ಹರಿಹರ, ಸೆ.3 – ಹರಿಹರ ತಾಲ್ಲೂಕಿನ ಹಿಂಡಸಘಟ್ಟ ಗ್ರಾಮದ ಕ್ಯಾಂಪಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕ ಅರುಣ್ ಕುಮಾರ್ ಅವರಿಗೆ ರಾಜ್ಯದ ಅತ್ಯುತ್ತಮ ಶಿಕ್ಷಕರ ಪ್ರಶಸ್ತಿ ಲಭಿಸಿದೆ.
ಕೇವಲ ಶಿಕ್ಷರಾಗಿ ಮಕ್ಕಳಿಗೆ ಪಾಠ ಮಾಡುವುದಷ್ಟೇ ಅಲ್ಲದೇ, ಗುಣಮಟ್ಟದ ಶಿಕ್ಷಣ ಸಿಗುವ ನಿಟ್ಟಿನಲ್ಲಿ ಸುಮಾರು 10 ರಿಂದ 12 ಹಳ್ಳಿಗಳಲ್ಲಿ ಇರುವ ಪ್ರಮುಖ ವ್ಯಕ್ತಿಗಳಿಂದ 15 ಲಕ್ಷ ರೂ. ಹಣವನ್ನು ಸಂಗ್ರಹಿಸಿ, 55 ಇಂಚಿನ ಟಿವಿ, 40 ಸಾವಿರ ಮೊತ್ತದ ಲ್ಯಾಪ್ಟಾಪ್, ಪೇಂಟಿಂಗ್, ಗೋಡೆ ಬರಹ, ಅರ್ಚ್, ನರೇಗಾ ಯೋಜನೆಯಿಂದಾಗಿ 6.5 ಲಕ್ಷ ರೂ. ವೆಚ್ಚದಲ್ಲಿ 700 ಅಡಿ ಶಾಲೆ ಕಾಂಪೌಂಡ್ ನಿರ್ಮಾಣ, ಜೊತೆಗೆ 1 ರಿಂದ 5 ತರಗತಿಯ ಮಕ್ಕಳಿಗೆ ಪುಸ್ತಕ ಬರೆದಿದ್ದು, ನಲಿ-ಕಲಿ ಪಠ್ಯಪುಸ್ತಕದ ಮೂಲಕ ಮಕ್ಕಳಿಗೆ ಶಿಕ್ಷಣದ ಮಹತ್ವವನ್ನು ತಿಳಿಸುವಲ್ಲಿ ಅರುಣ್ ಕುಮಾರ್ ಸದಾ ಮುಂದಾಗಿರುತ್ತಾರೆ.
ಅರುಣ್ ಕುಮಾರ್ ಅವರಿಗೆ ಕಳೆದ ಸಾಲಿನ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿತ್ತು. ಬೆಂಗಳೂರಿನ ಜ್ಞಾನ – ವಿಜ್ಞಾನ ಸಮಿತಿಯ `ಅನಿತ ಕವಲು’ ಪ್ರಶಸ್ತಿ ಪಡೆದಿದ್ದಾರೆ. `ಶಿಕ್ಷಕ ರತ್ನ’ ಪ್ರಶಸ್ತಿಯನ್ನು ಅವರು ಪಡೆದಿದ್ದಾರೆ. ಅವರು ಕರ್ತವ್ಯ ನಿರ್ವಹಿಸುತ್ತಿರುವ ಶಾಲೆಯಲ್ಲಿ 25 ವಿದ್ಯಾರ್ಥಿಗಳು ಮಾತ್ರ ಶಿಕ್ಷಣ ಪಡೆಯುತ್ತಿದ್ದು, ಅದರಲ್ಲಿ ಶೇ.70 ರಷ್ಟು ಲಂಬಾಣಿ ಜನಾಂಗದವರು ಮತ್ತು ಶೇ. 30 ರಷ್ಟು ಭೋವಿ ಜನಾಂಗದ ವಿದ್ಯಾರ್ಥಿಗಳು ಓದುತ್ತಿದ್ದಾರೆ.
ನನಗೆ ರಾಜ್ಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿರುವುದು ಜವಾಬ್ದಾರಿ ಹೆಚ್ಚಾಗಿದೆ. ಮಕ್ಕಳಿಗೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಶಿಕ್ಷಣದ ಸವಲತ್ತುಗಳನ್ನು ದೊರಕಿಸಿವ ನಿಟ್ಟಿನಲ್ಲಿ ಹೆಚ್ಚು ತೊಡಗಿಸಿಕೊಂಡು, ಶಾಲೆಯನ್ನು ರಾಜ್ಯಕ್ಕೆ ಮಾದರಿ ಶಾಲೆಯನ್ನಾಗಿ ಮಾಡುವ ನಿಟ್ಟಿನಲ್ಲಿ ಸೇವೆ ಮಾಡುವುದಾಗಿ ಅರುಣ್ ಕುಮಾರ್ ತಿಳಿಸಿದ್ದಾರೆ.