ದಾವಣಗೆರೆ, ಸೆ.13- ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ವತಿಯಿಂದ ನಗರದ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಸಮುದಾಯ ಭವನದಲ್ಲಿ ನಾಡಿದ್ದು ದಿನಾಂಕ 15ರ ಭಾನುವಾರ ಬೆಳಗ್ಗೆ 11.30ಕ್ಕೆ ರಾಜ್ಯ ಮಟ್ಟದ 30ನೇ ವಾರ್ಷಿಕ ಮಹಾಸಭೆ ನಡೆಯಲಿದೆ ಎಂದು ಪರಿಷತ್ತಿನ ಜಿಲ್ಲಾಧ್ಯಕ್ಷ ಕೆ.ಬಿ. ಪರಮೇಶ್ವರಪ್ಪ ತಿಳಿಸಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಂದು ಸುತ್ತೂರಿನ ಶಿವರಾತ್ರಿ ದೇಶಿ ಕೇಂದ್ರದ ಶ್ರೀಗಳು, ಗದಗಿನ ತೋಂಟದ ಸಿದ್ದರಾಮ ಶ್ರೀಗಳು ಹಾಗೂ ಪಾಂಡೋಮಟ್ಟಿಯ ಗುರು ಬಸವ ಶ್ರೀಗಳು ಸಾನ್ನಿಧ್ಯ ವಹಿಸಲಿದ್ದಾರೆ ಎಂದು ಹೇಳಿದರು.
ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಅವರು ಮಹಾಸಭೆಯನ್ನು ಉದ್ಘಾಟಿಸಲಿದ್ದು, ಪರಿಷತ್ ಅಧ್ಯಕ್ಷ ಡಾ. ಸಿ. ಸೋಮಶೇಖರ್ ಅಧ್ಯಕ್ಷತೆ ವಹಿಸುವರು. ಪರಿಷತ್ತಿನ ಗೌರವ ಸಲಹೆಗಾರ ಗೊ.ರು. ಚನ್ನಬಸಪ್ಪ, ರಾಜ್ಯ ಕದಳಿ ಮಹಿಳಾ ವೇದಿಕೆಯ ಸಂಚಾಲಕರಾದ ಸುಶೀಲ ಸೋಮಶೇಖರ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಹೆಚ್.ಕೆ ಲಿಂಗರಾಜ್, ಡಾ. ಶಿವರಾಜ್ ಕಬ್ಬೂರು, ಲಿಂಗಾನಂದ ಕಮತ್ತಹಳ್ಳಿ, ಭರಮಪ್ಪ ಮೈಸೂರು, ಆರ್. ಸಿದ್ದೇಶಪ್ಪ, ಬಿ.ಟಿ. ಪ್ರಕಾಶ್, ಜಿ.ಎಂ. ಕುಮಾರ್, ಬುಳ್ಳಾಪುರದ ಮಲ್ಲಿಕಾರ್ಜುನಸ್ವಾಮಿ ಮತ್ತು ಇತರರು ಸುದ್ದಿಗೋಷ್ಠಿಯಲ್ಲಿದ್ದರು.