ಕಲಾವಿದರು ನಾಡಿನ ಸಾಂಸ್ಕೃತಿಕ ಸಂಪತ್ತು

ಕಲಾವಿದರು ನಾಡಿನ ಸಾಂಸ್ಕೃತಿಕ ಸಂಪತ್ತು

ಬಿಳಿಚೋಡಿನ ಕಾರ್ಯಕ್ರಮದಲ್ಲಿ ರಂಗಕರ್ಮಿ ಎನ್.ಎಸ್. ರಾಜು

ದಾವಣಗೆರೆ, ಸೆ. 1- ಕಲೆ, ಸಾಹಿತ್ಯ, ಸಂಸ್ಕೃತಿಗಳು ನಮ್ಮ ಬದುಕನ್ನು ಹಸನು ಗೊಳಿಸುವುದರ ಮೂಲಕ ಆದರ್ಶಪ್ರಾಯರನ್ನಾಗಿ ಮಾಡುತ್ತವೆ. ಕಲಾವಿದರು ಈ ನಾಡಿನ ಸಾಂಸ್ಕೃತಿಕ ಸಂಪತ್ತು, ಆದರೆ ಅವರ ಜೀವನ ನೋವಿನಿಂದ ಕೂಡಿರುತ್ತದೆ. 

ಅನೇಕ ಸಮಸ್ಯೆಗಳನ್ನು ಅನುಭವಿಸುತ್ತಾ ಕಲಾ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ ಎಂದು ರಂಗಕರ್ಮಿ ಎನ್.ಎಸ್. ರಾಜು ಅವರು ಕಳವಳ ವ್ಯಕ್ತಪಡಿಸಿದರು.

ಶ್ರೀ ಬಸವೇಶ್ವರ ಭಜನಾ ಸಂಘ ಬಿಳಿಚೋಡು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದಲ್ಲಿ ಬಿಳಿಚೋಡಿನ ಶ್ರೀ ಮಾರಿಕಾಂಬ ದೇವಸ್ಥಾನದ ಆವರಣದಲ್ಲಿ ಮೊನ್ನೆ ನಡೆದ ಬಸವ ಕೇಂದ್ರದ ಮಾಸಿಕ ಕಾರ್ಯಕ್ರಮದ ಅಂಗವಾಗಿ `ಶ್ರಾವಣ ಸಂಜೆ ಜಾನಪದ ಸಂಗೀತ’ ಕಾರ್ಯಕ್ರಮದ ಉದ್ಘಾಟನೆಯನ್ನು, ಹಾರ್ಮೋನಿಯಂ ನುಡಿಸುವುದರ ಮೂಲಕ ನೆರವೇರಿಸಿ ಅವರು ಮಾತನಾಡುತ್ತಿದ್ದರು.

ಕಲಾವಿದರು ವೇದಿಕೆ ಮೇಲೆ ರಾಜ, ಮಂತ್ರಿ, ಸೇವಕ, ದೇವಾನುದೇವತೆಗಳ ಪಾತ್ರ ಮಾಡುತ್ತಾ ಜನರನ್ನು ರಂಜಿಸುತ್ತಾರೆ, ಆದರೆ ಅವರ ವೈಯಕ್ತಿಕ ಬದುಕು ಆರ್ಥಿಕ ಸಂಕಷ್ಟಕ್ಕೊಳಗಾಗಿರುತ್ತದೆ, ಕಲಾವಿದರಿಗೆ ರಾಜ್ಯ ಸರ್ಕಾರ ನೀಡುವ ಎರಡು ಸಾವಿರ ರೂ. ಮಾಾಸಶನ ಅತ್ಯಲ್ಪವಾಗಿದ್ದು, ಅದನ್ನು ಕನಿಷ್ಠ 5000 ಕ್ಕೆ ಏರಿಸಲು ನಿರ್ಧಾರ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದರು.

ಜಗಳೂರಿನ ಶರಣ ಸಾಹಿತ್ಯ ಪರಿಷತ್ ಕಾರ್ಯದರ್ಶಿ ಬಿ.ಎಂ. ವಿಶ್ವೇಶ್ವರಯ್ಯ ಅವರು ಮಾತನಾಡಿ, ಪ್ರತಿ ತಿಂಗಳು ಈ ಗ್ರಾಮದಲ್ಲಿ ಬಸವ ಚಿಂತನೆ ಮಾಡಿಕೊಂಡು ಬರುತ್ತಿರುವುದು ಸಂತೋಷದ ಸಂಗತಿ. ಇದೇ ರೀತಿ ಗ್ರಾಮೀಣ ಭಾಗದಲ್ಲೂ ನಡೆಸಿದರೆ ಜನರ ಬದುಕಿನ ಸುಧಾರಣೆಗೆ ಸಹಕಾರಿಯಾಗಲಿದೆ ಎಂದು ತಿಳಿಸುತ್ತಾ ಬಸವಾದಿ ಶರಣರ ವಿಚಾರಧಾರೆಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು.

ಸಮಾರಂಭದ ಅಧ್ಯಕ್ಷತೆಯನ್ನು ಕುರುಬ ಸಮಾಜದ ಗುರುಗಳಾದ  ಸಿದ್ದಯ್ಯ ಒಡೆಯರ್ ವಹಿಸಿದ್ದರು. ವೇದಿಕೆಯಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ನೀಲನಾಯ್ಕ, ಸಮಾಜ ಸೇವಕರಾದ ಸುಧೀರ್ ಕುಮಾರ್, ಮಾರ್ತಾಂಡಪ್ಪ, ಶಿವಾಜಿರಾವ್, ಕರೇಗೌಡ್ರು ಮಂಜುನಾಥ್ ಇದ್ದರು. 

ಪಿ. ನಾಗೇಂದ್ರಪ್ಪ ಕಾರ್ಯಕ್ರಮ ನಿರೂಪಿಸಿದರು. ಪಿ.ಜಿ. ಪರಮೇಶ್ವರಪ್ಪ ಸ್ವಾಗತಿಸಿದರು. ಶ್ರೀ ಬಸವೇಶ್ವರ ಭಜನಾ ಸಂಘದ ಕಲಾವಿದರು `ಜಾನಪದ ಸಂಗೀತ’  ನಡೆಸಿಕೊಟ್ಟರು.

error: Content is protected !!