ಜಿ.ಎಂ ಸೌಹಾರ್ದ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಜಿ.ಎಂ ಸಿದ್ದೇಶ್ವರ ಅಭಿಮತ
ದಾವಣಗೆರೆ, ಸೆ. 2- ಕೇವಲ ಠೇವಣಿ ಹೂಡಿಕೆ ಅಲ್ಲದೆ ಉತ್ತಮ ಸಾಲಗಾರರನ್ನು ಗುರುತಿಸಿ ಅವರಿಗೆ ಸಾಲ ಹಂಚಿಕೆಯಾಗುವ ಪ್ರಕ್ರಿಯೆಯಲ್ಲಿ ಭಾಗವಹಿಸುವುದು ಉತ್ತಮ ಎಂದು ಜಿ.ಎಂ. ಸೌಹಾರ್ದ ಸಹಕಾರಿಯ ಸಂಸ್ಥಾಪಕ ಸದಸ್ಯ ಹಾಗೂ ಮಾಜಿ ಸಂಸದ ಡಾ. ಜಿ.ಎಂ. ಸಿದ್ದೇಶ್ವರ ತಿಳಿಸಿದರು.
ನಗರದ ಜಿ.ಎಂ ಸೌಹಾರ್ದ ಪತ್ತಿನ ಸಹಕಾರಿ ಸಂಘದ 2023-24 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಸಹಕಾರಿಯ ಅನುತ್ಪಾದಕ ಸಾಲವನ್ನು ಕಡಿಮೆ ಮಾಡಲು(ಎನ್‍ಪಿಎ) ನೂರಕ್ಕೆ ನೂರರಷ್ಟು ಸಾಲ ಬಾಕಿ ವಸೂಲಾತಿ ನಿರ್ವಹಿಸಲು ಹಾಗೂ ಹೆಚ್ಚಿನ ಡಿವಿಡೆಂಡ್ ವಿತರಿಸಲು ಕ್ರಮ ಕೈಗೊಳ್ಳಬೇಕೆಂದು ಸಹಕಾರಿಯ ನಿರ್ದೇಶಕರಿಗೆ ಮತ್ತು ಸಿಬ್ಬಂದಿಯವರಿಗೆ ಕಿವಿಮಾತು ಹೇಳಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿ.ಎಂ ಪ್ರಸನ್ನ ಕುಮಾರ್ ಮಾತನಾಡಿ, ಸಹಕಾರಿಯು ಆರಂಭದ ವರ್ಷದಲ್ಲಿ ಹೊಂದಿದ್ದ ಠೇವಣಿ ರೂ. 3.82 ಕೋಟಿ ಮೊತ್ತದಷ್ಟು ಲಾಭವನ್ನು ಪ್ರಸಕ್ತ ಸಾಲಿನಲ್ಲಿ ರೂ.3.83 ಕೋಟಿ ಗಳಿಸುವ ಉನ್ನತ ಮಟ್ಟಕ್ಕೆ ನಾವು ಬೆಳೆದಿದ್ದೇವೆ ಎಂದು ಹರ್ಷ ವ್ಯಕ್ತಪಡಿಸಿದರು. ಇದಲ್ಲದೇ, ಮುಂಬರುವ ಐದು ವರ್ಷಗಳಲ್ಲಿ 500 ಕೋಟಿ ರೂ. ಠೇವಣಿ ಸಂಗ್ರಹಿಸುವ ಗುರಿ ಹೊಂದಿದ್ದು, ಇದರಲ್ಲಿ ಸದಸ್ಯರ ಪಾತ್ರ ದೊಡ್ಡದಿದೆ ಎಂದರು.
ಸಹಕಾರಿಯ ಸಂಸ್ಥಾಪಕ ಸದಸ್ಯರಾದ ಶ್ರೀಮತಿ ಗಾಯತ್ರಿ ಸಿದ್ದೇಶ್ವರ ಅವರು ಮಾತನಾಡಿ, ಜಿ.ಮಲ್ಲಿಕಾರ್ಜುನಪ್ಪನವರು ಸಹೃದಯಿಗಳು ಹಾಗೂ ಸಾತ್ವಿಕ ಸಂಪನ್ನರಾಗಿದ್ದ ಕಾರಣ ಅವರ ಇಚ್ಛೆಯಂತೆ ಆರಂಭಿಸಿದ ಸಹಕಾರಿಯು ಪ್ರಬುದ್ಧಮಾನಕ್ಕೆ ಬಂದೇ ಬರುತ್ತದೆ ಎಂಬ ಆಶಾಭಾವನೆ ವ್ಯಕ್ತಪಡಿಸಿದರು.
ಸಹಕಾರಿಯ ಉಪಾಧ್ಯಕ್ಷ ಎಂ.ಆರ್. ಪ್ರಭುದೇವ್, ಯುವ ನಿರ್ದೇಶಕ ಜಿ.ಎಸ್. ಅನಿತ್ ಕುಮಾರ್ ಅವರುಗಳು ಮಾತನಾಡಿದರು.
ಹಿರಿಯ ಮಹಿಳಾ ನಿರ್ದೇಶಕರಾದ ಶ್ರೀಮತಿ ಗಾಯತ್ರಿ ಸುಭಾಶ್ಚಂದ್ರ, ಶ್ರೀಮತಿ ಪ್ರಮೀಳಾ ನಟರಾಜ್, ಹಿರಿಯ ನಿರ್ದೇಶಕರಾದ ಜಿ.ಆರ್ ನೀಲಕಂಠಪ್ಪ, ಡಾ. ಸಿ.ಎಸ್. ಗಿರೀಶ್, ಡಾ. ಬಿ.ಎಸ್. ಸುನಿಲ್ ಕುಮಾರ್, ಕಾರ್ಯನಿರ್ವಾಹಕ ನಿರ್ದೇಶಕ ಎಸ್.ಎನ್. ಮಲ್ಲಪ್ಪ, ಪ್ರಧಾನ ವ್ಯವಸ್ಥಾಪಕ ಬಸವರಾಜ್ ಜಿ. ಮಾಕಾಳ, ಸಹಕಾರಿ ವಿಷಯ ಸಲಹೆಗಾರ ಎಸ್.ಸಿ ಮಹಾರುದ್ರಪ್ಪ, ಉಪ-ಪ್ರಧಾನ ವ್ಯವಸ್ಥಾಪಕ ಐ.ಬಿ. ಕಡದಕಟ್ಟಿ ಸಭೆಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ನಿರ್ದೇಶಕರಾದ ಎ.ಎಸ್. ಗುರುಮೂರ್ತಿ, ಸಿದ್ಧನಗೌಡ ಸಿ. ಪಾಟೀಲ್, ನಟರಾಜ್ ಬಿ.ಪಿ.ಜೆ., ವೃತ್ತಿಪರ ನಿರ್ದೇಶಕ ಬಿ.ಎಲ್. ರಾಜೀವ್, ಸಹಕಾರಿಯ ಸನ್ನದು ಲೆಕ್ಕ ಪರಿಶೋಧಕ ಈ. ಚಂದ್ರಣ್ಣ, ಆಂತರಿಕ ಲೆಕ್ಕ ಪರಿಶೋಧಕ ಎಂ.ಹೆಚ್. ಹನುಮಂತರೆಡ್ಡಿ ಮತ್ತು ಇತರರು ಸಭೆಯಲ್ಲಿ ಉಪಸ್ಥಿತರಿದ್ದರು.
ಸಹಕಾರಿಯ ಮಹಿಳಾ ಸಿಬ್ಬಂದಿ ಪ್ರಾರ್ಥಿಸಿದರು. ಸಹಕಾರಿಯ ನಿರ್ದೇಶಕ ಎ.ಸಿ. ಬಸವರಾಜ್ ಸ್ವಾಗತಿಸಿದರು. ವೃತ್ತಿಪರ ನಿರ್ದೇಶಕ ಕೆ.ಎಂ.ಗುರುಮೂರ್ತಿ ವಂದಿಸಿದರು.