`ಐತಿಹಾಸಿಕ ಪರಂಪರೆ ಉಳಿಸಿ’ ಎಂಬ ಕಾರ್ಯಕ್ರಮದಲ್ಲಿ ವೀಣಾ ಮಹಾಂತೇಶ
ಹರಪನಹಳ್ಳಿ, ಸೆ.1- ಇತಿಹಾಸವೆಂದರೆ ಬರಿ ರಾಜರ ಕಥೆಯಲ್ಲ, ಅದು ಬದುಕಿನ ಚರಿತ್ರೆಯಾಗಿದೆ. ಈ ನಿಟ್ಟಿನಲ್ಲಿ ಪ್ರತಿ ಮನೆಯು ತನ್ನದೇ ಆದ ಇತಿಹಾಸ ಹೊಂದಿರುತ್ತದೆ ಎಂದು ಎಂ.ಪಿ. ಪ್ರಕಾಶ್ ಸಮಾಜಮುಖಿ ಟ್ರಸ್ಟಿನ ಅಧ್ಯಕ್ಷೆ ಎಂ.ಪಿ ವೀಣಾ ಮಹಾಂತೇಶ ಹೇಳಿದರು.
ಎಂ.ಪಿ ಪ್ರಕಾಶ್ ಸಮಾಜ ಮುಖಿ ಟ್ರಸ್ಟ್ ಹಾಗೂ ಇತಿಹಾಸ ಪರಂಪರೆ ಅಧ್ಯಯನ ಟ್ರಸ್ಟಿನ ಸಹಯೋಗದಲ್ಲಿ ಪಟ್ಟಣದ ಅಂಬ್ಲಿ ದೊಡ್ಡ ಭರಮಪ್ಪ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಭಾನುವಾರ ಆಯೋಜಿಸಿದ್ದ `ಐತಿಹಾಸಿಕ ಪರಂಪರೆ ಉಳಿಸಿ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಾಡಿನ ಅಮೂಲ್ಯ ಸಂಪತ್ತುಗಳಾದ ಶಾಸನಗಳು, ಕೋಟೆಗಳು, ದೇಗುಲಗಳು, ಸ್ಮಾರಕಗಳು ಮತ್ತು ನಾಣ್ಯಗಳು ನಮ್ಮ ಹಿಂದಿನ ಚರಿತ್ರೆ ತಿಳಿಸುವ ದಾಖಲೆಗಳಾಗಿವೆ ಎಂದರು. ಬಹು ಸಂಸ್ಕೃತಿಯನ್ನು ಬಿಂಬಿಸುವ ಇತಿಹಾಸದ ಆಧಾರಗಳು ನಾಶವಾದರೆ ನಮ್ಮ ಪರಂಪರೆಯೇ ಹಾಳಾದಂತೆ. ಆದ್ದರಿಂದ ನಮ್ಮ ಸುತ್ತಲಿರುವ ಐತಿಹಾಸಿಕ ಚರಿತ್ರೆಗಳ ಬಗ್ಗೆ ಅಲಕ್ಷಿಸಬಾರದು ಎಂದು ಹೇಳಿದರು.
ಕರ್ನಾಟಕ ಇತಿಹಾಸ ಅಕಾಡೆಮಿ ಅಧ್ಯಕ್ಷ ಡಾ. ದೇವರ ಕೊಂಡಾರೆಡ್ಡಿ ಮಾತನಾಡಿ, ಇತಿಹಾಸ ಮರೆತವರು ಇತಿಹಾಸ ನಿರ್ಮಿಸಲಾರರು. ನಮ್ಮ ಪರಂಪರೆಯ ಪ್ರತೀಕಗಳಾದ ಸ್ಮಾರಕಗಳು, ವೀರಗಲ್ಲು, ಶಾಸನಗಳು ಹಾಗೂ ಕೆರೆ-ಕಟ್ಟೆಗಳನ್ನು ರಕ್ಷಿಸಬೇಕು ಎಂದು ಹೇಳಿದರು.
ವಿದ್ಯಾರ್ಥಿಗಳು ಐತಿಹಾಸಿಕ ಪ್ರಜ್ಞೆಯ ಬಗ್ಗೆ ಜಾಗೃತಿ ಯಾಗಬೇಕು. ಕಣ್ಣಿಗೆ ಕಾಣುವ ಶಿಲ್ಪ ಕಲೆ, ಶಾಸನಗಳು ಮತ್ತು ಸ್ಮಾರಕಗಳೆಡೆ ಗಮನಹರಿಸಿ, ಅವುಗಳಲ್ಲಡಗಿದ ಇತಿಹಾಸ ಜ್ಞಾನ ತಿಳಿಯಬೇಕು ಎಂದು ಹೇಳಿದರು.
ಎಡಿಬಿ ಪ್ರಥಮ ದರ್ಜೆ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಮೋಹನ ರೆಡ್ಡಿ ಮಾತನಾಡಿ, ಅಳಿವಿನಂಚಿನಲ್ಲಿರುವ ಶಿಲಾ ಶಾಸನಗಳನ್ನು ಸಂಗ್ರಹಿಸುವ ಜತೆಗೆ ರಕ್ಷಣೆ ಮಾಡಬೇಕು ಎಂದರು. ಇತಿಹಾಸವು ವಿಜ್ಞಾನವಿದ್ದಂತೆ. ನಿಖರ ದತ್ತಾಂಶ ಮಾಹಿತಿಯ ಮೇಲೆ ಇತಿಹಾಸ ರಚನೆಯಾಗಿದೆಯೇ ವಿನಃ ಊಹಾ ಪೋಹಗಳಿಂದಲ್ಲ ಎಂದು ಹೇಳಿದರು.
ಈ ವೇಳೆ ಎಡಿಬಿ ಕಾಲೇಜಿನ ಪ್ರಾಚಾರ್ಯ ಸಿದ್ದಲಿಂಗ ಮೂರ್ತಿ, ಡಾ.ಡಿ. ತಿಪ್ಪೇಸ್ವಾಮಿ, ಡಾ. ಸಂಧ್ಯಾ, ಬಿ.ಕೆ. ಧನಪಾಲ್, ಬಸವರಾಜ್, ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ರೇಣುಕ ಪ್ರಸಾದ್ ಕಲ್ಮಠ, ಮತ್ತಿತರರಿದ್ದರು.