ನೊಂದವರ ಕಣ್ಣೀರು ಒರೆಸುವ ಮನೋಭಾವ ಹೊಂದಿದ್ದ ವಿಮಲದಾಸ್ : ಪ್ರೊ. ಸಿ.ಹೆಚ್. ಮುರಿಗೇಂದ್ರಪ್ಪ
ದಾವಣಗೆರೆ, ಸೆ. 3- ಜೀವನದಲ್ಲಿ ಶಿಸ್ತು, ಶ್ರದ್ಧೆ, ಕಾಯಕ ಪ್ರಜ್ಞೆಯನ್ನು ಮೂಡಿಸುವ ಜೊತೆಗೆ ಆದರ್ಶಪ್ರಾಯರಾಗಿ ಬದುಕಿದವರು ಪ್ರೊ. ವಿಮಲದಾಸ್. ನನ್ನನ್ನೂ ಸೇರಿದಂತೆ ಅನೇಕರಿಗೆ ಬೆಂಬಲವಾಗಿ ನಿಂತು ಕೆಲಸ ಕಲಿಸಿಕೊಟ್ಟ ದಿಟ್ಟ ಮಹಿಳೆ ಎಂದು ದಾವಣ ಗೆರೆ ವಿವಿ ಸಿಂಡಿಕೇಟ್ ಮಾಜಿ ಸದಸ್ಯ ಪ್ರೊ.ಸಿ.ಹೆಚ್. ಮುರಿಗೇಂದ್ರಪ್ಪ ಪ್ರಶಂಸಿಸಿದರು.
ನಗರದ ಜಾಗೃತ ಮಹಿಳಾ ಸಂಸ್ಥೆ ಸಭಾಂಗಣದಲ್ಲಿ ಪ್ರೊ. ವಿಮಲದಾಸ್ ಜನ್ಮ ದಿನದ ಅಂಗವಾಗಿ ನಿನ್ನೆ ಹಮ್ಮಿಕೊಂಡಿದ್ದ `ಪ್ರೊ. ವಿಮಲದಾಸ್ ಸೇವಾ ಪುರಸ್ಕಾರ’ ಪ್ರದಾನ ಸಮಾ ರಂಭ ಉದ್ಘಾಟಿಸಿ ಅವರು ಮಾತನಾಡಿದರು.
ವಿಮಲ ಅವರು ಎವಿಕೆ ಕಾಲೇಜಿನಲ್ಲಿ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತಿಯಾದವರು. ಕಾಲೇಜಿನ ಒಳಗೆ ಬರುತ್ತಿದ್ದಾರೆಂಬ ಸುಳಿವು ಸಿಕ್ಕರೆ ಸಾಕು ಸಿಬ್ಬಂದಿ ಭಯ ಪಡುತ್ತಿದ್ದರು. ತಪ್ಪು ಯಾರದೇ ಇರಲಿ ಅವರನ್ನು ಖಂಡಿಸುವ ನೇರ ನುಡಿಯ ಗುಣ ಅವರಲ್ಲಿತ್ತು ಎಂದರು.
ಇಡೀ ಬಾಪೂಜಿ ವಿದ್ಯಾಸಂಸ್ಥೆಯಲ್ಲಿ ನಂ.1 ಪ್ರಾಂಶುಪಾಲರಾಗಿದ್ದರು. ದಕ್ಷ, ಪ್ರಾಮಾಣಿಕ, ಪಾರದರ್ಶಕ ಆಡಳಿತ ನಡೆಸು ತ್ತಿದ್ದ ವಿಮಲದಾಸ್ ಅವರ ವ್ಯಕ್ತಿತ್ವ ಮಾದರಿ ಯಾಗುವಂತಿತ್ತು. ಮಹಿಳೆಯ ಬಗ್ಗೆ ಅವರಿಗಿದ್ದ ಕಾಳಜಿ, ನೊಂದವರ ಕಣ್ಣೀರು ಒರೆಸುವ ಮನೋಭಾವ ಹೊಂದಿದ್ದರು. ಅವರ ಸೇವಾ ಕಾರ್ಯಗಳು ಇತರರಿಗೆ ಪ್ರೇರಣೆ ನೀಡುತ್ತಿ ದ್ದವು ಎಂದು ಹೇಳಿದರು. ವಿಮಲದಾಸ್ ಅವರ ಹೆಸರಿನಲ್ಲಿ ಪ್ರಶಸ್ತಿ ಪ್ರದಾನ ಮಾಡುತ್ತಿರುವ ಜಾಗೃತ ಮಹಿಳಾ ಸಂಸ್ಥೆ ಅವರ ಕಾರ್ಯ ಶ್ಲ್ಯಾಘನೀಯ ಎಂದು ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ ನಿಕಟ ಪೂರ್ವ ಅಧ್ಯಕ್ಷ ಡಾ.ಹೆಚ್.ಎಸ್. ಮಂಜುನಾಥ್ ಕುರ್ಕಿ ಮಾತನಾಡಿ, ನನ್ನ ವೃತ್ತಿ ಬದುಕಿಗೆ ಅಡಿಪಾಯ ಹಾಕಿದವರು ವಿಮಲದಾಸ್. ಅವರು ಕಾಲೇಜಿನ ಒಳಾಂಗಣಕ್ಕೆ ಬರುತ್ತಿದ್ದಂ ತೆಯೇ ಕಾಲೇಜಿನ ಕಿಟಕಿ, ಬಾಗಿಲುಗಳು ಸಹ ಅಲರ್ಟ್ ಆಗಿರುತ್ತಿದ್ದವು. ಅವರ ಮೇಲೆ ಅಷ್ಟೊಂದು ಭಯ-ಭಕ್ತಿ ಇತ್ತು ಎಂದರು.
ಕಾಲೇಜು ಪ್ರವೇಶಿಸಿದ ತಕ್ಷಣ ಅವರು ತಮ್ಮ ಪ್ರಾಚಾರ್ಯರ ಕೊಠಡಿಗೆ ಹೋಗುತ್ತಿರಲಿಲ್ಲ. ಬದಲಾಗಿ ಅವರು ಅಧ್ಯಾಪಕೇತರ ಸಿಬ್ಬಂದಿ ಕಾರ್ಯಗಳನ್ನು, ತರಗತಿಗಳಲ್ಲಿನ ಪಾಠಗಳನ್ನು ಪರಿಶೀಲಿಸಿದ ನಂತರವೇ ತಮ್ಮ ಕೊಠಡಿಗೆ ತೆರಳುತ್ತಿದ್ದರು.
ಏಜು ಏಶಿಯಾ ವಿದ್ಯಾಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ನೀಲಮ್ಮ ಮಾಗಾನಹಳ್ಳಿ ಅವರಿಗೆ ಜಾಗೃತ ಮಹಿಳಾ ಸಂಸ್ಥೆಯ ವತಿಯಿಂದ `ಪ್ರೊ. ವಿಮಲದಾಸ್ ಸೇವಾ ಪುರಸ್ಕಾರ’ ನೀಡಿ ಗೌರವಿಸಲಾಯಿತು.
ಜಾಗೃತ ಮಹಿಳಾ ಸಂಸ್ಥೆಯ ಜಂಟಿ ಕಾರ್ಯದರ್ಶಿ ಶಾಂತಮ್ಮ ದಿಳ್ಳೆಪ್ಪ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಆಶಾ ಕಲ್ಲನಗೌಡ, ಪದಾಧಿಕಾರಿಗಳಾದ ಸತ್ಯಭಾಮ ಮಂಜು ನಾಥ್, ಅಮೀರಾಬಾನು, ಟಿ. ಹೇಮಲತಾ, ಕೆ.ಬಿ. ಸುಮ ಮತ್ತಿತರರು ಉಪಸ್ಥಿತರಿದ್ದರು.