಿವ ವಿವಿಧೋದ್ಧೇಶ ಸಹಕಾರ ಸಂಘದ ಸಭಾಂಗಣದಲ್ಲಿ ಮೊನ್ನೆ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಮತ್ತು ಯಲವಟ್ಟಿಯ ಗುರುಸಿದ್ಧಾಶ್ರಮದ ಶ್ರೀ ಯೋಗಾನಂದ ಸ್ವಾಮೀಜಿ ಅವರ ದಿವ್ಯ ಸಾನ್ನಿಧ್ಯದಲ್ಲಿ ಈ ಭಕ್ತಿ ಸಮರ್ಪಣೆ ಸಮಾರಂಭ ಜರುಗಲಿದೆ ಎಂದರು.
ಹರಿಹರ ತಾ. ಸಾಧು ವೀರಶೈವ ಸಮಾಜದ ಅಧ್ಯಕ್ಷ ಅಮರಾವತಿ ಮಹಾದೇವಪ್ಪ ಗೌಡ್ರು ಅಧ್ಯಕ್ಷತೆಯಲ್ಲಿ ನಡೆಯುವ ಈ ಸಮಾರಂಭದಲ್ಲಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್, ಶಾಸಕ ಬಿ.ಪಿ.ಹರೀಶ್ ಸೇರಿದಂತೆ ಇತರರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಸಮಾರಂಭದ ನಂತರ ಪ್ರಸಾದ ವ್ಯವಸ್ಥೆ ಮಾಡಲಾಗಿದ್ದು, ಅಂದು ಬೆಳಿಗ್ಗೆ 11 ಗಂಟೆಗೆ ಸಿರಿಗೆರೆ ಶ್ರೀಗಳನ್ನು ಎಕ್ಕೆಗೊಂದಿ ಕ್ರಾಸ್ನಿಂದ ಯಲವಟ್ಟಿ ಗ್ರಾಮಕ್ಕೆ ಬೈಕ್ ರಾಲಿ ಮೂಲಕ ಕರೆತಲಾಗುವುದೆಂದು ಗ್ರಾಮದ ಯುವಕ ಡಿ.ಜಿ. ರಾಜೇಶ್ಗೌಡ ತಿಳಿಸಿದರು.
ಹರಿಹರ ತಾಲ್ಲೂಕು ಸಾಧು ವೀರಶೈವ ಸಮಾಜದ ಅಧ್ಯಕ್ಷ ಅಮರಾವತಿ ಮಹಾದೇವಪ್ಪ ಗೌಡ್ರು, ಸಮಾಜದ ನಿರ್ದೇಶಕ ಜಿ.ಮಂಜುನಾಥ್ ಪಟೇಲ್, ಯಲವಟ್ಟಿ ಗ್ರಾಮದ ಮುಖಂಡರಾದ ಡಿ.ಹೆಚ್.ಚನ್ನಬಸಪ್ಪ, ಡಿ.ಹೆಚ್. ಮಹೇಂದ್ರಪ್ಪ, ಕೆ. ಚನ್ನಬಸಪ್ಪ, ಗ್ರಾ.ಪಂ. ಸದಸ್ಯ ಬಿ.ಸಿದ್ದೇಶ್, ಬಿ.ವಿ.ಅನಿಲ್, ಡಿ.ಸಿ. ಕೀರ್ತಿಕುಮಾರ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.