ನಕಲಿ ವೈದ್ಯರ ತಡೆಗೆ ಅಭಿಯಾನ

ನಕಲಿ ವೈದ್ಯರ ತಡೆಗೆ ಅಭಿಯಾನ

ದಾವಣಗೆರೆ, ಸೆ. 12 – ನಕಲಿ ವೈದ್ಯರ ಹಾವಳಿ ತಡೆಯಲು ಅಭಿಯಾನ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಕಲಿ ವೈದ್ಯರಿಂದ ಚಿಕಿತ್ಸೆ ಪಡೆಯುವುದು ಅಪಾಯಕಾರಿ. ಇದರಿಂದ ಅಂಗವೈಕಲ್ಯ ಹಾಗೂ ಮಾರಣಾಂತಿಕ ಸಮಸ್ಯೆಗಳೂ ಬರಬಹುದು ಎಂದರು.

ಇತ್ತೀಚೆಗಷ್ಟೇ ಇಬ್ಬರು ನಕಲಿ ವೈದ್ಯರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿಗಳ ಮೂಲಕ ನಕಲಿ ವೈದ್ಯರ ವಿರುದ್ಧ ಅಭಿಯಾನ ನಡೆಸಲು ನಿರ್ಧರಿಸಲಾಗಿದೆ. ನಕಲಿ ವೈದ್ಯರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ಸಾರ್ವಜನಿಕರೂ ಸಹ ನಕಲಿ ವೈದ್ಯರ ಬಗ್ಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು.

ರಸ್ತೆ ಬದಿಯಲ್ಲಿ ಅಡಿಕೆ ಸಿಪ್ಪೆ ಹಾಕದಂತೆ ಇದೇ ಸಂದರ್ಭದಲ್ಲಿ ರೈತರಲ್ಲಿ ಮನವಿ ಮಾಡಿಕೊಂಡ ಅವರು, ಸಿಪ್ಪೆಯನ್ನು ಗೊಬ್ಬರ ಮಾಡಲು ಕೃಷಿ ಇಲಾಖೆಯ ಮೂಲಕ ಕೆಮಿಕಲ್ ಕಾಂಪೋಸ್ಟ್ ನೀಡಲಾಗುತ್ತಿದೆ. ಇದನ್ನು ಬಳಸಬೇಕು ಎಂದರು.

ರಸ್ತೆ ಬದಿಯಲ್ಲಿ ಸಿಪ್ಪೆ ಸುಡುವ ಕಾರಣದಿಂದ ಕಳೆದ ವರ್ಷ ಎರಡು ಅಪಘಾತಗಳಾಗಿ ಅಮಾಯಕ ಜೀವಗಳು ಬಲಿಯಾಗಿವೆ. ಹೀಗಾಗಿ ರೈತರು ರಸ್ತೆ ಬದಿ ಸಿಪ್ಪೆ ಹಾಕಬಾರದು. ರೈತರಿಗೆ ತೊಂದರೆ ಕೊಡುವ ಉದ್ದೇಶ ನಮ್ಮದಲ್ಲ. ಆದರೆ, ಇದನ್ನು ಮೀರಿ ಸಿಪ್ಪೆ ರಸ್ತೆಗೆ ಹಾಕಿದರೆ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.

error: Content is protected !!