ಕೊಕ್ಕನೂರಿನಲ್ಲಿ ಕರಡಿ ಸೆರೆ ಹಿಡಿದ ಗ್ರಾಮಸ್ಥರು

ಕೊಕ್ಕನೂರಿನಲ್ಲಿ ಕರಡಿ ಸೆರೆ ಹಿಡಿದ ಗ್ರಾಮಸ್ಥರು

ಮಲೇಬೆನ್ನೂರು, ಸೆ.2- ಕಳೆದು ಒಂದೂವರೆ ತಿಂಗಳಿನಿಂದ ಹಿಂಡಸಘಟ್ಟಿ ಮತ್ತು ಕೊಕ್ಕನೂರು ಗ್ರಾಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಕರಡಿಯನ್ನು ಭಾನುವಾರ ತಡರಾತ್ರಿ ಕೊಕ್ಕನೂರು ಗ್ರಾಮಸ್ಥರ ಸಹಕಾರದಿಂದ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿದೆ.

ಕರಡಿ ಸೆರೆ ಹಿಡಿಯುವ ಕಾರ್ಯಾಚರಣೆ ವೇಳೆ ಗ್ರಾಮದ ಬಲ್ಲಪ್ಪರ ಮಂಜು (26) ಎಂಬಾತನ ಬೆರಳನ್ನು ಕರಡಿ ಕಚ್ಚಿ ಗಾಯಗೊಳಿಸಿದೆ. ತಕ್ಷಣ ಆತನನ್ನು ಆಸ್ಪತ್ರೆಗೆ  ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿದೆ.

ಭಾನುವಾರ ಸಂಜೆ ಕೊಕ್ಕನೂರಿನ ಹಿಂಡಸಘಟ್ಟಿ ರಸ್ತೆಯಲ್ಲಿರುವ ಅಭಿ ಪಾಟೀಲ್ ಅರವ ಮನೆ ಬಳಿ ಕಾಣಿಸಿಕೊಂಡ ಕರಡಿ ನಂತರ ಗ್ರಾಮದ ದೊಬ್ಬೇರ ಬೀರಪ್ಪ ಅವರ ಮನೆ ಬಳಿ ಇರುವ ಮರವನ್ನೇರಿ ಕುಡಿತುಕೊಂಡಿತು. ಅರಣ್ಯ ಇಲಾಖೆಯವರು ಅಲ್ಲಿಗೆ ಬೋನ್ ತಂದಿಟ್ಟು, ಅದರ ಸುತ್ತಲು ಹಂದಿಗಳನ್ನು ನಿಲ್ಲಿಸಿ ಕಾದರೂ ಕರಡಿ ಬರಲಿಲ್ಲ. ಸೋಮವಾರ ಬೆಳಗಿನ ಜಾವ 3 ಗಂಟೆ ವೇಳೆಗೆ ಗ್ರಾಮಸ್ಥರ ಸಹಕಾರದೊಂದಿಗೆ ಬಲೆ ಅರಣ್ಯ ಇಲಾಖೆಯವರು ಹಾಕಿ ಕರಡಿ ಸೆರೆ ಹಿಡಿದಿದ್ದಾರೆ.

ನಂತರ ಆ ಕರಡಿಯನ್ನು ಬೋನಿನಲ್ಲಿ ಹಾಕಿಕೊಂಡು ಆನಗೋಡು ಬಳಿ ಇರುವ ಪ್ರಾಣಿ ಸಂಗ್ರಹಾಲಯಕ್ಕೆ ಬಿಟ್ಟು ಬಂದಿದ್ದೇವೆ ಎಂದು ಗ್ರಾಮದ ಅಭಿ ಪಾಟೀಲ್ `ಜನತಾವಾಣಿ’ಗೆ ತಿಳಿಸಿದ್ದಾರೆ.

ಎಪಿಎಫ್ ಶಶಿಧರ್ ಅವರ ನೇತೃತ್ವದಲ್ಲಿ ಅರಣ್ಯ ಇಲಾಖೆಯ ರೇವಂತ್ ಸದರನ್ ಹಾಗೂ ಸಿಬ್ಬಂದಿ ವರ್ಗದವರು ಮತ್ತು ಕೊಕ್ಕನೂರು ಗ್ರಾಮದ ದೊಬ್ಬೇರ್ ಬೀರಪ್ಪ, ಬಲ್ಲಪ್ಪರ ವೆಂಕಟೇಶ್, ಗಡಿಸಿ ರವಿ, ಹೊಸೂರು ಆಂಜನೇಯ, ಹರೀಶ್, ಹುಳ್ಳೇರ್ ಮಲ್ಲಪ್ಪ, ಚನ್ನಗಿರಿ ಮಲ್ಲೇಶಪ್ಪ ಸೇರಿದಂತೆ ಇನ್ನೂ ಅನೇಕರು ಕರಡಿ ಹಿಡಿಯುವ ಕಾರ್ಯಾಚರಣೆಯಲ್ಲಿ ಇದ್ದರು.

error: Content is protected !!