ದಾವಣಗೆರೆ, ಸೆ.1- ಚಿಗಟೇರಿ ಜಿಲ್ಲಾ ಆಸ್ಪತ್ರೆಗೆ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಗುರುವಾರ ರಾತ್ರಿ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಆಸ್ಪತ್ರೆಯನ್ನು ಸ್ವಚ್ಚವಾಗಿಟ್ಟುಕೊಳ್ಳಬೇಕು ಮತ್ತು ಚಿಕಿತ್ಸೆಗಾಗಿ ಬರುವವರಿಗೆ ಸಕಾಲಕ್ಕೆ ಚಿಕಿತ್ಸೆ ಲಭ್ಯವಾಗ ಬೇಕು. ತುರ್ತು ನಿಗಾ ಘಟಕದಲ್ಲಿ ಸಿಬ್ಬಂದಿಗಳು ಹೆಚ್ಚಿನ ನಿಗಾವಹಿಸಬೇಕು. ರೋಗಿಗಳಿಗೆ ಯಾವುದೇ ಔಷಧದ ಕೊರತೆಯಾಗದಂತೆ ನೋಡಿಕೊಂಡು ಔಷಧ ಅಗತ್ಯವಿದ್ದಲ್ಲಿ ನಮ್ಮ ಗಮನಕ್ಕೆ ತರಬೇಕೆಂದು ಸೂಚನೆ ನೀಡಿ, ರಾತ್ರಿ ವೇಳೆಯಲ್ಲಿ ಭದ್ರತಾ ದೃಷ್ಟಿಯಿಂದ ಸಿಸಿ ಕ್ಯಾಮೆರಾ ಅಳವಡಿಕೆ ಹೆಚ್ಚಿಸಿ ಹೆಚ್ಚುವರಿ ಭದ್ರತಾ ಸಿಬ್ಬಂದಿಗಳನ್ನು ನೇಮಕ ಮಾಡಲು ಕ್ರಮ ಕೈಗೊಳ್ಳಬೇಕೆಂದು ತಿಳಿಸಿ, ಮುಂದಿನ ದಿನಗಳಲ್ಲಿ ಆಸ್ಪತ್ರೆಗೆ ಅನಿರೀಕ್ಷಿತ ಭೇಟಿ ನೀಡಲಿದ್ದು, ಸಿಬ್ಬಂದಿಗಳು ಬಹಳ ಎಚ್ಚರಿಕೆಯಿಂದಿರಬೇಕೆಂದು ಸೂಚನೆ ನೀಡಿದರು.
ಈ ವೇಳೆ ಜಿಲ್ಲಾ ಸರ್ಜನ್ ಡಾ.ನಾಗೇಂದ್ರಪ್ಪ ಹಾಗೂ ಸಿಬ್ಬಂದಿಯವರು ಉಪಸ್ಥಿತರಿದ್ದರು.