ದಾವಣಗೆರೆ, ಸೆ. 11- ಪರಿಶಿಷ್ಟ ಜಾತಿಗೊಳಪಟ್ಟ ಉಪ ಜಾತಿಗಳಿಗೆ ಒಳ ಮೀಸಲಾತಿ ಕಲ್ಪಿಸಲು ರಾಜ್ಯ ಸರ್ಕಾರಕ್ಕೆ ಅಧಿಕಾರವಿದೆ ಎಂಬ ಸರ್ವೋಚ್ಛ ನ್ಯಾಯಾಲಯದ (ಸುಪ್ರಿಂಕೋರ್ಟ್) ಐತಿಹಾಸಿಕ ತೀರ್ಪಿನ ಹಿನ್ನೆಲೆಯಲ್ಲಿ ಒಳ ಮೀಸಲಾತಿ ಜಾರಿ ಮಾಡುವುದು ಸೇರಿದಂತೆ, ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ನಾಳೆ ದಿನಾಂಕ 12 ರಂದು ಏಕಕಾಲಕ್ಕೆ ತಮಟೆ ಚಳವಳಿ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿ ಜಿಲ್ಲಾ ಸಂಚಾಲಕ ಕುಂದುವಾಡ ಮಂಜುನಾಥ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ತಮಟೆ ಚಳವಳಿಯ ಕರಪತ್ರ ಬಿಡುಗಡೆ ಮಾಡಿ ಮಾತನಾಡಿದ ಅವರು, ಒಳ ಮೀಸಲಾತಿ ಅನುಷ್ಠಾನಕ್ಕೆ ತರುವ ಅಧಿಕಾರ ಆಯಾ ರಾಜ್ಯ ಸರ್ಕಾರಗಳಿಗೆ ಇದೇ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿರುವುದು ಸ್ವಾಗತಾರ್ಹ.
ಈ ತೀರ್ಪನ್ನು ರಾಜ್ಯ ಸರ್ಕಾರ ಚಾಚೂ ತಪ್ಪದೇ ಪಾಲಿಸಿ, ಒಳಮೀಸಲಾತಿ ಜಾರಿಗೆ ಮುಂದಾಗಬೇಕೆಂದರು.
ನಾಳೆ ಗುರುವಾರ ಬೆಳಿಗ್ಗೆ 11 ಗಂಟೆಯಿಂದ ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಹಳೆ ಪಿ.ಬಿ. ರಸ್ತೆ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿಯವರೆಗೆ `ಬೃಹತ್ ತಮಟೆ’ ಚಳವಳಿ ನಡೆಯಲಿದೆ.
ಪತ್ರಿಕಾಗೋಷ್ಠಿಯಲ್ಲಿ ಸಮಿತಿ ಪದಾಧಿಕಾರಿಗಳಾದ ಹನುಮಂತಪ್ಪ ಅಣಜಿ, ಹರಿಹರದ ಪಿ.ಜೆ. ಮಹಾಂತೇಶ್, ಹನುಮಂತಪ್ಪ ಬೇತೂರು, ನಾಗರಾಜ್ ಬಿ. ಚಿತ್ತಾನಹಳ್ಳಿ, ಕೆ. ವಿಜಯಲಕ್ಷ್ಮಿ ಉಪಸ್ಥಿತರಿದ್ದರು.