ದಾವಣಗೆರೆ, ಸೆ.8- ತಾಲ್ಲೂಕಿನ ಕನಗೊಂಡನಹಳ್ಳಿ ಗ್ರಾಮದಲ್ಲಿನ ಗ್ರಾಮ ದೇವತೆ ಶ್ರೀ ಮರಡಿ ಕೆಂಚಮ್ಮ ದೇವಸ್ಥಾನದ ಬಳಿಯ ಬೇವಿನ ಮರದಲ್ಲಿ ಹಾಲು ಬರುತ್ತಿರುವುದನ್ನು ಕಂಡು ಗ್ರಾಮಸ್ಥರು ಚಕಿತಗೊಂಡಿದ್ದಾರೆ.
ಶುಕ್ರವಾರದಿಂದ ಒಂದೇ ಸಮನೇ ಮರದಲ್ಲಿ ಹಾಲು ಬರುತ್ತಿದ್ದುದನ್ನು ಜನತೆ ಗಮನಿಸಿ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಬೇವಿನ ಮರಕ್ಕೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಯುವಕರು ಸಾಮಾಜಿಕ ಜಾಲ ತಾಣಗಳ ಮೂಲಕ ನಡೆದ ಘಟನೆ ಬಗ್ಗೆ ಹಂಚಿಕೊಳ್ಳುತ್ತಿದ್ದಾರೆ.
ಸುಮಾರು ವರ್ಷಗಳ ಹಳೆಯ ಈ ಮರದಲ್ಲಿ ಏಕಾ ಏಕಿ ಈ ರೀತಿ ಹಾಲು ಬರುತ್ತಿರುವುದರಿಂದ ಗ್ರಾಮಕ್ಕೆ ಒಳಿತಾಗುತ್ತದೋ ಕೆಡುಕಾಗುತ್ತದೋ ಎಂಬ ಆತಂಕವೂ ಗ್ರಾಮಸ್ಥರಲ್ಲಿತ್ತು.
ವಿಜ್ಞಾನಿಗಳು ಹೇಳೋದು ಹೀಗೆ : ಎಲ್ಲ ಮರಗಳಲ್ಲಿನ ಬೇರುಗಳು ನೀರನ್ನು ಕೆಳಗಿನಿಂದ ಮೇಲಕ್ಕೆ ತೆಗೆದುಕೊಂಡು ಹೋಗಲು ಸಹಾಯ ಮಾಡುತ್ತವೆ. ಇದರಲ್ಲಿ ಇರುವ ಕೋಶಗಳು ಮರದ ಎಲ್ಲ ರಂಬೆ ಕೊಂಬೆಗಳಿಗೆ ನೀರನ್ನು ರವಾನಿಸುತ್ತವೆ. ಹೀಗೆ ನೀರು ಪೂರೈಸುವ ಕೋಶಗಳು ಅಪರೂಪಕ್ಕೆ ನಾಶವಾದಾಗ ಅಥವಾ ಕೋಶಗಳು ತನ್ನ ಕ್ರಿಯೆಯನ್ನು ಕಡಿಮೆ ಮಾಡಿದಾಗ ಮರದ ಒಳಗಿರುವ ನೀರಿನ ಅಂಶ ಹೊರಗೆ ಬರುತ್ತದೆ. ಸಹಜವಾಗಿ ಮರದಲ್ಲಿ ಬುರುಗು ಇರುವುದರಿಂದ, ಬುರುಗು ಮಿಶ್ರಿತ ನೀರು ಹಾಲಾಗಿ ಕಾಣುತ್ತದೆ ಎನ್ನುತ್ತಾರೆ ವಿಜ್ಞಾನಿಗಳು.