ದಾವಣಗೆರೆ, ಸೆ.9- ಬಂಗಾರದ ಆಭರಣಗಳನ್ನು ಬಿಡಿಸುವ ನೆಪದಲ್ಲಿ ಬ್ಯಾಂಕಿಗೆ ಸಂಬಂಧಪಟ್ಟ ಆಭರಣಗಳನ್ನು ಮೋಸದಿಂದ ತೆಗೆದುಕೊಂಡು ಹೋದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಅಜಯ್ ಕಂಚಿಕೆರೆ ಹಾಗು ಅಜಯ್ ಕುಮಾರ್ ಬಂಧಿತ ಆರೋಪಿಗಳಾಗಿದ್ದು, ಇವರಿಂದ ಸುಮಾರು 9 ಲಕ್ಷ ರೂ. ಮೌಲ್ಯದ 161 ಗ್ರಾಂ ಬಂಗಾರದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ಅಜಯ್ ಕಂಚಿಕೇರಿ ಎಂಬುವವನು ನಗರದ ಫೆಡರಲ್ ಬ್ಯಾಂಕಿನ ವ್ಯವಸ್ಥಾಪಕ ಮಲ್ಲಯ್ಯ ಹೆಬ್ಬಳ್ಳಿಮಠ ಎಂಬುವವರ ಬಳಿ ಬಂದು ನಾವು ಇಂಡಲ್ ಮನಿ ಎನ್.ಬಿ.ಎಫ್.ಸಿ. ಯಲ್ಲಿ ಬಂಗಾರದ ಅಡಮಾನ ಸಾಲ ಪಡೆದಿದ್ದು, ಅಲ್ಲಿ ಬಡ್ಡಿ ಜಾಸ್ತಿ ಇದ್ದುದರಿಂದ ಆ ಸಾಲದ ಖಾತೆಯನ್ನು ನಿಮ್ಮ ಬ್ಯಾಂಕಿಗೆ ಟೇಕ್ ಓವರ್ ಮಾಡಿಕೊಳ್ಳಿ ಎಂದು ಹೇಳಿ ನಂಬಿಸಿ ಫೆಡರಲ್ ಬ್ಯಾಂಕಿನಲ್ಲಿ ಎಸ್.ಬಿ. ಖಾತೆ ತೆರೆದು 7.20 ಲಕ್ಷ ರೂ. ಜಮೆ ಮಾಡಿಸಿಕೊಂಡಿದ್ದಾರೆ.
ಈ ಹಣವನ್ನು ಇಂಡಲ್ ಮನಿ ಎನ್.ಬಿ.ಎಫ್.ಸಿ.ಯ ಸಾಲದ ಖಾತೆಗೆ ಜಮಾ ಮಾಡಿಸಿ ನಂತರ ಅದೇ ದಿನ ಅಂದರೆ ಸೆ.6ರಂದು ಬೆಳಿಗ್ಗೆ 11.30 ಗಂಟೆಗೆ ಮ್ಯಾನೇಜರ್ ಮಲ್ಲಯ್ಯ ಹೆಬ್ಬಳ್ಳಿಮಠ ಹಾಗೂ ಅವರ ಸಿಬ್ಬಂದಿಯು ಅಜಯ್ ಕಂಚಿಕೇರಿ ಅವರೊಂದಿಗೆ ಇಂಡಲ್ ಮನಿ ಎನ್.ಬಿ.ಎಫ್.ಸಿ.ಯಲ್ಲಿ ಬಂಗಾರವನ್ನು ತಮ್ಮ ವಶಕ್ಕೆ ಪಡೆಯಲು ಹೋದಾಗ ಒಡವೆ ಕೊಡದೆ ಓಡಿ ಹೋಗಿದ್ದಾರೆ. ಈ ಕುರಿತು ಮ್ಯಾನೇಜರ್ ದೂರು ದಾಖಲಿಸಿದ್ದರು.
ಬಸವನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಗುರುಬಸವರಾಜ, ಜಿ. ನಾಗರಾಜ ಪಿಎಸ್‌ಐ ಮತ್ತು ಸಿಬ್ಬಂದಿಯವರಾದ ಫಕೃದ್ದೀನ್ ಅಲಿ., ಬಿ.ಪಿ. ಗಿರೀಶ, ಸುರೇಶ್ ಆರೋಪಿ ಪತ್ತೆಯಲ್ಲಿ ಯಶಸ್ವಿಯಾಗಿದ್ದಾರೆ.