ಹರಿಹರ: `ನಮಸ್ತೆ’ ಯೋಜನೆಯಡಿ ಜರುಗಿದ ಕಾರ್ಯಾಗಾರದಲ್ಲಿ ವಿಜಯಲಕ್ಷ್ಮಿ
ಹರಿಹರ, ಸೆ.10- ಒಳಚರಂಡಿ ಮತ್ತು ಸೆಪ್ಟಿಕ್ ಟ್ಯಾಂಕ್‍ಗಳನ್ನು ರಕ್ಷಣಾ ಸಾಧನಗಳಿಲ್ಲದೆ ಹಸ್ತ ಚಾಲಿತವಾಗಿ ಸ್ವಚ್ಛಗೊಳಿಸುವಂತಿಲ್ಲ ಎಂದು ಡಿಎಂಎ ಕಚೇರಿಯ ಕೋ-ಆರ್ಡಿನೇಟರ್ ವಿಜಯಲಕ್ಷ್ಮಿ ಹೇಳಿದರು.
ನಗರಸಭೆ ಸಭಾಂಗಣದಲ್ಲಿ ಮೊನ್ನೆ ನಡೆದ ರಾಷ್ಟ್ರೀಯ ಸಫಾಯಿ ಕರ್ಮಚಾರಿ ಹಣಕಾಸು ಮತ್ತು ಅಭಿವೃದ್ಧಿ ನಿಗಮ, ಪೌರಾಡಳಿತ ನಿರ್ದೇಶನಾಲಯ, ಜಿಲ್ಲಾಡಳಿತ ಹಾಗೂ ಹರಿಹರ ನಗರಸಭೆ ಇವರ ಸಹಯೋಗದೊಂದಿಗೆ `ನಮಸ್ತೆ’ ಯೋಜನೆಯಡಿ ಹಮ್ಮಿಕೊಳ್ಳಲಾಗಿದ್ದ ಒಳಚರಂಡಿ ಮತ್ತು ಸೆಫ್ಟಿಕ್ ಟ್ಯಾಂಕ್‌ಗಳನ್ನು ಸ್ವಚ್ಛಗೊಳಿಸುವ ಕುರಿತ ಕಾರ್ಯಾಗಾರವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಕಾರ್ಮಿಕರಿಗೆ ನಗರ ಸ್ಥಳಿಯ ಸಂಸ್ಥೆಗಳು ಉತ್ತಮವಾದ ರಕ್ಷಾ ಕವಚ, ಸಮವಸ್ತ್ರ, ಉದ್ದನೆಯ ಶೂ, ಹ್ಯಾಂಡ್ ಗ್ಲೌಸ್, ಬೆಳಗಿನ ಉಪಹಾರ ಸೌಲಭ್ಯಗಳನ್ನು ಕಲ್ಪಿಸಬೇಕೆಂದು ಸೂಚನೆ ನೀಡಿದರು.
ಕೊಳಚೆ ಪ್ರದೇಶ, ಮ್ಯಾನ್‍ಹೋಲ್‍ಗಳನ್ನು ಸ್ವಚ್ಛಗೊಳಿಸಲು ಮಾನವ ಸಂಪನ್ಮೂಲ ಬಳಸದೇ ಕಡ್ಡಾಯವಾಗಿ ಯಂತ್ರಗಳನ್ನು ಬಳಸಬೇಕು. ಮ್ಯಾನ್ ಹೋಲ್‍ಗಳ ಸ್ವಚ್ಛತೆಗೆ ಜನರನ್ನು ಬಳಸಿದ್ದು ಕಂಡುಬಂದರೆ ತಕ್ಷಣವೇ ಪೆೊಲೀಸ್ ಇಲಾಖೆಯಲ್ಲಿ ದೂರು ದಾಖಲಿಸಿ ಕಾನೂನಾತ್ಮಕ ಕ್ರಮಕೈಗೊಳ್ಳಿ ಎಂದು ಸೂಚನೆ ನೀಡಿದರು.
ಯೋಜನಾ ನಿರ್ದೇಶಕ ಮಾಲತೇಶ್ ಮಾತನಾಡಿ, ನಗರ ಸ್ವಚ್ಛತೆಯಲ್ಲಿ ಪೌರ ಕಾರ್ಮಿ ಕರ ಪಾತ್ರ ಮಹತ್ವದ್ದು, 2013ರಲ್ಲಿ ಸಫಾಯಿ ಕರ್ಮಚಾರಿ ಕಾಯ್ದೆ ಜಾರಿಗೊಳಿಸಲಾಗಿದ್ದು, ಪೌರ ಕಾರ್ಮಿಕರು ಪುನರ್ವಸತಿ ಸೌಲಭ್ಯ ಪಡೆದುಕೊಳ್ಳಬೇಕು. ಕಾರ್ಮಿಕರು ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡಿ ಸ್ವಚ್ಛತಾ ಕಾರ್ಯದಲ್ಲಿ ನಿರತರಾಗ ಬೇಕೆಂದು ಸಲಹೆ ನೀಡಿದರು.
ಪೌರಾಯುಕ್ತ ಸುಬ್ರಹ್ಮಣ್ಯ ಶೆಟ್ಟಿ ಮಾತನಾಡಿ, ಕಸ ವಿಲೇವಾರಿ, ಒಳಚರಂಡಿ ಸ್ವಚ್ಛತೆ ಸೇರಿದಂತೆ ಇನ್ನಿತರೆ ಸ್ವಚ್ಛತಾ ಕಾರ್ಯದಲ್ಲಿ ನಿರತರಾಗಿರುವ ಪೌರ ಕಾರ್ಮಿಕರು, ಸಫಾಯಿ ಕರ್ಮಚಾರಿಗಳು ಅಗತ್ಯವಿರುವ ಸುರಕ್ಷತಾ ವಸ್ತುಗಳನ್ನು ಬಳಸಿಕೊಂಡು ಕಾರ್ಯನಿರ್ವಹಿಸಬೇಕು ಮತ್ತು ಸರ್ಕಾರದ ವಿವಿಧ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಡಿಎಂಎ ಕಚೇರಿಯ ಕೋ-ಆರ್ಡಿನೇಟರ್ ವಿದ್ಯಾ ಕಾಳಮ್ಮ, ಐಈಡಿ ಕಂಪನಿ ಕೋ-ಆರ್ಡಿನೇಟರ್ ಲೋಕೇಶ್, ಹಿರಿಯ ಆರೋಗ್ಯ ನಿರೀಕ್ಷಕ ಸಂತೋಷ್, ರವಿಪ್ರಕಾಶ್, ವ್ಯವಸ್ಥಾಪಕ ಶಿವಕುಮಾರ್, ಕರಿಯಪ್ಪ, ಇಂಜಿನಿಯರ್ ಪ್ರಕಾಶ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.