ಹಸಿದವರ ದಾಹ ತಣಿಸಿದರೆ ದೇವರ ಅನುಗ್ರಹ ಪ್ರಾಪ್ತಿ

ಹಸಿದವರ ದಾಹ ತಣಿಸಿದರೆ ದೇವರ ಅನುಗ್ರಹ ಪ್ರಾಪ್ತಿ

ಚಿಂದೋಡಿ ಎಸ್‌. ವೀರಣ್ಣ ಮತ್ತು ಕುಟುಂಬದವರ ಜಂಗಮ ದಾಸೋಹ ಸೇವೆಯ ಶತಮಾನೋತ್ಸವ ಕಾರ್ಯಕ್ರಮದಲ್ಲಿ ವಿರಕ್ತಮಠದ ಶ್ರೀ ಬಸವ ಪ್ರಭು ಸ್ವಾಮೀಜಿ

ದಾವಣಗೆರೆ, ಆ.29- ಹಸಿದವರ ದಾಹ ತಣಿಸುವ ವ್ಯಕ್ತಿಗೆ ದೇವರ ಅನುಗ್ರಹ ಪ್ರಾಪ್ತಿಯಾಗತ್ತದೆ ಎಂದು ವಿರಕ್ತ ಮಠದ ಶ್ರೀ ಬಸವ ಪ್ರಭು ಸ್ವಾಮೀಜಿ ತಿಳಿಸಿದರು.

ನಗರದ ಹಳೇ ಪೇಟೆಯಲ್ಲಿರುವ ಚಿಂದೋಡಿ ಎಸ್‌. ವೀರಣ್ಣ ಮತ್ತು ಕುಟುಂಬದವರ ನಿವಾಸದಲ್ಲಿ ಗುರುವಾರ ಆಯೋಜಿಸಿದ್ದ ಜಂಗಮ ದಾಸೋಹ ಸೇವೆಯ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಶ್ರೀಗಳು ಆಶೀರ್ವಚನ ನೀಡಿದರು.

ದಾಸೋಹ ನಡೆಸುವ ಕಾರ್ಯ ಸಾಹಸಮಯ, ಮಠಗಳೇ ದಾಸೋಹ ಕಾರ್ಯ ಮಾಡಲು ಕಷ್ಟ ಪಡುವ ಈ ಕಾಲದಲ್ಲಿ ಶತಮಾನಗಳಿಂದ ಚಿಂದೋಡಿ ಮನೆತನ ಶ್ರಾವಣ ಮಾಸದಲ್ಲಿ 1 ತಿಂಗಳು ಜಂಗಮ ದಾಸೋಹ ಮಾಡುತ್ತಿರುವುದು ಶ್ಲ್ಯಾಘನಿಯ ಎಂದರು.

12ನೇ ಶತಮಾನದಲ್ಲಿ ಬಸವಣ್ಣ ನೀಡಿರುವಂತಹ `ಕಾಯಕ ಮತ್ತು ದಾಸೋಹ’ ಎಂಬ ಅಂಶ ಅಮೂಲ್ಯ ತತ್ವಗಳಾಗಿವೆ. ಇಂತಹ ಆದರ್ಶ ತತ್ವವನ್ನು 1924ರಲ್ಲಿ ಶಾಂತ ವೀರಪ್ಪ ಮತ್ತು ಶಾಂತ ವೀರಮ್ಮ ಪ್ರಾರಂಭಿಸಿದರು ಎಂದು ತಿಳಿಸಿದರು. ರಂಗಭೂಮಿ ಉಳಿಸುವ ಹಾಗೂ ಕಲಾವಿದರನ್ನು ಬೆಳೆಸುವ ಕಾರ್ಯದಿಂದ ದೇಶಕ್ಕೆ ಚಿಂದೋಡಿ ಮನೆತನ ಪರಿಚಿತವಾಗಿದೆ ಎಂದು ಹೇಳಿದರು.

ಆವರಗೊಳ್ಳ ಪುರವರ್ಗ ಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಮೂಲತಃ ಅಣ್ಣಿಗೆರೆ ಮನೆತನದ ಶಾಂತ ವೀರಪ್ಪ ಹಾಗೂ ಶಾಂತ ವೀರಮ್ಮ ಅವರು ಹಸಿವಿನ ನಿಜವಾದ ಬೆಲೆ ತಿಳಿದು ಪ್ರತಿ ಶ್ರಾವಣದಲ್ಲಿ ಜಂಗಮರ ಹಸಿವು ನೀಗಿಸುವ ಕಾರ್ಯ ಪ್ರಾರಂಭಿಸಿದರು ಎಂದರು.

ಒಬ್ಬ ಶಿವಯೋಗಿ ತೃಪ್ತಿಯಾದರೆ ಸಾಕ್ಷಾತ್‌ ಶಿವನೇ ತೃಪ್ತಿಯಾಗುತ್ತಾನೆ. ಜಂಗಮರಿಗೆ ದಾಸೋಹ ಮಾಡಿದ ಪುಣ್ಯದ ಫಲ ಈ ಮನೆತನವನ್ನು ಕಾಪಾಡಲಿದೆ ಎಂದು ಹೇಳಿದರು.

ಚಿಂದೋಡಿ ಮನೆತನವು ಕಲಾರಾಧನೆ ಮಾಡುವ ಮೂಲಕ ಕಲಾಕ್ಷೇತ್ರಕ್ಕೆ ಸಾಕಷ್ಟು ಕೊಡುಗೆ ನೀಡಿದೆ. ಅನೇಕ ಕಲಾವಿದರ ಕುಟುಂಬಕ್ಕೆ ಬದುಕು ಕಟ್ಟಿಕೊಟ್ಟಿದೆ ಎಂದರು.

ಉಕ್ಕಡಗಾತ್ರಿ ದೇವಸ್ಥಾನ ಟ್ರಸ್ಟಿನ ಕಾರ್ಯದರ್ಶಿ ಸುರೇಶ್‌ ಮಾತನಾಡಿ, ಮನೆತನಗಳು ದಾಸೋಹ ಕಾರ್ಯ ನಡೆಸುವುದು ವಿರಳ. ಆದರೆ ಈ ಕುಟುಂಬವು ದಾಸೋಹ ಕಾರ್ಯಕ್ರಮದ ಜತೆಗೆ ವೃತ್ತಿರಂಗ ಹಾಗೂ ಧರ್ಮರಂಗಕ್ಕೆ ಕೊಡುಗೆ ನೀಡುತ್ತಾ ಬಂದಿದೆ ಎಂದು ಹೇಳಿದರು.

ಕುಟುಂಬದ ಹಿರಿಯ ಸದಸ್ಯ ಬಂಗಾರೇಶ್‌ ಪ್ರಾಸ್ತಾವಿಕ ಮಾತನಾಡಿದರು. ಆಂಧ್ರಪ್ರದೇಶದ ಉರುಗಾದ್ರಿ ಸಂಸ್ಥಾನ ಮಠದ ಕರಿಬಸವ ರಾಜೇಂದ್ರ ಶ್ರೀಗಳು, ಕುಟುಂಬದ ಹಿರಿಯ ಸದಸ್ಯರಾದ ಪಾರ್ವತಮ್ಮ, ವೀರೇಶ್‌, ರಾಜಣ್ಣ, ಮಧುಕೇಶ್‌, ಶಂಭುಲಿಂಗಪ್ಪ ಸೇರಿದಂತೆ ಕುಟುಂಬದ ಸದಸ್ಯರು ಇದ್ದರು.

error: Content is protected !!