ಹರಿಹರ : ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗಳ ಸದ್ಬಳಕೆ ಮಾಡಿಕೊಳ್ಳಲು ಕರೆ

ಹರಿಹರ : ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗಳ ಸದ್ಬಳಕೆ ಮಾಡಿಕೊಳ್ಳಲು ಕರೆ

ಸುಜ್ಞಾನ ನಿಧಿ ಶಿಷ್ಯ ವೇತನ ಮಂಜೂರಾತಿ ಪತ್ರ ವಿತರಣಾ ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷರಾದ ಕವಿತಾ ಮಾರುತಿ ಬೇಡರ್

ಹರಿಹರ,ಸೆ.11 – ವಿದ್ಯಾರ್ಥಿಗಳು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗಳ ಸದ್ಬಳಕೆ ಮಾಡಿಕೊಂಡು, ಮುಂದೆ ಸಮಾಜದಲ್ಲಿ ಗಣ್ಯ ವ್ಯಕ್ತಿಗಳಾಗಿ ಇತರರಿಗೆ ಒಳಿತನ್ನು ಮಾಡು ವಂತಾಗಲಿ ಎಂದು ನಗರಸಭೆ ಅಧ್ಯಕ್ಷರಾದ ಕವಿತಾ ಮಾರುತಿ ಬೇಡರ್ ಹೇಳಿದರು. 

 ನಗರದ ಬಿರ್ಲಾ ಕಲ್ಯಾಣ ಮಂಟಪದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ. ಟ್ರಸ್ಟ್ ನಿಂದ ಮೊನ್ನೆ ಆಯೋಜಿಸಲಾಗಿದ್ದ, ಸುಜ್ಞಾನ ನಿಧಿ ಶಿಷ್ಯ ವೇತನ ಮಂಜೂರಾತಿ ಪತ್ರ ವಿತರಣೆ, ಹಾಗೂ ಪತ್ರಕರ್ತರಿಗೆ ಅಭಿನಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ವಿದ್ಯಾರ್ಥಿಗಳು ಧರ್ಮಸ್ಥಳ ಸಂಸ್ಥೆಯಿಂದ ಸುಜ್ಞಾನ ನಿಧಿ ಶಿಷ್ಯವೇತನ ಮಂಜೂರಾತಿ ಪಡೆದುಕೊಂಡಿದ್ದೀರಿ. ಅದನ್ನು ಪಡೆಯುವುದರ ಹಿಂದೆ, ಬಹಳಷ್ಟು ಜನರ ಶ್ರಮದ ಫಲ ಇದೆ. ದುರುಪಯೋಗ ಮಾಡಿಕೊಳ್ಳದೇ ಸದ್ಬಳಕೆ ಮಾಡಿಕೊಂಡಾಗ ಮಾತ್ರ ಜೀವನ ಸಾರ್ಥಕ ವಾಗುತ್ತದೆ ಮತ್ತು ಸದೃಢವಾಗುತ್ತದೆ ಎಂದರು.

ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಸಮುದಾಯ ಭವನದ ಕಟ್ಟಡಗಳು, ಶೌಚಾಲಯ, ಮಹಿಳೆಯರಿಗೆ ಸ್ವಾವಲಂಬಿ ಜೀವನಕ್ಕೆ ಬೇಕಾದ ಯೋಜನೆಗಳನ್ನು ರೂಪಿಸುವುದಲ್ಲದೆ, ಗೋ ಸಂರಕ್ಷಣೆ, ಗೋಶಾಲೆ ತೆರೆಯುವ ಕಾರ್ಯಗಳನ್ನು ಮಾಡುತ್ತಿರುವುದು ಶ್ಲ್ಯಾಘನೀಯ ಎಂದು ಹೇಳಿದರು.

ಯೋಜನೆಯ ಜಿಲ್ಲಾ ನಿರ್ದೇಶಕ ಎಂ.ಲಕ್ಷ್ಮಣ್ ಮಾತನಾಡಿ, ಮಕ್ಕಳು ಉತ್ತಮ ಹಾಗೂ ತಾಂತ್ರಿಕ ಶಿಕ್ಷಣ ಪಡೆಯುವುದಕ್ಕಾಗಿ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗಡೆಯವರು ಸುಜ್ಞಾನನಿಧಿ ಶಿಷ್ಯವೇತನ ನೀಡುತ್ತಿದ್ದು,  ಹರಿಹರ ತಾಲ್ಲೂಕಿನಾದ್ಯಂತ,  ಆರ್ಥಿಕ ವರ್ಷದಲ್ಲಿ 152 ವಿದ್ಯಾರ್ಥಿಗಳಿಗೆ ಮತ್ತು ಇಲ್ಲಿಯವರೆಗೂ 281 ವಿದ್ಯಾರ್ಥಿಗಳಿಗೆ 30 ಲಕ್ಷದ 76 ಸಾವಿರ ರೂ. ಶಿಷ್ಯವೇತನ ನೀಡಲಾಗಿದೆ. ಒಟ್ಟು ರಾಜ್ಯದಾದ್ಯಂತ 97 ಸಾವಿರಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಗೆ 114.50 ಕೋಟಿ ರೂ, ಮೊತ್ತದ ಶಿಷ್ಯವೇತನ ನೀಡಲಾಗಿದೆ ಎಂದು ತಿಳಿಸಿದರು.

ಪಿಎಸ್ಐ ಶ್ರೀಪತಿ ಗಿನ್ನಿ ಮಾತನಾಡಿ, ಇಂಜಿನಿಯರಿಂಗ್, ಡಿಪ್ಲೋಮಾ ಮತ್ತು ಐಟಿಐ ನಂತಹ ಕೋರ್ಸ್ ಗಳಲ್ಲಿ ಅಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ಈ ಯೋಜನೆ ಅತ್ಯಂತ ಅವಶ್ಯಕವಾಗಿದೆ. ಎಲ್ಲಾ ವಿದ್ಯಾರ್ಥಿಗಳು ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.

ಇಂದಿನ ವಿದ್ಯಾರ್ಥಿ ಯುವಜನರು ಮಾದಕ ವ್ಯಸನಿಗಳಾಗುತ್ತಿರುವುದು ಹೆಚ್ಚಾಗುತ್ತಿದೆ. ಮದ್ಯಪಾನ, ಧೂಮಪಾನ ಜೊತೆಗೆ ಮಾದಕ ದ್ರವ್ಯಗಳ ಬಳಕೆಯಿಂದ ತಮ್ಮ ಅಮೂಲ್ಯವಾದ ವಿದ್ಯಾರ್ಥಿ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಯಾವುದೇ ರೀತಿಯ ದುಶ್ಚಟಗಳಿಗೆ ಬಲಿಯಾಗದೆ, ತಮ್ಮ ತಂದೆ- ತಾಯಿಗಳಿಗೆ ಸಂಕಷ್ಟವನ್ನು ನೀಡದೆ, ಚೆನ್ನಾಗಿ ಅಭ್ಯಾಸ ಮಾಡಿ ಒಳ್ಳೆಯ ಉನ್ನತ ಹುದ್ದೆ ಗಳಿಸಿಕೊಳ್ಳಿ ಎಂದು ಸಲಹೆ ನೀಡಿದರು.

ವಕೀಲರ ಸಂಘದ ಅಧ್ಯಕ್ಷ ಬಿ.ಆನಂದ್ ಕುಮಾರ್ ಮಾತನಾಡಿ, ರಾಜ್ಯದಲ್ಲಿಯೇ ಅತ್ಯಂತ ಚಟುವಟಿಕೆಯುಳ್ಳ ಏಕೈಕ ಸಂಘ ಎಂದರೆ ಅದು ಧರ್ಮಸ್ಥಳ ಸಂಸ್ಥೆಯಾಗಿದೆ. 

ಪರಿಸರ ರಕ್ಷಣೆ, ಉದ್ಯೋಗ, ಶಿಕ್ಷಣ, ದೇವಾಲ ಯಗಳ ಜೀರ್ಣೋ ದ್ಧಾರ, ಮುಂತಾದ ಹಲವಾರು ಕಾರ್ಯಕ್ರಮ ಗಳನ್ನು ನಡೆಸಿಕೊಂಡು ಬರುತ್ತಿದ್ದರೂ ಸಹ ಸರ್ಕಾರದ ಯಾವುದೇ ಅನುದಾನವನ್ನು ಬಯಸದೇ ತನ್ನದೇ ಆದ ಸ್ವಂತಿಕೆಯನ್ನು ಉಳಿಸಿಕೊಂಡಿದೆ ಎಂದು ಹೇಳಿದರು. 

ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷ ಎಚ್.ಪಿ.ಬಸವರಾಜ್ (ಬಾಬಣ್ಣ) ಮಾತನಾಡಿ, ಧರ್ಮಸ್ಥಳ ಸಂಸ್ಥೆಯ ಕಾರ್ಯವೈಖರಿ  ದೇಶದ ಅನ್ಯ ರಾಜ್ಯ ಮತ್ತು ವಿದೇಶದಲ್ಲಿರುವ ಸಂಸ್ಥೆಗಳಿಗೆ ಅನುಕರಣೆ ಮಾಡುವ ನಿಟ್ಟಿನಲ್ಲಿ ಬೆಳೆದು ನಿಂತಿದೆ ಎಂದರು.

ಬಿಇಓ ಡಿ. ದುರುಗಪ್ಪ, ನಾರಾಯಣ ಆಶ್ರಮದ ಗುರೂಜಿಗಳು, ಪತ್ರಕರ್ತರ ಸಂಘದ ಅಧ್ಯಕ್ಷೆ ಶಾಂಭವಿ ನಾಗರಾಜ್ ಮುಂತಾದವರು ಮಾತನಾಡಿದರು.

ಶ್ರೀ ಧರ್ಮಸ್ಥಳ ಗ್ರಾಮ ಅಭಿವೃದ್ಧಿ ಬಿ.ಸಿ. ಟ್ರಸ್ಟ್ ನ ತಾಲ್ಲೂಕು ಯೋಜನಾಧಿಕಾರಿ ನಂದಿನಿ ಶೇಟ್, ಪದ್ಮರಾಜ್  ಜೈನ್, ಜನಜಾಗೃತಿ ವೇದಿಕೆ ಸದಸ್ಯ ರಾಜಶೇಖರ್ ಕೊಂಡಜ್ಜಿ, ಮಾರುತಿ ಬೇಡರ್, ಭಾರತಿ ಒಂಟೆಗೌಡ್ರು, ಶ್ವೇತಾ,  ಜಯಲಕ್ಷ್ಮಿ, ವಿಠಲ್, ನಿಂಗರಾಜ್, ದೇವರಾಜ್, ಸುಶೀಲಾ, ಗೀತಾ, ತನುಜಾ, ವೀರಭದ್ರ ಆಚಾರ್, ವಿವೇಕ್ ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

error: Content is protected !!